ಕಾಂಗ್ರೆಸ್ – ಜೆಡಿಎಸ್ ಮೈತ್ರಿ: 8 ಕ್ಷೇತ್ರ ಜೆಡಿಎಸ್​ಗೆ ಬಿಟ್ಟುಕೊಡಲು ಸಹಮತ

ಬೆಂಗಳೂರು: 17ನೇ ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಬಿಜೆಪಿಗಿಂತ ಕಾಂಗ್ರೆಸ್ ಇಂದು ಒಂದು ಹೆಜ್ಜೆ ಮುಂದಿಟ್ಟಿದ್ದು, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್​ಗೆ ರವಾನಿಸಲಾಗಿದೆ. ಕಾಂಗ್ರೆಸ್  ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಬಹುತೇಕ ಅಂತಿಮಗೊಂಡಿದೆ. ಕಳೆದ ಚುನಾವಣೆಯಲ್ಲಿ ಗೆಲುವ ಸಾಧಿಸಿದ ಎಲ್ಲ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಸ್ಪರ್ಧಿಸಲು ಟಿಕೆಟ್ ನೀಡುವಂತೆ ಹೈಕಮಾಂಡ್​ಗೆ ಶಿಫಾರಸು ಮಾಡಲು ರಾಜ್ಯ ಕಾಂಗ್ರೆಸ್ ಚುನಾವಣಾ ಸಮಿತಿ ತೀರ್ಮಾನಿಸಿದೆ. ಜಿಲ್ಲಾ ಕಾಂಗ್ರೆಸ್ ಸಮಿತಿಗಳ ವರದಿ ಹಾಗೂ ಜಿಲ್ಲಾ ವೀಕ್ಷಕರ ವರದಿಯನ್ನು ಸಮಗ್ರವಾಗಿ ಅವಲೋಕನ ನಡೆಸಿದ ಚುನಾವಣಾ ಸಮಿತಿ ಗೆಲುವಿನ ಮಾನದಂಡ ಆಧರಿಸಿ, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಿತು.

ರಾಜ್ಯದಲ್ಲಿ ಕಾಂಗ್ರೆಸ್ ಮೈತ್ರಿ ಪಕ್ಷ ಜೆಡಿಎಸ್​ಗೆ 8 ಸ್ಥಾನ ಕೊಡಬಹುದು ಎಂಬ ಅಭಿಪ್ರಾಯಕ್ಕೆ ಬಂದಿರುವ ಚುನಾವಣಾ ಸಮಿತಿ, ಸದ್ಯ ಜೆಡಿಎಸ್ ಗೆದ್ದಿರುವ ಹಾಸನ ಮತ್ತು ಮಂಡ್ಯ ಕ್ಷೇತ್ರಗಳ ಜೊತೆಗೆ ಶಿವಮೊಗ್ಗ, ಬೆಂಗಳೂರು ಉತ್ತರ, ಬೀದರ್, ವಿಜಯಪುರ ಮತ್ತು ಉಡುಪಿ – ಚಿಕ್ಕಮಗಳೂರು ಸೇರಿದಂತೆ ಒಟ್ಟು 8 ಕ್ಷೇತ್ರಗಳನ್ನು ಬಿಟ್ಟು ಕೊಡಬಹುದು. ಆದರೆ, ಈ ವಿಷಯದಲ್ಲಿ ಹೈಕಮಾಂಡ್ ತೀರ್ಮಾನ ಕೈಗೊಳ್ಳಬಹುದು ಎಂದು ರಾಜ್ಯ ಚುನಾವಣಾ ಸಮಿತಿ ಹೈಕಮಾಂಡ್​ಗೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ.

ಇನ್ನುಳಿದಂತೆ ಬೆಂಗಳೂರು ