ಸರ್ಕಾರ ರಚನೆಗೆ ಹಕ್ಕು ಮಂಡನೆ: ಕರ್ನಾಟಕ ಮಾದರಿಗೆ ಒತ್ತಾಯ

ಕರ್ನಾಟಕ ಮಾದರಿಗೆ ಹೆಚ್ಚಿದ ಒತ್ತಡ
ಸರ್ಕಾರ ರಚಿಸಲು ಅವಕಾಶ ನೀಡಿ ಎಂದ ವಿಪಕ್ಷಗಳು
ರಾಜ್ಯಪಾಲರ ಭೇಟಿ ಮಾಡಿ ಹಕ್ಕು ಮಂಡನೆ

ಪಣಜಿ/ಪಾಟ್ನಾ/ಇಂಫಾಲ: ಸುಪ್ರೀಂ ಕೋರ್ಟ್​ ರಾಜ್ಯ ವಿಧಾನಸಭೆಯಲ್ಲಿ ನಾಳೆ ಬಹುಮತ ಸಾಬೀತುಪಡಿಸಿ ಎಂದು ಬಿಎಸ್​ವೈಗೆ ಸೂಚಿಸಿರುವ ಬೆನ್ನಲ್ಲೇ ಇಂದು ಗೋವಾ, ಮಣಿಪುರ, ಬಿಹಾರಗಳಲ್ಲಿ ಅತಿದೊಡ್ಡ ಪಕ್ಷವಾಗಿರುವ ತಮಗೆ ಸರ್ಕಾರ ರಚಿಸಲು ಅವಕಾಶ ನೀಡಿ ಎಂಬ ಒತ್ತಾಯ ಕೇಳಿಬಂದಿದೆ.

ರಾಜ್ಯದಲ್ಲಿ ಅತಿದೊಡ್ಡ ಪಕ್ಷಕ್ಕೆ ಸರ್ಕಾರ ರಚಿಸಲು ಅವಕಾಶ ನೀಡಿದ ಬೆನ್ನಲ್ಲೇ ಇಂದು ಮೂರು ರಾಜ್ಯಗಳಲ್ಲಿ ತಮಗೂ ಇದೇ ಮಾದರಿಯಲ್ಲಿ ಅವಕಾಶ ನೀಡಿ ಎಂದು ರಾಜ್ಯಪಾಲರಿಗೆ ಒತ್ತಡ ಹೇರಲಾಗಿದೆ. ಗೋವಾದ 13 ಕಾಂಗ್ರೆಸ್ ಶಾಸಕರು ರಾಜಭವನಕ್ಕೆ ಭೇಟಿ ನೀಡಿ, ರಾಜ್ಯಪಾಲೆ ಮೃದುಲಾ ಸಿನ್ಹಾ ಅವರಿಗೆ ಸರ್ಕಾರ ರಚಿಸಲು ಅವಕಾಶ ನೀಡಿ ಎಂದು ಮನವಿ ಮಾಡಿದರು. 2017ರ ಫೆಬ್ರವರಿಯಲ್ಲಿ ನಡೆದಿದ್ದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಎರಡನೇ ಸ್ಥಾನದಲ್ಲಿದ್ದ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ನೀಡಲಾಗಿತ್ತು. ಕರ್ನಾಟಕದಲ್ಲಿ ನಡೆದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ತಮಗೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಮನವಿ ಸಲ್ಲಿಸಿದೆ.

ನಾಳೆ ಕರ್ನಾಟಕದಲ್ಲಿ ಬಹುಮತ ಸಾಬೀತು ನಡೆಯುವವರೆಗೆ ಕಾಯಿರಿ ಎಂದು ಮಣಿಪುರ ರಾಜ್ಯಪಾಲ ಜಗದೀಶ್ ಮುಖಿ ಹೇಳಿದ್ದಾರೆ ಎಂದು ಮಣಿಪುರದ ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಿಎಂ ಇಬೋಬಿ ಸಿಂಗ್ ಹೇಳಿದ್ದಾರೆ. ಅಲ್ಲದೇ, ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ. ಈ ಮೂಲಕ ಕರ್ನಾಟಕ ಮಾದರಿಯಲ್ಲಿ ಅತಿ ದೊಡ್ಡ ಪಕ್ಷಕ್ಕೆ ಸರ್ಕಾರ ರಚನೆಯ ಕೂಗಿಗೆ ಮಣಿಪುರದಲ್ಲಿ ಕೂಡ ಬೆಂಬಲ ಸಿಕ್ಕಂತಾಗಿದೆ.

ರಾಜ್ಯಪಾಲರ ಮುಂದೆ ನಾವು ಸದನದಲ್ಲಿ ಬಹುಮತ ಸಾಬೀತುಪಡಿಸುತ್ತೇವೆ ಎಂದು ಆರ್​ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿದ್ದಾರೆ. ಸರ್ಕಾರ ರಚಿಸುವ ಹಕ್ಕನ್ನು ನಾವು ರಾಜ್ಯಪಾಲರ ಮುಂದೆ ಮಂಡಿಸಲಿದ್ದೇವೆ ಎಂದ ಅವರು, ನಮಗೆ ಅನೇಕ ಪಕ್ಷಗಳು ಮತ್ತು ಶಾಸಕರ ಬೆಂಬಲ ನಮಗಿದೆ. ಏನಾಗಲಿದೆ ಎಂದು ಕಾದು ನೋಡಬೇಕಿದೆ ಎಂದಿದ್ದಾರೆ. ಈ ನಡುವೆ, ಆರ್​ಜೆಡಿ, ಸಿಪಿಐ(ಎಂಎಲ್) ಶಾಸಕರು ರಾಜ್ಯಪಾಲ ಸತ್ಯಪಾಲ್ ಮಾಲಿಕ್​​ಗೆ ಬೆಂಬಲಿಗ ಶಾಸಕರ ಪತ್ರವನ್ನು ನೀಡಿದ್ದಾರೆ.

ರಾಜ್ಯಪಾಲರ ಮುಂದೆ ಬೆಂಬಲಿಗರೊಂದಿಗೆ ಪೆರೇಡ್ ನಡೆಸಿದ ತೇಜಸ್ವಿ ಯಾದವ್, ಕರ್ನಾಟಕದಲ್ಲಿ ಬಿ ಎಸ್ ಯಡಿಯೂರಪ್ಪನವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರಿಗೆ ಅವಕಾಶ ನೀಡಿದಂತೆ ನಮಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಅಲ್ಲದೇ, ನಮ್ಮದು ಚುನಾವಣಾ ಪೂರ್ವ ಮೈತ್ರಿಕೂಟವಾಗಿದೆ. ನಾವು ಬಹುಮತ ಸಾಬೀತುಪಡಿಸುತ್ತೇವೆ ಎಂದು ಹೇಳಿದ್ದಾರೆ.

ಬಿಹಾರದಲ್ಲಿ ಆರ್​ಜೆಡಿ ಅತಿದೊಡ್ಡ ಪಕ್ಷವಾಗಿದೆ. ಆದ್ದರಿಂದ ಸರ್ಕಾರ ರಚಿಸಲು ನಮಗೆ ಆಹ್ವಾನಿಸಿ ಎಂದು ಪತ್ರದ ಮೂಲಕ ತೇಜಸ್ವಿ ಯಾದವ್ ರಾಜ್ಯಪಾಲರನ್ನು ಒತ್ತಾಯಿಸಿದ್ದಾರೆ. ಈ ಮೂಲಕ ಕರ್ನಾಟಕದಲ್ಲಿ ಅಧಿಕಾರ ಹಿಡಿಯಲು ಮುಂದಾಗಿದ್ದ ಬಿಜೆಪಿಗೆ ತೀವ್ರ ಮುಜುಗರ ಎದುರಾಗಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *