ಮಾರ್ಚ್ 1ರಂದು ಡಾ.ಆರ್.ಎಸ್.ಪ್ರವೀಣ್ ಕುಮಾರ್ ಅವರೊಂದಿಗೆ ಸಂವಾದ

ಬೆಂಗಳೂರು: ಅಂಬೇಡ್ಕರ್ ಅವರ ಆಸೆಗಳನ್ನು ಶಿಕ್ಷಣದ ಮೂಲಕ ಸಾಧಿಸಲು ಶಿಕ್ಷಣವೇ ನಮ್ಮ ಅಸ್ತ್ರವಾಗಬೇಕು ಎಂದು ಅರಿತ ಡಾ. ಪ್ರವೀಣ್ ಕುಮಾರ್ ಐ.ಪಿ.ಎಸ್. ಅವರು ಪೊಲೀಸ್ ಹುದ್ದೆಯನ್ನು ತೊರೆದು ಆಂಧ್ರಪ್ರದೇಶ ಸರ್ಕಾರವನ್ನು ಕೋರಿಕೊಂಡು ಆಂಧ್ರಪ್ರದೇಶ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳ ಕಾರ್ಯದರ್ಶಿಯಾನ್ನಾಗಿ ಮಾಡಬೇಕೆಂಬ ಮನವಿ ಸಲ್ಲಿಸಿದರು. ಅವರ ಮನವಿಗೆ ಸ್ಪಂದಿಸಿದ ಆಂಧ್ರಪ್ರದೇಶ ಸರ್ಕಾರವು ಅವರನ್ನು ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳ  ಸಂಸ್ಥೆಗೆ ಕಾರ್ಯದರ್ಶಿಯನ್ನಾಗಿ ನೇಮಿಸಿತು. ಪ್ರಸ್ತುತ ಅವರು ತೆಲಂಗಾಣ ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂಬೇಡ್ಕರ್, ಜ್ಯೋತಿ ಬಾ ಪುಲೆ, ಸಾವಿತ್ರಿ ಬಾಯಿ ಪುಲೆ ಆಸೆಗಳನ್ನು ಜಾರಿಗೆ ತರಲು ಶಿಕ್ಷಣ ವ್ಯವಸ್ಥೆಯ ಮೂಲಕ ಹೊಸ ಪ್ರಯತ್ನವನ್ನು ಅವರು ಪ್ರತಿದಿನ ಅಂಬೇಡ್ಕರರ ಆಶಯಗಳನ್ನು ಮುಂದುವರಿಸಲು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಆಚರಿಸುತ್ತಿದ್ದಾರೆ. ಅಂಬೇಡ್ಕರ್ ಅವರ ಆಲೋಚನಾ ಕ್ರಮಗಳಲ್ಲಿ ತೊಡಗಿಸಿಕೊಂಡು ಅದರ ಮೂಲಕ ಸಾಮಾಜಿಕ ಬದಲಾವಣೆಯನ್ನು  ಮಾಡಬೇಕೆಂಬುದೇ ಇವರ ದೊಡ್ಡ ಕನಸಾಗಿದೆ.

ಪ್ರವೀಣ್ ಕುಮಾರ್‍ ಅವರು, ಶಿಕ್ಷಕರು ವಿದ್ಯಾರ್ಥಿಗಳು ಪೋಷಕರು ಹಾಗೂ ಹಳೆಯ ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ ಸಂಪರ್ಕದಲ್ಲಿದ್ದು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ವ್ಯವಸ್ಥೆಗಳನ್ನು ಕಲ್ಪಿಸಲು ವಿವಿಧ ಹಂತಗಳಲ್ಲಿ ಸಂವಾದಗಳನ್ನು ಏರ್ಪಡಿಸುತ್ತಾರೆ. “ನಾನು ಇಲ್ಲಿ ಶಿಕ್ಷಕನಾಗಲು ಬಂದಿಲ್ಲ ನಾನು ಶಿಕ್ಷಕರಿಗೆ ವಿದ್ಯಾರ್ಥಿಗಳಿಗೆ ಬೇಕಾಗಿರುವುದು ಏನು ಎಂಬುದನ್ನು ಅರ್ಥ ಮಾಡಿಕೊಂಡು ಪೂರಕವಾದಂತಹ ವ್ಯವಸ್ಥೆಯನ್ನು ಕಲ್ಪಿಸಿ ಸಮಗ್ರ ಬದಲಾವಣೆಯನ್ನು ತರಲು ಇಲ್ಲಿಗೆ ಬಂದಿದ್ದೇನೆ” ಎನ್ನುವುದು ಅವರ ಹೇಳಿಕೆ.

ವಿದ್ಯಾರ್ಥಿಗಳಿಗೆ ಆತ್ಮ ವಿಶ್ವಾಸ ಹೆಚ್ಚಿಸಲು ತಮ್ಮ ಪ್ರತಿಭೆಯನ್ನು ತಾವೇ ಪ್ರದರ್ಶಿಸಿಕೊಳ್ಳಬೇಕು ತಮಗೆ ಬೇಕಾದ ಅವಕಾಶಗಳನ್ನು ರೂಪಿಸಿಕೊಳ್ಳಬೇಕು ನೀವು ಯಾರಿಗಾಗಿಯೂ ಕಾಯದೇ ತಮಗೆ ಬೇಕಾದ ಪರಿಸರವನ್ನು ರೂಪಿಸಿಕೊಳ್ಳಬೇಕು. ಆದ್ದರಿಂದ ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡಲು ಹತ್ತು ಅಂಶಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಲಾಗುತ್ತದೆ.

  1. ನಾನು ಯಾರಿಗಿಂತ ಕಡಿಮೆ ಇಲ್ಲ
  2. ನಾನು ಎಲ್ಲಿರುತ್ತೇನೆ ಅಲ್ಲಿ ನಾನೇ ನಾಯಕ
  3. ನಾನು ಏನನ್ನು ಪ್ರೀತಿಸುತ್ತೇನೆ ಅದನ್ನು ಭಿನ್ನವಾಗಿ ಮಾಡುತ್ತೇನೆ.
  4. ಯಾವಾಗಲು ವಿಶಾಲವಾಗಿ ಯೋಚಿಸುತ್ತೇನೆ ಮತ್ತು ದೊಡ್ಡ ಗುರಿಯನ್ನು ಇಟ್ಟುಕೊಳ್ಳುತ್ತೇನೆ.
  5. ನಾನು ಪ್ರಾಮಾಣಿಕವಾಗಿರುತ್ತೇನೆ. ಕಷ್ಟಪಟ್ಟು ಪ್ರಾಮಾಣಿಕವಾಗಿ ಕೆಲಸಮಾಡುತ್ತೇನೆ.
  6. ನನ್ನ ಸೋಲಿಗೆ ಇತರರನ್ನು ಹೊಣೆ ಮಾಡುವುದಿಲ್ಲ. ನನ್ನ ಸೋಲಿಗೆ ನಾನೇ ಕಾರಣ
  7. ನಾನು ಏನನ್ನು ಪಡೆಯುತ್ತೇನೋ ಅದನ್ನು ಸಮುದಾಯಕ್ಕೆ ಮರಳಿ ನೀಡುತ್ತೇನೆ.
  8. ನಾನು ಭಿಕ್ಷೆ ಬೇಡುವುದಿಲ್ಲ, ಇತರರಿಗೆ ಮೋಸ ಮಾಡುವುದಿಲ್ಲ
  9. ನನಗೆ ತಿಳಿಯದ ವಿಷಯಗಳಿಗೆ ನಾನು ಹೆದುರುವುದಿಲ್ಲ
  10. ನಾನು ಯಾವುದೇ ಕೆಲಸವನ್ನು ಪ್ರಾರಂಭಿಸಿದರು ಅದನ್ನು ಸಾಧಿಸದೇ ಬಿಡುವುದಿಲ್ಲ

ಈ ಮೇಲಿನ ಅಂಶಗಳನ್ನು ಪ್ರತಿ ದಿನ ವಿದ್ಯಾರ್ಥಿಗಳು ನೆನಪಿನಲ್ಲಿಟ್ಟುಕೊಳ್ಳಬೇಕು. ಯಾವುದೇ ಕೆಲಸವನ್ನು ಪ್ರಾರಂಭಿಸಿದರು ಛಲ ಬಿಡದೆ ಸಾಧಿಸಬೇಕು ಎಂಬ ಆದರ್ಶವನ್ನು ವಸತಿ ಶಾಲೆಯ ಎಲ್ಲಾ ಮಕ್ಕಳು ಚಾಚು ತಪ್ಪದೇ ಪಾಲಿಸುತ್ತಿರುವುದು ಕಂಡು ಬರುತ್ತದೆ. ಮಕ್ಕಳಲ್ಲಿ ಹೊಸ ರೀತಿಯ ಸ್ಫೂರ್ತಿ ಮತ್ತು ಆತ್ಮ ವಿಶ್ವಾಸಗಳನ್ನು ಕಾಣಬಹುದು.

