ಅಕ್ರಮ ಆಧಾರ್ ಕಾರ್ಡ್ ಪಡೆದ ವಿದೇಶಿಗ​​​.!

ಮಂಗಳೂರು: ಮಲೇಷಿಯಾ ಮೂಲದ ವ್ಯಕ್ತಿಗೆ ಮಂಗಳೂರಿನಲ್ಲಿ ಆಧಾರ್ ಕಾರ್ಡ್ ಮಾಡಿಸಿಕೊಟ್ಟಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದ್ದು, ಇದರಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಶಾಮೀಲಾಗಿರೋ ಅನುಮಾನ ವ್ಯಕ್ತವಾಗಿದೆ. ಮಂಗಳೂರಿನಲ್ಲಿ ವೈದ್ಯಕೀಯ ಶಿಕ್ಷಣ ಪಡಿಯೋದಕ್ಕೆ ಸ್ಟಡಿ ವಿಸಾದಲ್ಲಿ ಬಂದಿರೋ ಮಲೇಷ್ಯಾದ ಹೋಹ್ ಜಿಯಾನ್ ಮೆಂಗ್(25) ಆಧಾರ್ ಕಾರ್ಡ್ ಪಡೆದುಕೊಂಡಿರೋ ವಿದೇಶಿ ಪ್ರಜೆ. ಈತ ವಿದೇಶಿ ಪ್ರಜೆಯಾಗಿದ್ದರೂ ಅಕ್ರಮವಾಗಿ ಇದೀಗ ಭಾರತೀಯ ಪ್ರಜೆ ಅಂತ ಗುರುತಿಸಿಕೊಂಡಿರೋದು ಗಂಭೀರ ವಿಚಾರ. ಒಬ್ಬ ವ್ಯಕ್ತಿ ಆಧಾರ್​​ಗೆ ಅರ್ಜಿ ಸಲ್ಲಿಸಿದಾಗ ಆತ ಭಾರತೀಯ ಪ್ರಜೆಯೇ ಅಂತ ದಾಖಲೆ ಪರಿಶೀಲಿಸೋ ಬದಲು ವಿದೇಶಿ ಪ್ರಜೆಗೆ ಆಧಾರ್ ನೀಡಲಾಗಿದೆ. ಮಂಗಳೂರಿನ ಬಲ್ಮಠದ ಮಹಾರಾಜ ಫ್ಲಾಟ್​​ನಲ್ಲಿ ಬಾಡಿಗೆಗೆ ನೆಲೆಸಿರೋ ಈತ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾನೆ. ದುರಂತ ಅಂದರೆ ಮಂಗಳೂರಿನ ಮಂಗಳೂರು ಒನ್ ಕೇಂದ್ರದಲ್ಲೇ ಆತನಿಗೆ ಆಧಾರ್ ಕಾರ್ಡ್ ನೀಡಲಾಗಿದೆ. ಮೂಲಗಳ ಪ್ರಕಾರ ಕೆಲ ತಿಂಗಳ ಹಿಂದೆ ಈತನ ಫ್ಲಾಟ್​​ಗೆ ಆಗಮಿಸಿದ್ದ ಮಹಿಳೆಯೊಬ್ಬರು ಈ ಆಧಾರ್ ಕಾರ್ಡ್ ಮಾಡಿಸಿಕೊಟ್ಟಿದ್ದು, ಇನ್ನೂ ಅನೇಕ ವಿದೇಶಿ ವಿದ್ಯಾರ್ಥಿಗಳಿಗೆ ಆಧಾರ್ ಮಾಡಿಸಿ ಕೊಟ್ಟಿರುವ ಅನುಮಾನ ವ್ಯಕ್ತವಾಗಿದೆ. ಇದರ ಹಿಂದೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಕೈವಾಡವಿದ್ದು, ಅಕ್ರಮ ಆಧಾರ್ ಕಾರ್ಡ್ ಮಾಡಿಸಿಕೊಂಡಿರೋ ವಿದ್ಯಾರ್ಥಿಯ ಬಂಧನವಾಗೋ ಸಾಧ್ಯತೆಯಿದೆ.

0

Leave a Reply

Your email address will not be published. Required fields are marked *