ಜನರಿಗೆ ನೀವು ಮೋಸ ಮಾಡುತ್ತಿದ್ದೀರಿ ಎಂಬುದು ಅರಿವಾಗುವುದಿಲ್ಲವೇ?: ಬಿಜೆಪಿಗೆ ರೈ ಪ್ರಶ್ನೆ

ಸಂಘ ಪರಿವಾರ ಮತ್ತು ಬಿಜೆಪಿ ವಿರುದ್ಧ ಬಹುಭಾಷಾ ನಟ ಪ್ರಕಾಶ್ ರೈ ಟ್ವೀಟ್ ವಾರ್ ಮುಂದುವರೆಸಿದ್ದು, #justasking ಹ್ಯಾಷ್​ಟ್ಯಾಗ್​​ನಡಿ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ತಾವು ನೀಡಿದ್ದ ಹೇಳಿಕೆಯನ್ನು ಬಿಜೆಪಿ ಪಕ್ಷದವರು ತಿರುಚಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ಆತ್ಮೀಯ ಕೋಮುವಾದಿ ಗ್ಯಾಂಗ್​​… ಎಂದು ಸಂಬೋಧಿಸಿದ್ದಲ್ಲದೆ, ಹೇಳಿಕೆ ತಿರುಚುವ ಮೂಲಕ ನೀವು ಹೇಡಿಗಳೆಂದು ಸಾಬೀತುಪಡಿಸಿದ್ದೀರಲ್ಲವೇ? ಹತಾಶೆಯಿಂದ ವರ್ತಿಸುತ್ತಿದ್ದೀರಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಪತ್ರದ ಮಾದರಿಯಲ್ಲಿ ಟ್ವೀಟ್ ಮಾಡಿರುವ ಅವರು, ಹತಾಶ ಹೇಡಿಗಳಿಗೆ ಸಂಬಂಧಿಸಿದಂತೆ ಎಂದು ಪತ್ರವನ್ನು ಆರಂಭಿಸಿದ್ದಾರೆ. ಮುಂದುವರೆದು, ಈ ದೇಶವನ್ನು ಸಮರ್ಥವಾಗಿ ಮುನ್ನಡೆಸುವ ಯಾವುದೇ ಪ್ರದೇಶದ ವ್ಯಕ್ತಿಯಾದರೂ ನಾಯಕನಾಗಲಿ ಎಂಬ ನನ್ನ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ. ಬೆಂಗಳೂರಿನ ಪ್ರಸ್ ಕ್ಲಬ್​​ನಲ್ಲಿ ನಾನು ನೀಡಿದ ಹೇಳಿಕೆಯನ್ನು ಕರ್ನಾಟಕ, ತಮಿಳುನಾಡು, ಆಂಧ್ರ, ತೆಲಂಗಾಣ, ಕೇರಳ ಅಥವಾ ಇಡೀ ಭಾರತದಲ್ಲಿ ಎಲ್ಲೇ ಆಗಲಿ, ಮುಂಬರುವ ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ನಿಮ್ಮ ಕೊಳಕು, ಕೋಮುವಾದಿ ಮತ್ತು ಒಡೆಯುವ ರಾಜಕಾರಣಕ್ಕೆ ಬಳಸಿಕೊಳ್ಳಬೇಡಿ ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ನನ್ನ ಹೇಳಿಕೆಯನ್ನು ತಿರುಚುವ ಮೂಲಕ ನನ್ನ ವಿರುದ್ಧ ದ್ವೇಷವನ್ನು ಹರಡಲು ಪ್ರಯತ್ನಿಸುತ್ತಿದ್ದೀರಿ. ಈ ಮೂಲಕ ಇನ್ನೊಂದು ರೀತಿಯಲ್ಲಿ ನೀವು ಭಯಗೊಂಡಿರುವುದನ್ನು ಮತ್ತು ಹತಾಷೆಗೊಂಡಿರುವುದನ್ನು ತೋರಿಸುತ್ತಿದ್ದೀರಿ. ಜನರಿಗೆ ನೀವು ಮೋಸ ಮಾಡುತ್ತಿದ್ದೀರಿ ಎಂಬುದು ಅರಿವಾಗುವುದಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ. ಈ ಮೂಲಕ ಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಎಂದಿನಂತೆ ಅವರ ಪರ ಮತ್ತು ವಿರುದ್ಧ ಟ್ವೀಟ್​​ಗಳು ವ್ಯಕ್ತವಾಗಿದ್ದು, ಬಿಜೆಪಿ ಮತ್ತು ಸಂಘ ಪರಿವಾರದ ಬೆಂಬಲಿಗರು ಪ್ರಕಾಶ್ ರೈ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಪ್ರಕಾಶ್ ರೈ ಅವರನ್ನು ಬೆಂಬಲಿಸಿರುವ ದೆಹಲಿಯ ಜವಾಹರ್​ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಾಯಕಿ ಶೆಹ್ಲಾ ರಶೀದ್, ಬಿಜೆಪಿ ಕೋಮುವಾದಿ ಪಕ್ಷ, ಅದು ಪ್ರಜಾಪ್ರಭುತ್ವದ ಪಕ್ಷವಲ್ಲ ಎಂದು ಟ್ವೀಟ್ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.

0

Leave a Reply

Your email address will not be published. Required fields are marked *