ತೆಲಂಗಾಣ ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳ ಸಂಸ್ಥೆಯ ಮೂಲ ಗುರಿ 21ನೇ ಶತಮಾನದಲ್ಲಿ ವಿದ್ಯಾರ್ಥಿಗಳಿಗೆ ಎದುರಾಗುವ ಸವಾಲುಗಳನ್ನು ಎದುರಿಸಲು ಬೇಕಾಗಿರುವ ಆತ್ಮ ಸ್ಥೈರ್ಯವನ್ನು ಹೆಚ್ಚಿಸುವುದು ಮತ್ತು ವಿಶಾಲವಾದ ಕಲಿಕಾ ಅವಕಾಶಗಳನ್ನು ಶಾಲೆಯ ಕೊಠಡಿಯ ಒಳಗೆ ಮತ್ತು ಹೊರಗೆ ರೂಪಿಸಿ ಸಮಗ್ರವಾದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುವುದು. ಜಾಗತೀಕರಣದ ಸಂದರ್ಭದಲ್ಲಿ ಇರುವ ಅವಕಾಶಗಳನ್ನು ಬಳಸಿಕೊಳ್ಳುವಂತೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದು.

ತೆಲಂಗಾಣ ಸಮಾಜ ಕ್ಯಲಾಣ ಇಲಾಖೆಯ ವಸತಿ ಶಾಲೆಗಳ ಸಂಸ್ಥೆಯಲ್ಲಿ 268 ಶಾಲೆಗಳಿವೆ. ಅದರಲ್ಲಿ 5ನೇ ತರಗತಿಯಿಂದ 12ನೇ ತರಗತಿಯವರೆಗೆ ಶಿಕ್ಷಣ ನೀಡಲಾಗುತ್ತಿದೆ. ಬಹಳ ಮುಖ್ಯವಾಗಿ ಆಂಗ್ಲ ಮಾಧ್ಯಮದಲ್ಲಿ ಕಲಿಸಲಾಗುತ್ತಿದೆ. ಒಟ್ಟು 1,12,088 ಮಕ್ಕಳು ಈ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ವಿಶೇಷವಾಗಿ 174 ಶಾಲೆಗಳನ್ನು ಹೆಣ್ಣು ಮಕ್ಕಳಿಗೆ ಮೀಸಲಿರಿಸಿ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಿಶೇಷವಾದ ಆದ್ಯತೆಯನ್ನು ನೀಡಿ ಪ್ರೋತ್ಸಾಹಿಸುತ್ತಿದ್ದಾರೆ.

ವಿದ್ಯಾರ್ಥಿಗಳಿಗೆ ಯಾವುದೇ ಅಂತರರಾಷ್ಟ್ರೀಯ ವಸತಿ ಶಾಲೆಗಳಲ್ಲಿ ಸಿಗದೆ ಇರುವ ತರಬೇತಿಗಳನ್ನು ಈ ವಸತಿ ಶಾಲೆಗಳಲ್ಲಿ ನೀಡಲಾಗುತ್ತದೆ. ಪ್ರತಿ ವರ್ಷ ಬೇಸಿಗೆ ರಜೆಯಲ್ಲಿ ಎರಡು ತಿಂಗಳುಗಳ ಕಾಲ ವಿದ್ಯಾರ್ಥಿಗಳಿಗೆ ಆಸಕ್ತಿ ಇರುವ ವಿಷಯಗಳನ್ನು ಕುರಿತು ಬೇಸಿಗೆ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಈ ಶಿಬಿರಗಳನ್ನು ಆಯೋಜಿಸುವ ಮೊದಲು 268 ಶಾಲೆಗಳಿಂದ ಆಸಕ್ತಿ ಇರುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಒಂದೊಂದು ಶಾಲೆಯಲ್ಲಿ ಒಂದೊಂದು ಶಿಬಿರವನ್ನು ಏರ್ಪಡಿಸುತಾರೆ. 40ಕ್ಕೂ ಹೆಚ್ಚು ವಿಷಯಗಳ ಮೇಲೆ ಶಿಬಿರಗಳ ನೆಡೆಯುತ್ತವೆ. ‘ವಾಯ್ಸ್ ಫಾರ್ ಗರ್ಲ್ಸ್’,  ‘ಅಬಾಕಸ್’, ‘ಶೂಟಿಂಗ್’, ‘ಸ್ಟಾಕ್ ಮಾರ್ಕೆಟ್’, ‘ಸ್ಪೋಕನ್ ಇಂಗ್ಲಿಷ್’, ‘ಬೋಧನಾ ತರಬೇತಿ’ ಹಿಂದುಸ್ಥಾನಿ ಸಂಗೀತ, ನೀರಿನಲ್ಲಿ ಆಡುವ ಕ್ರೀಡೆಗಳು, ಕುದುರೆ ಓಡಿಸುವುದು, ಹೋಟೆಲ್ ನಿರ್ವಹಣೆ, ಯುವ ರಾಜಕಾರಣಿ, ಕರಕುಶಲ ತರಬೇತಿ, ವ್ಯಾವಹಾರಿಕ ಜ್ಞಾನ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ, ಯುವ ಪತ್ರಕರ್ತರ ತರಬೇತಿ ಲೇಖನ ಬರೆಯುವ ತರಬೇತಿ ಮುಂತಾದ ತರಬೇತಿಗಳನ್ನು ನೀಡಲಾಗುತ್ತದೆ. ಈ ತರಬೇತಿಗಳನ್ನು ಪಡೆದು ವಿದ್ಯಾರ್ಥಿಗಳು ವಾಪಸ್ಸು ಅವರವರ ಶಾಲೆಗಳಲ್ಲಿ ಇತರೆ ವಿದ್ಯಾರ್ಥಿಗಳಿಗೆ ಈ ತರಬೇತಿಗಳನ್ನು ನೀಡಬೇಕು ಅದರ ಮೂಲಕ ಇಡೀ ಶಾಲೆಯಲ್ಲಿರುವ ಎಲ್ಲ ವಿದ್ಯಾರ್ಥಿಗಳಿಗೂ ಈ ತರಬೇತಿಯ ಸದುಪಯೋಗ ಪಡೆದು ಕ್ರಿಯಾಶೀಲರಾಗಿ ಬೆಳೆಯಲು ಅವಕಾಶ ಮಾಡಿ ಕೊಡಲಾಗಿದೆ.

ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿತ ಶಿಕ್ಷಣವನ್ನು ರಜೆ ದಿನಗಳಲ್ಲಿ ತಮ್ಮ ಕಾಲೋನಿಗಳ ಇತರೆ ವಿದ್ಯಾರ್ಥಿಗಳಿಗೆ ಕಲಿಸಿ ಕೊಡಬೇಕು. ಅದಕ್ಕಾಗಿ ಹಳೆಯ ವಿದ್ಯಾರ್ಥಿಗಳ ಸಹಾಯವನ್ನು ಪಡೆದು ತಮ್ಮ ಕುಟುಂಬದ ಇತರೆ ಸದಸ್ಯರಿಗೆ ಮತ್ತು ಈ ಶಿಕ್ಷಣ ವ್ಯವಸ್ಥೆಯಿಂದ ವಂಚಿತರಾಗಿರುವ ಸಮುದಾಯದ ಜನರಿಗೆ ಈ ಶಿಕ್ಷಣವನ್ನು ತಲುಪಿಸುವ ಕೆಲಸವನ್ನು ವಿದ್ಯಾರ್ಥಿಗಳು ಮಾಡುತ್ತಿದ್ದಾರೆ. ಎಷ್ಟೋ ಜನ ಪೋಷಕರು ಮಕ್ಕಳ ಮೂಲಕ ಕಲಿಕೆಯನ್ನು ಪ್ರಾರಂಭಿಸಿರುವುದು ಕಂಡು ಬಂದಿದೆ.

ಈ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳು 2017-18ನೇ ಸಾಲಿನಲ್ಲಿ 48 ಜನ ಐ.ಐ.ಟಿ.ಗಳಲ್ಲಿ, 133 ವಿದ್ಯಾರ್ಥಿಗಳು ಎನ್.ಐ.ಟಿ.ಎಸ್.ನಲ್ಲಿ, 81 ವಿದ್ಯಾರ್ಥಿಗಳು ಎಂ.ಬಿ.ಬಿ.ಎಸ್.ಗೆ, 30 ವಿದ್ಯಾರ್ಥಿಗಳು ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ, 80 ವಿದ್ಯಾರ್ಥಿಗಳು ದೆಹಲಿ ವಿಶ್ವ ವಿದ್ಯಾನಿಲಯದಲ್ಲಿ ಪ್ರವೇಶ ಪಡೆದಿದ್ದಾರೆ. ಹೀಗೆ  ದೇಶದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಲ್ಲಿ ನೂರಾರು ಜನ ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣವನ್ನು ಮುಂದುವರೆಸುತ್ತಿದ್ದಾರೆ. ಅವರು ಉನ್ನತ ಸಾಧನೆಯನ್ನು ಮಾಡಿ ನಮ್ಮ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂಬ ಆಶಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಕರ್ನಾಟಕದಲ್ಲೂ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳ ಸಂಸ್ಥೆಯಲ್ಲಿ 819 ಶಾಲೆಗಳಿವೆ. ಇವುಗಳಲ್ಲಿ ಎಲ್ಲ ರೀತಿ ಮೂಲಭೂತ ಸೌಲಭ್ಯಗಳಿವೆ. ಆದರೆ ವಿದ್ಯಾರ್ಥಿಗಳ ಅವಶ್ಯಕತೆಗಳೇನು? ಶಿಕ್ಷಕರ ಅವಶ್ಯಕತೆಗಳೇನು? ಮತ್ತು ಪೋಷಕರ ನಿರೀಕ್ಷೆಗಳೇನು? ಎಂಬುದನ್ನು ಅರ್ಥ ಮಾಡಿಕೊಂಡು 21ನೇ ಶತಮಾನದಲ್ಲಿ ಈ ವಿದ್ಯಾರ್ಥಿಗಳು ಹೇಗೆ ಭವಿಷ್ಯ ರೂಪಿಸಿಕೊಳ್ಳಬೇಕು ಎಂಬುವುದನ್ನು ಸಮಗ್ರವಾಗಿಟ್ಟು ಸಮುದಾಯಗಳನ್ನು ಒಳಗೊಂಡು ವಸತಿ ಶಾಲೆಗಳ ಶಿಕ್ಷಣ ಸಂಸ್ಥೆ ಸಮರ್ಪಕವಾಗಿ ಕಾರ್ಯ ನಿರ್ವಹಿಸದೇ ಇರುವುದು ಕಂಡುಬರುತ್ತದೆ. ಪಕ್ಕದ ರಾಜ್ಯದಲ್ಲಿ ಇರುವ ಇಂತಹ ಒಂದು ಮಾದರಿಯನ್ನು ಕರ್ನಾಟಕ ಸರ್ಕಾರ ಅಳವಡಿಸಿಕೊಳ್ಳಬೇಕಿದೆ. ವಸತಿ ಶಾಲೆಗಳ ಕಲಿಕಾ ಗುಣಮಟ್ಟ ಹೆಚ್ಚಿಸಬಹುದು. ಇದಕ್ಕಾಗಿ ಎಲ್ಲ ತಳ ಸಮುದಾಯಗಳ ವಿದ್ಯಾವಂತರು, ಸಮಾಜ ಕಲ್ಯಾಣ ಇಲಾಖೆಯ ಸೌಲಭ್ಯ ಪಡೆದು ಶಿಕ್ಷಣ ಪಡೆದಿರುವ ಎಲ್ಲರೂ, ಸರ್ಕಾರಿ ಅಧಿಕಾರಿಗಳು ಜನಪರವಾಗಿ ಯೋಚಿಸುವ ಎಲ್ಲರೂ ಒಟ್ಟಾಗಿ ಈ ಮಾದರಿಯನ್ನು ಕರ್ನಾಟಕಕ್ಕೆ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕಿದೆ. ತಳ ಸಮುದಾಯಗಳಿಗೆ ಶಿಕ್ಷಣವನ್ನೇ ಆಸ್ತಿಯನ್ನಾಗಿ ರೂಪಿಸಿ ಅದರ ಮೂಲಕ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳನ್ನು ದೂರ ಮಾಡುವ ಪ್ರಯತ್ನಗಳು ಹೆಚ್ಚಾಗಬೇಕಿದೆ.

ಈ ನಿಟ್ಟಿನಲ್ಲಿ ಡಾ. ಆರ್. ಎಸ್.  ಪ್ರವೀಣ್ ಕುಮಾರ್ ಅವರೊಂದಿಗೆ ಸಂವಾದವನ್ನು ಏರ್ಪಡಿಸಲಾಗಿದೆ. ದಿನಾಂಕ 01-03-2019 ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಸಂಜೆ 4:30ಕ್ಕೆ ಸಂವಾದ ಆರಂಭವಾಗಲಿದೆ. ಭಾಗವಹಿಸಲು ಆಸಕ್ತಿ ಉಳ್ಳವರು ತಮ್ಮ ಹೆಸರುಗಳನ್ನು ದಿನಾಂಕ 27-02-2019ರ ಒಳಗಾಗಿ ನೋಂದಾಯಿಸಿ ಕೊಳ್ಳಬೇಕು ಎಂದು ಕೋರಲಾಗಿದೆ.

ಸ್ವೆರೋಸ್ ಸಂಘಟನೆ ಕರ್ನಾಟಕ

ಕರ್ನಾಟಕ ರಾಜ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ನಡೆಯುತ್ತಿರುವ ವಸತಿ ಶಾಲೆಗಳ ಕಲಿಕಾ ಗುಣ ಮಟ್ಟ ಮತ್ತು ಮಕ್ಕಳ ಸಮಗ್ರ ಬೆಳವಣಿಗೆಗಾಗಿ ರೂಪುಗೊಂಡಿರುವ ಗುಂಪು. ಸಮಾಜದಲ್ಲಿ ಬದಲಾವಣೆಯಾಗಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ. ಅದಕ್ಕಾಗಿ ತಳ ಸಮುದಾಯಗಳಿಗೆ ಗುಣಮಟ್ಟದ ಶಿಕ್ಷಣವನ್ನು ಖಾತ್ರಿಗೊಳಿಸಬೇಕು. 21ನೇ ಶತಮಾನದ ಜಾಗತಿಕ ಸ್ಪರ್ಧೆಯಲ್ಲಿ ಬದುಕುಗಳನ್ನು ಕಟ್ಟಿಕೊಳ್ಳಲು ಬೇಕಾದ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕು. ಅದಕ್ಕಾಗಿ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ಹಳೆಯ ವಿದ್ಯಾರ್ಥಿಗಳು ಹಾಗೂ ಸಮಾಜದಲ್ಲಿ ದೊಡ್ಡ ಸಾಧನೆ ಮಾಡಿರುವ ಸಮುದಾಯದ ಪ್ರತಿನಿಧಿಗಳನ್ನು ಒಳಗೊಂಡು ಶಿಕ್ಷಣದಲ್ಲಿ ಸರ್ವತೋಮುಖ ಬದಲಾವಣೆ ಪ್ರಯತ್ನಿಸಲು ಈಗಾಗಲೆ ತೆಲಂಗಾಣ ರಾಜ್ಯದಲ್ಲಿ ಡಾ. ಎಸ್ ಪ್ರವೀಣ್ ಕುಮಾರ್ ಅವರ ನೇತೃತ್ವದಲ್ಲಿ ಸಾಕಷ್ಟು ಬದಲಾವಣೆಗಳನ್ನು ವಸತಿ ಶಾಲೆಗಳಲ್ಲಿ ತಂದಿದ್ದಾರೆ. ಅವರ ಮಾದರಿಯನ್ನೆ ಕರ್ನಾಟಕಕ್ಕೆ ತರಬೇಕೆಂಬ ಆಶಯದೊಂದಿಗೆ ರೂಪುಗೊಳ್ಳುತ್ತಿದೆ. ಸಮುದಾಯಗಳಿಂದ ಬಂದಂತಹ ಪ್ರತಿನಿಧಿಗಳು ಮರಳಿ ಸಮುದಾಯಗಳ ಅಭಿವೃದ್ಧಿಗೆ ಪುನಃ ನೀಡಲು ಯೋಚಿಸುತ್ತಿರುವ ಎಲ್ಲರು ಒಟ್ಟಾಗಿ ಶ್ರಮಿಸಬೇಕಿದೆ. ನೀವು ಇದರೊಂದೊಗೆ ಕೈ ಜೋಡಿಸಿ.

– ಡಾ.ಆರ್.ವಿ.ಚಂದ್ರಶೇಖರ್

ಸಹಾಯಕ ಪ್ರಾಧ್ಯಾಪಕ, ತಳಸಮುದಾಯಗಳ ಅಧ್ಯಯನ ಕೇಂದ್ರ, ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿ ಅಧ್ಯಯನ ಕೇಂದ್ರ, ರಾಷ್ಟ್ರೀಯ ಕಾನೂನು ಶಾಲೆ, ಭಾರತ ವಿಶ್ವವಿದ್ಯಾಲಯ, ಬೆಂಗಳೂರು. ಮೊಬೈಲ್ ನಂ: 9482222184

0

Leave a Reply

Your email address will not be published. Required fields are marked *