ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಇಳಿಕೆ: ಭಾರತದಲ್ಲಿ ಏರಿಕೆ – ಅಚ್ಚೇದಿನ್ ಎಲ್ಲಿ ಎನ್ನುತ್ತಿರುವ ನಾಗರಿಕರು

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಇಳಿಕೆ
ಅಕ್ಟೋಬರ್ 10ರಂದು ಕಚ್ಚಾ ತೈಲ ಬೆಲೆ 85. 16 ಡಾಲರ್
ಅಕ್ಟೋಬರ್ 11ರಂದು ಕಚ್ಚಾ ತೈಲ ಬೆಲೆ 83.82 ಡಾಲರ್
ಅಕ್ಟೋಬರ್ 12ರಂದು ಕಚ್ಚಾ ತೈಲ ಬೆಲೆ 80.51 ಡಾಲರ್
ಕಚ್ಚಾ ತೈಲ ಬೆಲೆ ಇಳಿದರೂ ಇಂಧನ ಬೆಲೆಯಲ್ಲಿ ಏರಿಕೆ

ದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತವಾಗಿ ಇಳಿಕೆಯಾಗಿದೆ. ಆದರೆ, ದೇಶೀ ತೈಲ ಕಂಪನಿಗಳು ಮಾತ್ರ ತೈಲ ಬೆಲೆಯನ್ನು ನಿರಂತವಾಗಿ ಏರಿಸಿವೆ. ಅಕ್ಟೋಬರ್ 10ರಂದು ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರಲ್​​ಗೆ 85. 16 ಡಾಲರ್ ಆಗಿದ್ದರೆ, ಅಕ್ಟೋಬರ್ 11ರಂದು ಕಚ್ಚಾ ತೈಲ ಬೆಲೆ 83.82 ಡಾಲರ್ ರೂಪಾಯಿಗೆ ಇಳಿಕೆಯಾಗಿತ್ತು. ನಂತರ ಇಂದು ಕೂಡ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆಯಾಗಿದ್ದು, ಪ್ರತಿ ಬ್ಯಾರೆಲ್ ಕಚ್ಚಾ ತೈಲ ಬೆಲೆ 80.51 ಡಾಲರ್ ರೂಪಾಯಿಗೆ ಇಳಿಕೆಯಾಗಿದೆ. ಆದರೆ, ಕಚ್ಚಾ ತೈಲ ಬೆಲೆ ಇಳಿದರೂ ಇಂಧನ ಬೆಲೆಯಲ್ಲಿ ಮಾತ್ರ ಏರಿಕೆಯಾಗಿದೆ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಇಳಿಕೆಯ ಲಾಭ ದೇಶದ ನಾಗರಿಕರಿಗೆ ದಕ್ಕದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯ ನಡುವೆ ದೇಶಾದ್ಯಂತ ಇಂದು ಕೂಡ ಇಂಧನ ಬೆಲೆಯಲ್ಲಿ ಏರಿಕೆ ಮುಂದುವರೆದಿದ್ದು, ದೆಹಲಿಯಲ್ಲಿ ಪೆಟ್ರೋಲ್ ದರ 82.48 ರೂಪಾಯಿಯಾದರೆ, ಡೀಸೆಲ್ ದರ 74.90 ರೂಪಾಯಿಗೆ ಏರಿಕೆಯಾಗಿದೆ. ಇನ್ನು ಮುಂಬೈನಲ್ಲಿ ಪೆಟ್ರೋಲ್ ದರ 87.94 ರೂಪಾಯಿಯಾದರೆ, ಡೀಸೆಲ್ ದರ 78.51 ರೂಪಾಯಿಗೆ ಏರಿಕೆಯಾಗಿದೆ. ದೆಹಲಿ ಮತ್ತು ಮುಂಬೈಗಳಲ್ಲಿ ಪೆಟ್ರೋಲ್ ದರ 12 ಪೈಸೆ ಏರಿಕೆಯಾದರೆ, ಡೀಸೆಲ್ ದರ ದೆಹಲಿಯಲ್ಲಿ 28, ಮುಂಬೈನಲ್ಲಿ 29 ಪೈಸೆ ಏರಿಕೆಯಾಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಇಳಿಕೆ ಮತ್ತು ದೇಶದಲ್ಲಿ ಇಂಧನ ಬೆಲೆ ಏರಿಕೆ ಕುರಿತು ತಕರಾರು ತೆಗೆದಿರುವ ಎಐಸಿಸಿ ವಕ್ತಾರ ರಣದೀಪ್ ಸುರ್ಜೆವಾಲ, ಒಂದು ಕೈಯಲ್ಲಿ ಕೊಟ್ಟರು, ಮತ್ತೊಂದು ಕೈಯಲ್ಲಿ ಕಿತ್ತುಕೊಂಡರು ಎಂದು ಟ್ವೀಟ್ ಮೂಲಕ ಅಸಮಧಾನ ವ್ಯಕ್ತಪಡಿಸಿದ್ದಾರೆ. ಅಕ್ಟೋಬರ್ 4ರಂದು 1.5 ರೂಪಾಯಿ ತೈಲ ಬೆಲೆಯಲ್ಲಿ ಇಳಿಕೆಯಾಗಿತ್ತು. 1 ವಾರದ ನಂತರ ಪೆಟ್ರೋಲ್ ದರದಲ್ಲಿ 98 ಪೈಸೆ, ಡೀಸೆಲ್ ದರದಲ್ಲಿ 1.95 ರೂಪಾಯಿ ಏರಿಕೆಯಾಗಿದೆ ಎಂದಿರುವ ಅವರು, ಮೋದಿಯವರೆ ಒಂದೇ ವಾರದಲ್ಲಿ ಎಂಥಾ ಮೋಸ. ನಿಮ್ಮಿಂದ ಇಂತವನ್ನೆಲ್ಲ ಕಲಿಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ನಡುವೆ ದೇಶದ ನಾಗರಿಕರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹಿಡಿ ಶಾಪ ಹಾಕಿ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ತೈಲ ಬೆಲೆ ಇಳಿಸಲು ಕೇಂದ್ರ ಕ್ರಮ ಕೈಗೊಂಡಿದೆ ಎಂಬ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಅರುಣ್ ಜೇಟ್ಲಿಯವರು ನೀಡಿದ್ದ ಭರವಸೆ ಹುಸಿಯಾಗಿದ್ದು, ದೇಶದ ನಾಗರಿಕರು ಅದರಲ್ಲೂ ಬಡ, ಮಧ್ಯಮ ವರ್ಗದವರು ಬೆಲೆ ಏರಿಕೆಯ ಬಿಸಿಯಲ್ಲಿ ಬಳಲುತ್ತಿದ್ದಾರೆ. ಆದರೆ, ಈ ಕುರಿತು ನಿರ್ಣಾಯಕ ತೀರ್ಮಾನ ಕೈಗೊಳ್ಳಬೇಕಾದ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಕೈಕಟ್ಟಿ ಕುಳಿತಿದೆ. ಇಂಧನವನ್ನು ಜಿಎಸ್​ಟಿ ವ್ಯಾಪ್ತಿಗೆ ತರಬೇಕು ಎಂಬ ಒತ್ತಾಯ ಕೂಡ ಕೇಳಿ ಬಂದಿದ್ದು, ಕೇಂದ್ರ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗಿಲ್ಲ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *