ಪ್ರಧಾನಿ ಮೋದಿ ನಾಲಿಗೆ ನಿಯಂತ್ರಿಸಿ ಎಂದ ಮನಮೋಹನ್ ಸಿಂಗ್

ದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ರಾಷ್ಟ್ರಪತಿಗೆ ದೂರು ನೀಡಿದ್ದಾರೆ. ಪ್ರಧಾನಿ ಬೆದರಿಕೆಯ ಭಾಷೆಯನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಪ್ರಧಾನಿಯವರಿಗೆ ಅನವಶ್ಯಕವಾಗಿ ಬೆದರಿಸುವ ಭಾಷೆಯನ್ನು ಕಾಂಗ್ರೆಸ್ ನಾಯಕರು ಅಥವಾ ಇನ್ನಿತರ ಪಕ್ಷಗಳ ನಾಯಕರ ವಿರುದ್ಧ ಬಳಸದಂತೆ ಎಚ್ಚರಿಕೆ ನೀಡಿ ಎಂದು ಮನವಿ ಮಾಡಿದ್ದಾರೆ. ಮೇ 6ರಂದು ಕರ್ನಾಟಕದಲ್ಲಿ ಮೋದಿಯವರು ಮಾಡಿದ ಭಾಷಣಕ್ಕೆ ಮನಮೋಹನ್ ಸಿಂಗ್ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಪ್ರಧಾನಿ ಬಳಸುತ್ತಿರುವ ಭಾಷೆ ಅವರ ಸ್ಥಾನದ ಘನತೆಗೆ ತಕ್ಕನಾಗಿಲ್ಲ ಎಂದು ಕೂಡ ಅವರು ಪತ್ರದಲ್ಲಿ ಬರೆದಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಸಲ್ಲಿಸಿದ್ದಾರೆ.

ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸಂಸದರು ರಾಷ್ಟ್ರಪತಿಯವರಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದು, ಪ್ರಧಾನಿಯವರ ಮಾತುಗಳನ್ನು ಕೇಳಿ ನನಗೆ ದುಃಖವಾಗುತ್ತದೆ ಎಂದಿರುವ ಮನಮೋಹನ್ ಸಿಂಗ್, ಕೇಂದ್ರ ಸರ್ಕಾರದ ಕೊರತೆಗಳನ್ನು ಎತ್ತಿ ತೋರಿಸಿದ ಸಂದರ್ಭದಲ್ಲಿ, ಸಮಸ್ಯೆಗಳನ್ನು ಪರಿಹರಿಸುವ ಬದಲು ಸರ್ಕಾರ ಭಿನ್ನಮತವನ್ನು ಹತ್ತಿಕ್ಕಲಾಗುತ್ತಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಮ್ಮ ನೇರಕ್ಕೇ ಎಲ್ಲವೂ ನಡೆಯಬೇಕು ಎಂದು ಪ್ರಯತ್ನಿಸುತ್ತಿದೆ. ಆದರೆ, ಅವರ ಅನೇಕ ಇರಾದೆಗಳಿಂದ ದೇಶಕ್ಕೆ ಭಾರೀ ನಷ್ಟ ಉಂಟಾಗಿದೆ ಎಂದು ಅವರು ಆರೋಪಿಸಿದ್ದಾರೆ. ವಿಶ್ಲೇಷಣೆಯ ಕೊರತೆಯಿಂದಾಗಿ ನಮ್ಮ ಸಾಮೂಹಿಕ ಭವಿಷ್ಯದ ಮೇಲೆ ತೀವ್ರವಾದ ಪ್ರಭಾವ ಉಂಟಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಅಲ್ಲದೇ, ದೇಶದ ಜಿಡಿಪಿ ದರ ಒಂದು ಕಾಲಕ್ಕೆ 9 ಅಂಶಗಳಿದ್ದರೆ, ಈಗ ತೀವ್ರ ಪ್ರಮಾಣದಲ್ಲಿ ಕುಸಿದಿದೆ ಎಂದು ಆರ್ಥಿಕ ಕುಸಿತದ ವಿಷಯವನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಧನ ದರ ಕುಸಿದಿದೆ. ಆದರೆ, ಇದರ ಲಾಭ ಜನರಿಗೆ ಸಿಗುತ್ತಿಲ್ಲ ಎಂದಿದ್ದಾರೆ.

ಕರ್ನಾಟಕದಲ್ಲಿ ವಿಧಾನಸಭೆಯ ಪ್ರಚಾರ ಸಭೆಗಳಲ್ಲಿ ಕೂಡ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಪರಸ್ಪರ ಆರೋಪ – ಪ್ರತ್ಯಾರೋಪಗಳ ಮಳೆ ಸುರಿದಿತ್ತು. ಮಾಜಿ ಪ್ರಧಾನಿ ನೆಹರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ವಿರುದ್ಧ ಮೋದಿ ವಾಗ್ದಾಳಿ ನಡೆಸಿದ್ದರು. ಭಗತ್ ಸಿಂಗ್ ಸೆರೆಮನೆಯಲ್ಲಿದ್ದ ವೇಳೆ ಯಾವುದೇ ಕಾಂಗ್ರೆಸ್ ನಾಯಕರು ಸೆರೆಮನೆಗೆ ಭೇಟಿ ನೀಡಲಿಲ್ಲ ಎಂದು ಅವರು ಆರೋಪಿಸಿದ್ದರು. ಆದರೆ, ವಾಸ್ತವದಲ್ಲಿ ನೆಹರು ಭಗತ್ ಸಿಂಗ್, ಸುಖ್​​ದೇವ್, ರಾಜಗುರು ಅವರನ್ನು ಭೇಟಿಯಾಗಿದ್ದರು. ಈ ವಿಷಯವನ್ನು ಸ್ವತಃ ನೆಹರೂ ಅವರೇ ತಮ್ಮ ಆತ್ಮಕತೆಯಲ್ಲಿ ದಾಖಲಿಸಿದ್ದಾರೆ.

ಇನ್ನು ಜನರಲ್ ತಿಮ್ಮಯ್ಯನವರಿಗೆ ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರು ಮತ್ತು ರಕ್ಷಣಾ ಸಚಿವ ಕೃಷ್ಣ ಮೆನನ್ ಅವರು ಅವಮಾನ ಮಾಡಿದ್ದರು ಎನ್ನುವ ಮೂಲಕ ಕಾಂಗ್ರೆಸ್ ಮತ್ತು ಪಕ್ಷದ ನಾಯಕರ ವಿರುದ್ಧ ಸುಳ್ಳು ಮಾಹಿತಿಗಳನ್ನು ಬಹಿರಂಗ ಪ್ರಚಾರ ಸಭೆಗಳಲ್ಲಿ ನೀಡಿದ್ದರು. ಈ ಕುರಿತು ಮಹಿಳೆಯೊಬ್ಬರು ನಿಜವಾದ ಸಂಗತಿ ಯಾವುದು? ಸುಳ್ಳು ಸಂಗತಿ ಯಾವುದು? ದಾಖಲೆ ಸಮೇತ ವಿವರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್, ವಾಟ್ಸ್​​ಅಪ್, ಟ್ವೀಟರ್, ಯೂಟ್ಯೂಬ್​ಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿ, ಪ್ರಧಾನಿ ಮೋದಿಯವರ ಸುಳ್ಳುಗಳ ಕುರಿತು ಸಾಕಷ್ಟು ಟೀಕೆಗಳು ಎದುರಾಗಿದ್ದವು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *