ವಿದೇಶಿಗರೊಂದಿಗೆ ಸಂಪರ್ಕ ಸಾಧಿಸಬೇಡಿ: ರಷ್ಯಾ ಸಚಿವೆ ತಮಾರಾ ಎಚ್ಚರಿಕೆ

ಮಾಸ್ಕೋ: ಫುಟ್ಬಾಲ್ ವಿಶ್ವಕಪ್ ಭಾರೀ ಮನೋರಂಜನೆ ನೀಡುತ್ತದೆ. ಆದರೆ, ಇದರ ಸುತ್ತಲ ಘಟನೆಗಳು, ಹೇಳಿಕೆಗಳು ಮಾತ್ರ ಭರಪೂರ ಮನೋರಂಜನೆಗೆ ಕೊಡುಗೆ ನೀಡುತ್ತಿವೆ. ವಿಶ್ವಕಪ್ ಪಂದ್ಯಾವಳಿಗಳು ಆರಂಭವಾಗುವ ಮುನ್ನ ಪ್ರತಿಕ್ರಿಯಿಸಿರುವ ರಷ್ಯಾ ಸಚಿವೆ ತಮಾರಾ ಪ್ಲೆಟ್ನೋವಾ, ವಿದೇಶಿಗರೊಂದಿಗೆ ಲೈಂಗಿಕ ಸಂಪರ್ಕ ಹೊಂದಬೇಡಿ ಎಂದು ಸ್ಥಳೀಯ ಯುವತಿಯರು ಮತ್ತು ಮಹಿಳೆಯರಿಗೆ ಕರೆ ನೀಡಿದ್ದಾರೆ. ಸೆಕ್ಸ್ ಮಾಡಬೇಡಿ ಎಂದು ರಷ್ಯಾ ಸಚಿವೆ ತಮಾರಾ ಪ್ಲೆಟ್ನೋವಾ ತಮ್ಮ ದೇಶದ ಯುವತಿಯರಿಗೆ ಮತ್ತು ಮಹಿಳೆಯರಿಗೆ ಎಚ್ಚರಿಕೆ ನೀಡಿದ್ದಾರೆ.

ಫಿಫಾ ವಿಶ್ವಕಪ್ 2018ರ ಪಂದ್ಯಾವಳಿಯನ್ನು ಈ ಬಾರಿ ಕಮ್ಯುನಿಸ್ಟ್ ರಾಷ್ಟ್ರ ರಷ್ಯಾ ಆಯೋಜಿಸಿದ್ದು, ಈಗಾಗಲೇ ಈ ಕುರಿತು ಸಾಕಷ್ಟು ವಾದ, ವಿವಾದಗಳಿಗೆ ಫುಟ್ಬಾಲ್ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ. ಫುಟ್ಬಾಲ್ ಪಂದ್ಯಗಳನ್ನು ವೀಕ್ಷಿಸಲು ಜಗತ್ತಿನಾದ್ಯಂತ ಇರುವ ಅಭಿಮಾನಿಗಳು ರಷ್ಯಾ ದೇಶಕ್ಕೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳಿಯರಿಗೆ ಎಚ್ಚರಿಕೆ ನೀಡಿರುವ ರಷ್ಯಾ ಸಚಿವೆ, ವಿದೇಶಿಗರೊಂದಿಗೆ ಲೈಂಗಿಕ ಸಂಪರ್ಕ ಹೊಂದಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ, ಒಂದು ವೇಳೆ ಇಂಥ ತಪ್ಪನ್ನು ನೀವು ಮಾಡಿದಲ್ಲಿ ನಿಮ್ಮ ಮಕ್ಕಳು ತೊಂದರೆ ಅನುಭವಿಸಬೇಕಾಗುತ್ತದೆ ಎಂದಿರುವ ಅವರು, ವಿದೇಶಗಳಲ್ಲಿ ನಿಮ್ಮ ಮಕ್ಕಳು ತಾರತಮ್ಯ ಅಥಪಾ ಪಕ್ಷಪಾತ ಅನುಭವಿಸಬೇಕಾಗುತ್ತದೆ ಎನ್ನುವ ಮೂಲಕ ಸುದ್ದಿಯಾಗಿದ್ದಾರೆ.

ರಷ್ಯಾ ದೇಶದ ಕುಟುಂಬ ಕಲ್ಯಾಣ, ಮಹಿಳೆ ಮತ್ತು ಮಕ್ಕಳ ಇಲಾಖೆ ಸಮಿತಿಯ ಮುಖ್ಯಸ್ಥೆಯಾಗಿ ತಮಾರಾ ನೀಡಿರುವ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸ ಒದಗಿಸಿದೆ. ರಷ್ಯಾದ ಯುವತಿಯರು ವಿದೇಶಿಗರನ್ನು ಮದುವೆಯಾದಲ್ಲಿ, ಅಂಥವರ ದಾಂಪತ್ಯ ಜೀವನ ಸುಗಮವಾಗಿರುವುದಿಲ್ಲ. ಇಂಥವರ ಮಕ್ಕಳು ವಿದೇಶಗಳಲ್ಲಿ ಅನಾಥರಂಥೆ ಜೀವನ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ವಿದೇಶಗಳಿಂದ ತಾರತಮ್ಯ ಎದುರಿಸಬೇಕಾಗುತ್ತದೆ ಎಂದ ಸರಣಿ ಸಮಸ್ಯೆಗಳನ್ನು ಉಲ್ಲೇಖಿಸಿರುವ ಅವರು, ತಮ್ಮ ಮಕ್ಕಳನ್ನು ದೇಶಕ್ಕೆ ಮರಳಿ ತರಲು ಮಹಿಳೆಯರು ಪರಿತಪಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಈ ಕುರಿತು ಹಳೆಯ ಉದಾಹರಣೆಯೊಂದನ್ನೂ ನೀಡಿರುವ ಅವರು, 1980ರಲ್ಲಿ ನಡೆದಿದ್ದ ಮಾಸ್ಕೋ ಕ್ರೀಡಾಕೂಟ ಇನ್ನೂ ಹಚ್ಚಹಸಿರಾಗಿದೆ. ಆಗ ವಿಶ್ವದಲ್ಲಿ ಕಾಂಡೋಂಗಳ ಕುರಿತ ಮಾಹಿತಿಯೇ ಇರಲಿಲ್ಲ. ಆ ಅವಧಿಯಲ್ಲಿ ವಿದೇಶಿಗರ ಸಂಪರ್ಕದಿಂದಾಗಿ ಜನಿಸಿದ ಮಕ್ಕಳ ವಿಷಯಕ್ಕೆ ಸಂಬಂಧಿಸಿದಂತೆ ತಾರತಮ್ಯ ಎದುರಾಗಿತ್ತು ಎಂದು ಮೆಲುಕು ಹಾಕಿರುವ ಅವರು, ಆಫ್ರಿಕಾ, ಲ್ಯಾಟಿನ್ ಅಮೆರಿಕ ಮತ್ತು ಏಷ್ಯಾದ ಪುರುಷರೊಂದಿಗೆ ರಷ್ಯನ್ ಮಹಿಳೆಯರು ಸಂಪರ್ಕ ಸಾಧಿಸಿದ್ದರು. ಇದೇ ಕಾರಣದಿಂದಾಗಿ ಇಂದಿಗೂ ಅಂದಿನ ಸಂತತಿ ಕಷ್ಟಪಡುತ್ತಿದೆ ಎಮದ ಅವರು, ರಷ್ಯನ್ನರು ಸಮಯದಿಂದ ವರ್ತಿಸಿ, ರಷ್ಯನ್ನರಿಗೆ ಮಾತ್ರ ಜನ್ಮ ನೀಡಬೇಕು ಎಂದು ಸಲಹೆ ನೀಡಿದ್ದಾರೆ!

ತಮ್ಮ ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತದೆ ಎಂಬ ಎಚ್ಚರಿಕೆಯಿಂದಲೋ ಏನೋ, ಹೇಳಿಕೆ ಕುರಿತು ಸ್ಪಷ್ಟೀಕರಣವನ್ನೂ ನೀಡಿರುವ ಅವರು, ನಾನು ರಾಷ್ಟ್ರೀಯ ವಾದಿಯಲ್ಲ. ಆದರೆ ಈ ಅಕ್ರಮ ಸಂಪರ್ಕದಿಂದ ಎದುರಾಗುವ ಸಮಸ್ಯೆಗಳನ್ನು ತುಂಬಾ ಸನಿಹದಿಂದ ನೋಡಿದ್ದೇನೆ. ಆದ್ದರಿಂದ, ರಷ್ಯನ್ ಮಹಿಳೆಯರು ಜನಾಂಗೀಯತೆಗೆ ವಿರುದ್ಧವಾಗಿ ವರ್ತಿಸಿ, ವಿದೇಶಿ ಪುರುಷರ ಸಂಪರ್ಕ ಬೆಳೆಸಬಾರದು ಎಂದು ಹೇಳಿಕೆ ನೀಡಿದ್ದಾರೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

1+

Leave a Reply

Your email address will not be published. Required fields are marked *