ನಾಳೆಯಿಂದ ಇಂಗ್ಲಂಡ್​- ಭಾರತ ಒನ್​ಡೇ ಸಿರೀಸ್

ಟೀಮ್​ ಇಂಡಿಯಾ ನಾಳೆಯಿಂದ ಇಂಗ್ಲೆಂಡ್​ ವಿರುದ್ಧ ಮತ್ತೊಂದು ಅಗ್ನಿ ಪರೀಕ್ಷೆ ಸಿದ್ಧವಾಗಿದೆ. ಚುಟುಕು ಸರಣಿಯನ್ನು ಗೆದ್ದ ಟೀಮ್​ ಇಂಡಿಯಾ, ಏಕದಿನ ಕ್ರಿಕೆಟ್​ನಲ್ಲಿ ಮೇಲುಗೈ ಸಾಧಿಸಲು ಪ್ಲಾನ್ ಮಾಡಿಕೊಂಡಿದೆ. ಹಾಗಿದ್ರೆ ಕೊಹ್ಲಿ ಪಡೆಯ ಮುಂದಿನ ಸವಾಲುಗಳು ಏನು ಎಂಬ ಬಗ್ಗೆ ವರದಿ ಇಲ್ಲಿದೆ.

ಇಂಗ್ಲೆಂಡ್​ ಪ್ರವಾಸದ ಮೊದಲ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್​​ನಲ್ಲಿ ಪಾಸ್​​ ಆಗಿರುವ ಟೀಮ್​ ಇಂಡಿಯಾ ಎರಡನೇ ಪರೀಕ್ಷೆಯನ್ನು ಎದುರು ನೋಡ್ತಾ ಇದೆ. ನಾಟಿಂಗ್​ಹ್ಯಾಮ್​ ಅಂಗಳದಲ್ಲಿ ನಡೆಯಲಿರುವ ಏಕದಿನ ಫೈಟ್​​ನ ಮೊದಲ ಪಂದ್ಯ ಎಲ್ಲರ ಚಿತ್ತ ಕದ್ದಿದೆ. ತವರಿನಲ್ಲಿ ಟಿ-20 ಸರಣಿ ಸೋತು ಮುಖಭಂಗ ಅನುಭವಿಸಿರುವ ಇಂಗ್ಲೆಂಡ್​​, ಪುಟಿದೇಳುವ ವಿಶ್ವಾಸದಲ್ಲಿದೆ. ಕೊಹ್ಲಿ ಪಡೆ, ಏಕದಿನ ಪಂದ್ಯದಲ್ಲಿ ಮಾರ್ಗನ್​ ಪಡೆಯ ಸವಾಲು ಮೀರಿ ನಿಲ್ಲುವ ಲೆಕ್ಕಾಚಾರ ಹಾಕಿಕೊಂಡಿದೆ.

ಏಕದಿನ ರ‍್ಯಾಂಕಿಂಗ್​​ನಲ್ಲಿ ಎರಡೂ ತಂಡಗಳು ಟಾಪ್​ ಸ್ಥಾನವನ್ನು ಗಳಿಸಿದ್ದು, ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಇಂಗ್ಲೆಂಡ್​ 126 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಟೀಮ್​ ಇಂಡಿಯಾ 122 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ವಿಶ್ವಕಪ್​​ ದೃಷ್ಠಿಯಿಂದ ತಂಡದ ಬೆಂಚ್​ ಸ್ಟ್ರೆಂತ್​ ಪರೀಕ್ಷಿಸಲು ಕೊಹ್ಲಿ ಪಡೆ ಪ್ಲಾನ್ ಮಾಡಿಕೊಂಡಿದೆ. ಗುರುವಾರದಿಂದ ಆರಂಭವಾಗಲಿರುವ ಏಕದಿನ ಸರಣಿಯಲ್ಲಿ ಭಾರತ ಮೇಲುಗೈ ಸಾಧಿಸಿದ್ದೇ ಆದಲ್ಲಿ ರ‍್ಯಾಂಕಿಂಗ್​​ನಲ್ಲಿ ಬಡ್ತಿ ಪಡೆಯುವ ಕನಸು ಕಾಣಬಹುದು.

ಎಸ್​​.. ಚುಟುಕು ಕ್ರಿಕೆಟ್​ನಲ್ಲಿ ಅಬ್ಬರಿಸಬೇಕಿದ್ದ ಟೀಮ್​ ಇಂಡಿಯಾ ಓಪನರ್​ ಶಿಖರ್​ ಧವನ್​ ಮಕಾಡೆ ಮಲಗಿದ್ದಾರೆ. ಎರಡು ಪಂದ್ಯದಲ್ಲಿ ರನ್​ ಬರ ಅನುಭವಿಸಿದ್ದ ರೋಹಿತ್​ ಶರ್ಮಾ, ಮೂರನೇ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದಾರೆ. ಈ ಇಬ್ಬರು ಸ್ಟಾರ್ ಬ್ಯಾಟ್ಸ್​ಮನ್​​ಗಳು ತಂಡಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟಲ್ಲಿ ಬಿಗ್​ ಸ್ಕೋರ್​ ನಿರೀಕ್ಷೆ ಇದೆ.

ಇನ್ನು ವಿಶ್ವಕಪ್​ ದೃಷ್ಠಿಯಿಂದ ತಂಡದಲ್ಲಿ ಬದಲವಾಣೆ ನಡೆದಿದೆ ಎಂದು ವಿರಾಟ್​ ಕೊಹ್ಲಿ ಈ ಮೊದಲೇ ಹೇಳಿಕೆ ನೀಡಿದ್ರು. ಅದ್ರಂತೆ ಟಿ-20 ಫಾರ್ಮೆಟ್​​ನಲ್ಲಿ ವಿರಾಟ್​ ತಮ್ಮ ಸ್ಥಾನವನ್ನು ರಾಹುಲ್​​ಗೆ ಬಿಟ್ಟು ಕೊಟ್ಟಿದ್ದರು. ಆದ್ರೆ, 50 ಓವರ್​​​ಗಳ ಆಟದಲ್ಲಿ ಮುರನೇ ಸ್ಥಾನದಲ್ಲಿ ವಿರಾಟ್​ ಬ್ಯಾಟ್​ ಬೀಸುವ ನಿರೀಕ್ಷೆ ಇದೆ. ಆದ್ರೆ, ನಾಲ್ಕನೇ ಸ್ಥಾನದಲ್ಲಿ ಯಾರು ಎಂಬ ಚಿಂತೆ ಇನ್ನು ತಂಡದಲ್ಲಿ ಮನೆ ಮಾಡಿದೆ. ಚುಟುಕು ಸರಣಿಯಲ್ಲಿ ಆರ್ಭಟಿಸಿದ್ದ ಕನ್ನಡಿಗ ಕೆ.ಎಲ್​ ರಾಹುಲ್​ ಹಾಗೂ ಸುರೇಶ್​ ರೈನಾ ಈ ಸ್ಥಾನದ ಮೇಲೆ ಕಣ್ಣು ನೆಟ್ಟಿದ್ದಾರೆ.

ರಾಹುಲ್​ ಟಿ-20 ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದು, ನಿಜ. ಆದ್ರೆ, ನಾಲ್ಕನೇ ಕ್ರಮಾಂಕದಲ್ಲಿ ಇವರ ಬ್ಯಾಟ್ ಸದ್ದು ಮಾಡಿಲ್ಲ ಎಂಬುದು ಸತ್ಯ. ಹೀಗಾಗಿ ಈ ಸ್ಥಾನದಲ್ಲಿ ರೈನಾ ಕಾಣಿಸಿಕೊಂಡ್ರೆ ಅಚ್ಚರಿಏನು ಇಲ್ಲ. ರೈನಾ 45 ಏಕದಿನ ಪಂದ್ಯಗಳಲ್ಲಿ 4ನೇ ಸ್ಥಾನದಲ್ಲಿ ಆಡಿದ್ದಾರೆ. 35.46ರ ಸರಾಸರಿಯಲ್ಲಿ ರನ್​ ಕಲೆ ಹಾಕಿರುವ ರೈನಾ 5 ಶತಕ ಬಾರಿಸಿ ಸಂಭ್ರಮಿಸಿದ್ದಾರೆ. ಈ ಲೆಕ್ಕಾಚಾರ ನೋಡಿದ್ರೆ ರೈನಾಗೆ ಈ ಸ್ಥಾನ ಸಿಗುವ ಸಾಧ್ಯತೆ ದಟ್ಟವಾಗಿದೆ.

ಚುಟುಕು ಸರಣಿಯ ಆರಂಭದ ಪಂದ್ಯದಲ್ಲಿ ಐದು ವಿಕೆಟ್​ ಪಡೆದು ಇಂಗ್ಲೆಂಡ್​ ಬ್ಯಾಟ್ಸ್​ಮನ್ಸ್​​ಗಳನ್ನು ಕಾಡಿದ್ದ, ರಿಸ್ಟ್​ ಸ್ಪಿನ್​ ಬೌಲರ್​ ಕುಲ್ದೀಪ್​ ಯಾದವ್​, ಎರಡನೇ ಪಂದ್ಯದಲ್ಲಿ ವಿಕೆಟ್​ ಬೇಟೆಯಲ್ಲಿ ಹಿಂದೆ ಬಿದ್ದಿದ್ದರು. ಹೀಗಾಗಿ ಮೂರನೇ ಪಂದ್ಯದಿಂದ ಇವರನ್ನು ಕೈ ಬಿಡಲಾಗಿತ್ತು. ಚಹಾಲ್ ಸ್ಥಿರ ಪ್ರದರ್ಶನ ನೀಡ್ತಾ ಇದ್ದು ನಾಯಕನ ಚಿತ್ತ ಕದ್ದಿದ್ದಾರೆ. ಜಸ್ಪ್ರಿತ್ ಬೂಮ್ರಾ ಅನುಪಸ್ಥಿತಿಯಲ್ಲಿ ತಂಡವನ್ನು ಪವರ ಪ್ಲೇನಲ್ಲಿ ಹಾಗೂ ಡೆತ್​ ಓವರ್​​ಗಳಲ್ಲಿ ಯಾರು ಮುನ್ನಡೆಸುತ್ತಾರೆ ಎಂಬ ಚಿಂತೆ ತಂಡಕ್ಕೆ ಕಾಡ್ತಾ ಇದೆ. ಅದೇನೇ ಇರಲಿ, ಟೀಮ್​ ಇಂಡಿಯಾ ಟಿ-20 ಪಂದ್ಯಗಳಲ್ಲಿ ನೀಡಿದ ಪ್ರದರ್ಶನವನ್ನು ಏಕದಿನ ಪಂದ್ಯಗಳಲ್ಲಿ ಮುಂದುವರೆಸಲಿ ಎಂಬುದೇ ನಮ್ಮೆಲ್ಲರ ಆಶಯ.

0

Leave a Reply

Your email address will not be published. Required fields are marked *