16ರಂದು ಪಂಡಿತ್ ರಾಜೀವ್ ತಾರಾನಾಥ್​ಗೆ ಅಭಿನಂದನೆ: ಸರೋದ್ ನುಡಿಸಲಿರುವ ರಾಜೀವ್

ಬೆಂಗಳೂರು: 86ರ ಹರೆಯದ ರಾಜೀವ್ ತಾರಾನಾಥರು ಅಪ್ರತಿಮ ಪ್ರತಿಭಾಶಾಲಿ. ಅವರು ಉಸ್ತಾದ್ ಅಲಿ ಅಕ್ಬರ್ ಖಾನ್ ಅವರ ಅತ್ಯಂತ ಹಿರಿಯ ಮತ್ತು ಅಸಾಮಾನ್ಯ ಶಿಷ್ಯ ಎಂದೇ ಪ್ರಸಿದ್ಧ. ತಮ್ಮ ಗುರುವಿನ ಬಳಿ 6 ವರ್ಷ ಸಂಗೀತದ ಅಭ್ಯಾಸ ನಡೆಸಿದ ನಂತರ ಕರ್ನಾಟಕಕ್ಕೆ ಮರಳಿದಾಗ ಅವರು ದಕ್ಷಿಣ ಭಾರತದ ಏಕೈಕ ಸರೋದ್ ವಾದಕರಾಗಿದ್ದರು. ಇಂತಹ ವಿಶಿಷ್ಟ ದಾಖಲೆ ಅವರ ಹೆಸರಿನಲ್ಲಿದೆ. ಸರೋದ್ ವಾದ್ಯದೊಂದಿಗೆ ಇವರ ನಿಕಟ ಸಂಬಂಧ ಈಗ 6 ದಶಕಗಳನ್ನು ಮೀರಿದೆ. ಇದು ಕೂಡ ನಿಜಕ್ಕೂ ಅಪರೂಪದ ದಾಖಲೆಯಾಗಿಯೇ ಉಳಿದಿದೆ.

ರಾಜೀವ್ ತಾರಾನಾಥರದು ಪಂಡಿತ ಕುಟುಂಬ. ಅವರು ಭಾರತದ ದೇಶದ ಅತ್ಯಂತ ಮೇರು ಸರೋದ್ ವಾದಕರಲ್ಲಿ ಒಬ್ಬರೆಂದು ನಿಸ್ಸಂದೇಹವಾಗಿ ಹೇಳಬಹುದು. ಅವರ ಸಂಗೀತದ ಸಾಧನೆಯಲ್ಲಿ ಕಠಿಣ ಪರಿಶ್ರಮ, ಸ್ಫೂರ್ತಿದಾಯಕ ಕಲ್ಪನಾಶಕ್ತಿ ಮತ್ತು ಭಾವನೆಗಳ ತೀವ್ರತೆಯ ಆಳವನ್ನು ಕಾಣಬಹುದು. ಅವರು ಸರೋದ್ ವಾದನದೊಂದಿಗೆ ಹಿಂದೂಸ್ತಾನಿ ಸಂಗೀತವನ್ನು ಸ್ಫೂರ್ತಿಯುತವಾಗಿ ಮತ್ತು ಭಾವನಾತ್ಮಕವಾಗಿ ಬೆಸೆಯುತ್ತಾರೆ. ಇವರ ಅಪೂರ್ವವಾದ ಸಾಧನೆಯನ್ನು ಗುರುತಿಸಿ ಭಾರತದಲ್ಲಿ ಮತ್ತು ವಿದೇಶಗಳಲ್ಲಿಯೂ ಮನ್ನಣೆ ದೊರೆತಿದೆ.

ಕರ್ನಾಟಕ ಸರ್ಕಾರ ‘ಸಂಗೀತ ವಿದ್ವಾನ್ ಪ್ರಶಸ್ತಿ’ (2018) ಮತ್ತು ಭಾರತ ಸರ್ಕಾರ ‘ಪದ್ಮಶ್ರೀ’ (2019)ಗಳನ್ನು ನೀಡಿ ಅವರನ್ನು ಗೌರವಿಸಿದೆ. ಈ ಸಂದರ್ಭದಲ್ಲಿ ಪಂಡಿತ್ ರಾಜೀವ್ ತಾರಾನಾಥ್ ಅವರಿಗೆ ಅಭಿನಂದನಾ ಸಮಾರಂಭವನ್ನು ದಿನಾಂಕ 16/03/2019ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 5:30ಕ್ಕೆ ಏರ್ಪಡಿಸಲಾಗಿದೆ.

ಕಾರ್ಯಕ್ರಮದಲ್ಲಿ ಐ.ಎಂ.ವಿಠ್ಠಲಮೂರ್ತಿ, ಉಸ್ತಾದ್ ಫಯಾಜ್ ಖಾನ್, ಸಿ.ಚಂದ್ರಶೇಖರ್ ಭಾಗವಹಿಸಲಿದ್ದಾರೆ. ಸಂಜೆ 5:30ಕ್ಕೆ ಗುರುವಂದನೆಯನ್ನು ಪಂಡಿತ್ ರಾಜೀವ್ ತಾರಾನಾಥ್, ಲಲಿತಾ ರಾವ್ ನಿಶಾಂತ್ ಪಣಿಕ್ಕರ್ ನಡೆಸಿಕೊಡಲಿದ್ದಾರೆ. ರಾತ್ರಿ 8 ಗಂಟೆಗೆ ರಾಜೀವ್ ತಾರಾನಾಥ್ ಅವರು ಸರೋದ್ ವಾದನ ನಡೆಸಿಕೊಡಲಿದ್ದಾರೆ. ನಂತರ ಅಭಿನಂದನೆ ನಡೆಯಲಿದೆ.

0

Leave a Reply

Your email address will not be published. Required fields are marked *