ಬಾಬ್ರಿ ಮಸೀದಿ ಧ್ವಂಸ – ರಾಮ ಮಂದಿರ ವಿವಾದ: ಮುಂದುವರೆದ ಕೆಸರೆರಾಚಾಟ

ಲಖ್ನೋ/ಅಹಮದಾಬಾದ್/ನವದೆಹಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಸಂಬಂಧ ನಿನ್ನೆ ಸುಪ್ರಿಂ ಕೋರ್ಟ್​​ನಲ್ಲಿ ನಡೆದ ವಿಚಾರಣೆಯ ವೇಳೆ ಕಪಿಲ್ ಸಿಬಲ್ ಮಂಡಿಸಿದ್ದ ವಾದ ರಾಜಕೀಯ ಸ್ವರೂಪ ಪಡೆದಿರುವುದನ್ನು, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಖಂಡಿಸಿದೆ. ಅಲ್ಲದೇ, ವಿಚಾರಣೆಗೂ ರಾಮಮಂದಿರ ನಿರ್ಮಾಣದ ದಿನಾಂಕ ನಿಗದಿ ವಿಚಾರಕ್ಕೂ ತಳುಕು ಹಾಕಿ ನಡೆಯುತ್ತಿರುವ ಚರ್ಚೆಗಳನ್ನು ಮಂಡಳಿ ಖಂಡಿಸಿದೆ. ಜೊತೆಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳಿಗೆ ರಾಜಕೀಯ ಹೇಳಿಕೆ ನೀಡಬೇಡಿ ಎಂದು ಮಂಡಳಿ ಮನವಿ ಮಾಡಿದೆ.

ಇನ್ನು ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆಯನ್ನು 2019ರ ಲೋಕಸಭೆ ಚುನಾವಣೆಯ ನಂತರ ನಡೆಸಬೇಕು ಎಂದು ವಾದಿಸಿದ್ದ ಕಪಿಲ್ ಸಿಬಲ್ ಅವರ ನಡೆ ವೈಯಕ್ತಿಕ. ಅವರ ಹೇಳಿಕೆಗೂ ಸುನ್ನಿ ವಕ್ಫ್ ಮಂಡಳಿಗೂ ಯಾವುದೇ ಸಂಬಂಧವಿಲ್ಲ ಎಂದಿದ್ದ ಮಂಡಳಿಯ ಸದಸ್ಯ ಹಾಜಿ ಮೆಹಬೂಬ್ ಯೂ ಟರ್ನ್ ತೆಗೆದುಕೊಂಡಿದ್ದಾರೆ.

ಬಾಬ್ರಿ ಮಸೀದಿ ಕಾರ್ಯಪಡೆಯ ಜಫರ್​​ಯಾಬ್ ಜಿಲಾನಿಯವರು ಕಪಿಲ್ ಅವರು ತಮ್ಮ ಅನುಮತಿ ಪಡೆದೇ ಕೋರ್ಟ್​​ನಲ್ಲಿ ವಾದಿಸಿದ್ದರು ಎಂದು ಅಭಿಪ್ರಾಯಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಹಾಜಿ ಮೆಹಬೂಬ್, ಜಿಲಾನಿಯವರ ಪ್ರಕಾರ ಜಿಲಾನಿಯವರು ಹೇಳಿದ್ದು ಸರಿಯಾಗಿದ್ದಲ್ಲಿ, ಈ ಕುರಿತು ನಾನು ಹೇಳುವುದು ಏನೂ ಇಲ್ಲ ಎಂದಿದ್ದಾರೆ.

ಹಾಜಿ ಮೆಹಬೂಬ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದ ಬಿಜೆಪಿ ನಾಯಕ ಸಂಬಿತ್ ಪಾತ್ರ, ಕಪಿಲ್ ಸಿಬಲ್ ಅವರು ಸುಪ್ರೀಂ ಕೋರ್ಟ್​​ನಲ್ಲಿ ನೀಡಿರುವ ಹೇಳಿಕೆ ವೈಯಕ್ತಿಕ ಎಂದು ಹಾಜಿ ಹೇಳಿದ್ದಾರೆ. ಈ ಮೂಲಕ ಅವರು ವೈಯಕ್ತಿಕವಾಗಿ ಮತ್ತು ರಾಜಕಾರಣಿಯಾಗಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ಕಪಿಲ್ ಸಿಬಲ್ ಅವರು ಒಬ್ಬ ವಕೀಲನಾಗಿ ಯಾವುದೇ ವಿಷಯದ ಪರವಾಗಿ ವಾದಿಸಬಹುದು. ಆದರೆ, ಅವರು ಈ ಹಿಂದೆ ಕಾನೂನು ಸಚಿವರಾಗಿದ್ದನ್ನು ಮರೆಯಬಾರದು ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದರು. ಅಲ್ಲದೇ, 2019ರ ಲೋಕಸಭೆ ಚುನಾವಣೆವರೆಗೆ ವಿಚಾರಣೆ ನಡೆಸಬಾರದು ಎಂಬುದಕ್ಕೆ ಏನಾದರೂ ಅರ್ಥವಿದೆಯೇ? ಎಂದು ಅವರು ಪ್ರಶ್ನಿಸಿದ್ದರು. ಅಲ್ಲದೇ, ಇದು ಬೇಜವಾಬ್ದಾರಿಯುತ ಹೇಳಿಕೆ ಎಂದು ಕಿಡಿಕಾರಿದ್ದರು.

ಇನ್ನು ಈ ಕುರಿತು ಗುಜರಾತ್ ವಿಧಾನಸಭೆಯ ಚುನಾವಣೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಕಪಿಲ್ ಅವರ ನಡೆಯನ್ನು ಪ್ರಶ್ನಿಸಿದ್ದರು. ರಾಮ ಮಂದಿರ ವಿಚಾರಕ್ಕೂ 2019ರ ಚುನಾವಣೆಗೂ ಸಂಬಂಧ ಕಲ್ಪಿಸುವುದು ಏಕೆ? ಎಂದು ಪ್ರಶ್ನಿಸಿದ ಅವರು, ವಿವಾದದ ಕುರಿತು ಸುಪ್ರೀಂ ಕೋರ್ಟ್​​ನಲ್ಲಿ ವಿಚಾರಣೆ ನಡೆಯುತ್ತಿದೆ. ಕಾಂಗ್ರೆಸ್ ಸಂಸದ ಕಪಿಲ್ ಸಿಬಲ್ ಮುಸಲ್ಮಾನ ಸಮಾಜದ ಪರವಾಗಿ ವಾದಿಸಲಿ ಅಥವಾ ಬಾಬ್ರಿ ಮಸೀದಿ ಪರವಾಗಿ ವಾದಿಸಲಿ. ನಮಗೆ ಯಾವುದೇ ವಿರೋಧವಿಲ್ಲ. ಆದರೆ, ಈ ವಿಷಯವನ್ನು ಲೋಕಸಭೆ ವಿಚಾರಣೆವರೆಗೆ ನಡೆಸಬೇಡಿ ಎನ್ನುವುದು ಯಾಕೆ? ಇದರ ಹಿಂದಿನ ರಾಜಕಾರಣವನ್ನು ನೀವೇ ಅರಿಯಿರಿ ಎಂದು ಜನರಿಗೆ ಕರೆ ನೀಡಿದರು.

ಈ ಕುರಿತು ಕಪಿಲ್ ಸಿಬಲ್ ಕೂಡ ಪ್ರತಿಕ್ರಿಯಿಸಿದ್ದಾರೆ. ಭಗವಂತನಿಗೆ ಯಾವಾಗ ಬೇಕೋ ಆಗಲೇ ರಾಮ ಮಂದಿರ ನಿರ್ಮಾಣವಾಗುತ್ತದೆ ಎಂದು ಹಿರಿಯ ವಕೀಲ ಮತ್ತು ಕಾಂಗ್ರೆಸ್ ಸಂಸದ ಕಪಿಲ್ ಸಿಬಲ್ ಅಭಿಪ್ರಾಯಪಟ್ಟಿದ್ದಾರೆ ಅಲ್ಲದೇ, ಪ್ರಧಾನಿ ನರೇಂದ್ರ ಮೋದಿಯವರು ಹೇಳುವುದಿರಂದ ಮಂದಿರ ನಿರ್ಮಾಣವಾಗುವುದಿಲ್ಲ. ಈ ವಿಷಯ ಕೋರ್ಟ್​​ನಲ್ಲಿ ವಿಚಾರಣೆ ಹಂತದಲ್ಲಿದೆ ಎಂದು ಅವರು ಹೇಳಿದ್ದಾರೆ. ಬಾಬ್ರಿ ಮಸೀದಿ ಕುರಿತು ಹೇಳಿಕೆ ನೀಡುವುದರಿಂದ ವಿವಾದ ಸೃಷ್ಟಿಯಾಗುತ್ತದೆ ಎಂದಿರುವ ಅವರು, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಾನು ಸುನ್ನಿ ವಕ್ಫ್ ಮಂಡಳಿ ಪರ ವಾದಿಸುವ ವಿಷಯದ ಕುರಿತು ಚರ್ಚೆ ನಡೆಸುವುದು ಏಕೆ? ಹೀಗೆ ಚರ್ಚಿಸುವುದರಿಂದ ಗಂಭೀರ ವಿಷಯ ಪರಿಹಾರವಾಗುವುದೇ? ಎಂದು ಅವರು ಪ್ರಧಾನಿ ನಡೆಯನ್ನು ಪ್ರಶ್ನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರಿಗೆ ವಾಸ್ತವವಾಗಿ ನೈಜ ಅಂಶಗಳ ಕುರಿತು ಅರಿವಿಲ್ಲ. ಸುಪ್ರೀಂ ಕೋರ್ಟ್​​ನಲ್ಲಿ ನಾನು ಸುನ್ನಿ ವಕ್ಫ್ ಮಂಡಳಿಯನ್ನು ಪ್ರತಿನಿಧಿಸಿಲ್ಲ. ಮತ್ತು ನಾನು ಸುನ್ನಿ ವಕ್ಫ್ ಮಂಡಳಿಯನ್ನು ಪ್ರತಿನಿಧಿಸಿದ್ದೇನೆ ಎಂದಿರುವುದಕ್ಕೆ ಅವರಿಗೆ ಧನ್ಯವಾದಗಳು ಎಂದ ಅವರು, ತಮ್ಮ ವಿರುದ್ಧ ಹೇಳಿಕೆ ನೀಡುವ ಮುನ್ನ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.

ಇದರೊಂದಿಗೆ, ನಾವು ಭಗವಂತನಲ್ಲಿ ನಂಬಿಕೆ ಇಟ್ಟಿದ್ದೇವೆ. ನಾವು ಮೋದಿಯವರನ್ನು ನಂಬುವುದಿಲ್ಲ ಎಂದ ಅವರು, ನೀವು ಮಸೀದಿಯನ್ನು ಕಟ್ಟುವುದಿಲ್ಲ ಎಂದು ಭವಿಷ್ಯವನ್ನೂ ನುಡಿದಿದ್ದಾರೆ. ಅಲ್ಲದೇ, ದೇವರಿಗೆ ಬೇಕಾದಾಗ ಮಂದಿರ ನಿರ್ಮಾಣವಾಗುತ್ತದೆ ಎಂದ ಅವರು, ಕೋರ್ಟ್ ಈ ವಿಷಯವನ್ನು ನಿರ್ಧರಿಸುತ್ತದೆ ಎಂದು ಕೂಡ ಅಭಿಪ್ರಾಯಪಟ್ಟಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಮುಸ್ಲಿಂ ವೈಯಕ್ತಿಕ ಮಂಡಳಿ, ಸುನ್ನಿ ವಕ್ಫ್ ಮಂಡಳಿ ಮತ್ತು ಬಾಬ್ರಿ ಮಸೀದಿ ಕಾರ್ಯಪಡೆ ಸದಸ್ಯ ಮತ್ತು ಕಪಿಲ್ ಸಿಬಲ್ ಅವರ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳು ಮತ್ತು ಸಹಮತ ವ್ಯಕ್ತವಾಗಿದ್ದು, ಮುಂದೆ ಈ ಪ್ರಕರಣ ಯಾವ ತಿರುವು ಪಡೆಯಲಿದೆ ಎಂಬ ಕುತೂಹಲ ಮೂಡಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *