ಹುಟ್ಟುಹಬ್ಬದ ಸಂಭ್ರಮದಲ್ಲಿ ಫರ್ಹಾ ಖಾನ್​​

 xಇದುವರೆಗೆ 80 ಚಿತ್ರಗಳ ನೂರಾರು ಹಾಡುಗಳಿಗೆ ನೃತ್ಯ ನಿರ್ದೇಶಕಿಯಾಗಿರುವ ಫರ್ಹಾಗೆ ಸಿನಿಮಾ ರಕ್ತದಲ್ಲೇ ಇತ್ತು. ತಂದೆ ಕಮ್ರಾನ್ ಖಾನ್ ಸ್ಟಂಟ್ ಮ್ಯಾನ್ ಆಗಿ, ಫಿಲ್ಮ್ ಮೇಕರ್ ಆದವರು. ತಾಯಿ ಮೇನಕಾ ಇರಾನಿ. ಕಲಾವಿದೆಯರಾದ ಹನಿ ಇರಾನಿ, ಡೈಸಿ ಇರಾನಿಯವರ ಸಹೋದರಿ. ತಂದೆ, ಪಾರ್ಸಿ ತಾಯಿಗೆ ವಿಚ್ಛೇದನ ನೀಡಿದ ಮೇಲೆ ಕಷ್ಟದ ದಿನಗಳಲ್ಲೇ ಬೆಳೆದರು. ಹಾಸ್ಯನಟ, ನಿರ್ದೇಶಕ ಸಾಜಿದ್ ಖಾನ್ ಇವರ ಏಕೈಕ ಸಹೋದರ. ಮಾತ್ರವಲ್ಲ, ಇಂದು ಜಾವೇದ್ ಅಖ್ತರ್, ಫರ್ಹಾನ್ ಅಖ್ತರ್ ಮತ್ತು ಜೋಯಾ ಅಖ್ತರ್ ಮೊದಲಾದವರು ಇವರ ಸಂಬಂಧಿಕರು.

ಫರ್ಹಾ ಕಾಲೇಜ್ ವಿದ್ಯಾರ್ಥಿನಿಯಾಗಿದ್ದಾಗ ಟಿವಿಯಲ್ಲಿ ಮೈಕಲ್ ಜಾಕ್ಸನ್ನ ಥ್ರಿಲ್ಲರ್ ಆಲ್ಬಮ್ ನೋಡಿ ಡ್ಯಾನ್ಸ್ ನಲ್ಲಿ ಆಸಕ್ತಿ ಪಡೆದುಕೊಂಡರು. ಅದುವರೆಗೆ ಎಂದೂ ನೃತ್ಯ ಮಾಡಿರದ ಆಕೆ, ಖುದ್ದಾಗಿ ಮನೆಯಲ್ಲಿ ನೃತ್ಯ ಕಲಿಕೆ ಶುರು ಮಾಡಿದರು. ಮಾತ್ರವಲ್ಲ, ಒಂದು ಡಾನ್ಸ್ ಟ್ರೂಪನ್ನೇ ಕಟ್ಟಿಕೊಂಡರು. ಮುಂದೆ ಆಮೀರ್ ಖಾನ್ ನಾಯಕನಾದ ಜೊ ಜೀತಾ ವಹೀ ಸಿಕಂದರ್ ಚಿತ್ರದ ಮೂಲಕ ನೃತ್ಯ ನಿರ್ದೇಶಕಿಯಾದರು.

1994ರಲ್ಲಿ ಕಭೀ ಹಾ ಕಭೀ ನಾ ಎಂಬ ಚಿತ್ರದ ಸೆಟ್‍ ನಲ್ಲಿ ಫರ್ಹಾಗೆ ಶಾರುಖ್ ಖಾನ್ ಪರಿಚಿತರಾದರು. ಅಲ್ಲಿಂದಲೇ ಇಬ್ಬರೂ ಆತ್ಮೀಯರಾದರು. ಶಾರುಖ್ ನಿರ್ಮಾಣ ಸಹಭಾಗಿತ್ವದ ಮೈ ಹೂನಾ ಮೂಲಕವೇ ಫರ್ಹಾ ನಿರ್ದೇಶಕಿಯಾದರು. ಆಕೆ ನಿರ್ದೇಶಿಸಿದ ಎರಡನೆಯ ಚಿತ್ರ ಓಂ ಶಾಂತಿ ಓಂನಲ್ಲಿ ಕರ್ನಾಟಕದ ಕರಾವಳಿಯ ಹುಡುಗಿ ದೀಪಿಕಾ ಪಡುಕೋಣೆ ಬಾಲಿವುಡ್‍ ಗೆ ಪಾದಾರ್ಪಣೆ ಮಾಡಿದರು. ಓಂ ಶಾಂತಿ ಓಂ ಅದುವರೆಗಿನ ಯಾವ ಹಿಂದಿ ಚಿತ್ರವೂ ಮಾಡಿರದಷ್ಟು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿತು.

ಫರ್ಹಾ ದೀಪಿಕಾಗೆ ಬಾಲಿವುಡ್ ನಲ್ಲಿ ಲೈಫ್ ನೀಡುವ ಮುನ್ನ. ಕರಾವಳಿಯೊಂದಿಗೆ ಲೈಫ್ ಟೈಮ್ ಸಂಬಂಧ ಬೆಳೆಸಿಕೊಂಡಿದ್ದರು. ಅವರೇ ಮೈ ಹೂ ನಾ ಚಿತ್ರದ ಸಂಕಲನಕಾರ ಶಿರಿಶ್ ಕುಂದರ್. ಅವರು ಮಂಗಳೂರಲ್ಲಿ ಜನಿಸಿ, ಧಾರಾವಾಡದ ಎಸ್ ಡಿಎಂ ಕಾಲೇಜಲ್ಲಿ ಇಂಜಿನಿಯರಿಂಗ್ ಮಾಡಿ, ಮುಂಬೈನಲ್ಲಿ ವೃತ್ತಿಯಲ್ಲಿದ್ದವರು. ವಯಸ್ಸಲ್ಲಿ ಶಿರೀಶ್ ಕುಂದರ್ ಫರ್ಹಾಗಿಂತ ಏಳೆಂಟು ವರ್ಷ ಚಿಕ್ಕವರು. ಆದರೂ ಸಂಕಲನದೊಂದಿಗೆ ಪ್ರೇಮದ ಸಮ್ಮಿಲನವಾಯಿತು. ಶಿರಿಶ್ ಗೆ ಪತ್ನಿಯಾದ ಫರ್ಹಾ, ತ್ರಿವಳಿ ಮಕ್ಕಳ ತಾಯಿಯಾದರು..! ಮುಂದೆ ತೀಸ್ ಮಾರ್​ ಖಾನ್​ ನಂಥ ಸಿನಿಮಾಗಳಲ್ಲಿ ಜೊತೆ ಜೊತೆಯಾಗೇ ತೊಡಗಿಸಿಕೊಂಡರು.

ಚಿತ್ರಗಳಲ್ಲಿ ನೃತ್ಯ ನಿರ್ದೇಶನ, ನಿರ್ದೇಶನ, ನಟನೆ ಎಲ್ಲವನ್ನೂ ಮಾಡಿದ ಫರ್ಹಾ ಖಾನ್​, ದಕ್ಷಿಣದಲ್ಲಿ ಮೋಹನ್ ಲಾಲ್ ಐಶ್ವರ್ಯಾ ರೈ ನಟನೆಯ ಇರುವರ್, ಪ್ರಭುದೇವ್ ನಟನೆಯ ಮಿನ್ಸಾರ ಕನವು, ಮಾಧವನ್ ನಟನೆಯ ಅಲೈಪಾಯುದೇ, ವಿಜಯ್ ನಟನೆಯ ನನ್ಬನ್ ಮೊದಲಾದ ಚಿತ್ರಗಳಿಂದ ದಕ್ಷಿಣದ ಮಂದಿಗೂ ಆಪ್ತರಾದರು. ಹಾಲಿವುಡ್ ಮತ್ತು ಚೈನೀಸ್‍ ಚಿತ್ರಗಳಿಗೂ ಕೆಲಸ ಮಾಡಿದರು. ಕಿರುತೆರೆಯ ಜನಪ್ರಿಯ ಡಾನ್ಸ್ ಶೋಗಳಾದ ಡಾನ್ಸ್ ಇಂಡಿಯಾ ಡಾನ್ಸ್, ನಚ್ ಬಲಿಯೇ ಮತ್ತಿತರ ಕಾಮಿಡಿ ಶೋಗಳಲ್ಲೂ ಸುದ್ದಿಯಾದರು.

ಸ್ವತಃ ಟಿವಿ ನೋಡಿ ನೃತ್ಯ ಆರಂಭಿಸಿದ ಫರ್ಹಾ ಖಾನ್, ಪಾಪ್ ಸ್ಟಾರ್ ಶಕೀರಾಗು ಕೊರಿಯಾಗ್ರಫಿ ಮಾಡುವಷ್ಟು ಬೆಳೆದರು. ಕೋಯಿ ಮಿಲ್ ಗಯಾ ಚಿತ್ರದ (ಇದರ್ ಚಲಾ ಮೆ ಉದರ್ ಚಲಾ) ಹಾಡಿಗೆ ರಾಷ್ಟ್ರ ಪ್ರಶಸ್ತಿ ಪಡೆದು ಇತಿಹಾಸ ಸೃಷ್ಟಿಸಿದರು. ಇದುವರೆಗೆ ಫರ್ಹಾ ಒಟ್ಟು 6 ಬಾರಿ ಫಿಲ್ಮ್ ಫೇರ್ ಅವಾರ್ಡ್ ಪಡೆದಿದ್ದಾರೆ. ವಿರಾಸತ್‍ ನ ಡೋಲ್ ಬಜ್ನೇ ಲಗಾ, ದಿಲ್ ಸೆಯ ಚಯ್ಯ ಚಯ್ಯ ಹಾಡು, (ಓ ಲಡ್ಕಿ ಹೈ ಕಹಾಂ) ದಿಲ್ ಚಾಹ್ತಾ ಹೈ, ತೀಸ್ ಮಾರ್ ಖಾನ್ ಶೀಲ ಕಿ ಜವಾನಿ, ದಬಂಗ್ 2 ನ ಫೆವಿಕಾಲ್‍ ಸೆ ಹಾಡುಗಳು ಫಿಲ್ಮ್ ಫೇರ್​ಗೆ ಅರ್ಹವಾದವು. ಇಂಥ ಪ್ರತಿಭಾವಂತೆಯಿಂದ ಇನ್ನಷ್ಟು ಚಿತ್ರ, ಹಾಡುಗಳು ಬರಲಿ ಎಂಬುದೇ ಅಭಿಮಾನಿಗಳ ಹಾರೈಕೆ.

ಶಶಿಕರ ಪಾತೂರು. ಸುದ್ದಿ ಟಿವಿ ಫಿಲ್ಮ್ ಬ್ಯೂರೋ

0

Leave a Reply

Your email address will not be published. Required fields are marked *