ಬಾಬ್ರಿ ಮಸೀದಿ ಧ್ವಂಸದಿಂದ ದೇಶದ ಪ್ರಜಾಪ್ರಭುತ್ವದ ಮೇಲೆ ಹಲ್ಲೆಯಾಗಿದೆ: ಯೆಚೂರಿ

ನವದೆಹಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣ ದೇಶದ ಪ್ರಜಾಪ್ರಭುತ್ವದ ಮೇಲೆ ನಡೆದ ಹಲ್ಲೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ವಾಗ್ದಾಳಿ ನಡೆಸಿದ್ದಾರೆ. ದೇಶದ ಜಾತ್ಯತೀತ ಪ್ರಜಾಪ್ರಭುತ್ವದ ಮೇಲೆ ನಡೆದ ಅತಿದೊಡ್ಡ ಹಲ್ಲೆ ಎಂದು ಬಾಬ್ರಿ ಮಸೀದಿ ಧ್ವಂಸ ಪ್ರಕರಣವನ್ನು ಅವರು ಬಣ್ಣಿಸಿದ್ದಾರೆ. ಇಂದು ಭಾರತದ ಇತಿಹಾಸಕ್ಕೆ ದೊಡ್ಡ ಕಪ್ಪು ಚುಕ್ಕೆಯಾಗಿ ಉಳಿದಿದೆ ಎಂದಿದ್ದಾರೆ.

ಅಲ್ಲದೇ, ಡಿಸೆಂಬರ್ 6 ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರಿಗೂ ಸಂಬಂಧಿಸಿದೆ ಎಂದು ಅವರು ಪರಿನಿರ್ವಾಣ ದಿನದ ಕುರಿತು ಕೂಡ ಪ್ರಸ್ತಾಪಿಸಿದರು. ಸಂವಿಧಾನದತ್ತ ಜಾತ್ಯತೀತ ಪ್ರಜಾಪ್ರಭುತ್ವದ ತಳಹದಿಯನ್ನೇ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಿಂದ ನಾಶಪಡಿಸಲಾಗಿದೆ. ಸಂವಿಧಾನವನ್ನು ರಕ್ಷಿಸುವ ಸಲುವಾಗಿ ಇಂದು ಕರಾಳ ದಿನಾಚರಣೆ ಆಚರಿಸಲಾಗುವುದು. ಭವಿಷ್ಯದಲ್ಲಿ ಇಂಥ ಘಟನೆಗಳು ನಡೆಯದಂತೆ ಎಲ್ಲರೂ ಎಚ್ಚರವಾಗಿ ಕಾಯಬೇಕು ಎಂದು ಅವರು ಕರೆ ನೀಡಿದರು.

ಬಾಬ್ರಿ ಮಸೀದಿ ಧ್ವಂಸದ 25ನೇ ವರ್ಷದ ದಿನವನ್ನು ಕರಾಳ ದಿನವನ್ನಾಗಿ ಆಚರಿಸಲು ಸಿಪಿಎಂ ಸೇರಿದಂತೆ ಎಡಪಕ್ಷಗಳು ಕರೆ ನೀಡಿವೆ. ಇದೇ ಮೊದಲ ಬಾರಿ ಸಿಪಿಎಂ ಜೊತೆಗೆ ಸಿಪಿಐ, ಸಿಪಿಐ-ಎಂಎಲ್, ಆರ್​ಎಸ್​​ಪಿ, ಫಾರ್ವರ್ಡ್ ಬ್ಲಾಕ್ ಮತ್ತು ಎಸ್​ಯುಸಿಐ ಒಟ್ಟಾಗಿ ಕರಾಳ ದಿನಾಚರಣೆ ನಡೆಸಲು ಮುಂದಾಗಿವೆ.

ನಿನ್ನೆ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಕುರಿತು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್​​, ವಿಚಾರಣೆಯನ್ನು ಫೆ. 8, 2018ಕ್ಕೆ ಮುಂದೂಡಿದೆ. ಡಿಸೆಂಬರ್ 6, 2018ರಂದು ವಿಶ್ವ ಹಿಂದೂ ಪರಿಷತ್, ಭಾರತೀಯ ಜನತಾ ಪಕ್ಷ ಅಯೋಧ್ಯೆಯಲ್ಲಿ ಬೃಹತ್ ರ್ಯಾಲಿಯನ್ನು ಆಯೋಜಿಸಿತ್ತು. ಅಂದು 1.5 ಲಕ್ಷಕ್ಕೂ ಹೆಚ್ಚು ಕರಸೇವಕರು ಸ್ಥಳದಲ್ಲಿ ನೆರೆದಿದ್ದರು. ಆ ಸಂದರ್ಭದಲ್ಲಿ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಉಮಾ ಭಾರತಿ ಮೊದಲಾದ ನಾಯಕರು ಸ್ಥಳದಲ್ಲಿದ್ದರು. ನಂತರ ಇದ್ದಕ್ಕಿದ್ದಂತೆ ರೊಚ್ಚಿಗೆದ್ದ ಕರಸೇವಕರು 16ನೇ ಶತಮಾನದ ಐತಿಹಾಸಿಕ ಸ್ಮಾರಕವಾದ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ್ದರು. ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ನಂತರ ದೇಶದಾದ್ಯಂತ ಕೋಮುಗಲಭೆಗಳು ನಡೆದಿದ್ದವು. ಈ ಗಲಭೆಗಳಿಗೆ ಸುಮಾರು 2,000ಕ್ಕೂ ಹೆಚ್ಚು ನಾಗರಿಕರು ಬಲಿಯಾಗಿದ್ದರು.

ಮೊಘಲ್ ದೊರೆ ಬಾಬರ್ 1528ರಲ್ಲಿ ನಿರ್ಮಿಸಿದ್ದ ಬಾಬ್ರಿ ಮಸೀದಿ ಸ್ಥಳದಲ್ಲಿ ರಾಮ ಮಂದಿರ ಕಟ್ಟುತ್ತೇವೆ ಎಂದು ದೇಶದ ಜನತೆಗೆ ಭರವಸೆ ನೀಡಿದ್ದ ಬಿಜೆಪಿ ಇಂದು ಕೇಂದ್ರ ಸರ್ಕಾರದಲ್ಲಿ ಅಧಿಕಾರ ನಡೆಸುತ್ತಿದೆ. ಮಂದಿರ ನಿರ್ಮಾಣಕ್ಕಾಗಿ ರಥಯಾತ್ರೆ ನಡೆಸಿದ್ದ ಲಾಲ್ ಕೃಷ್ಠ ಅಡ್ವಾಣಿ ಮತ್ತು ಇತರ ನಾಯರಕು ತೆರೆಮರೆಗೆ ಸರಿದ್ದಾರೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *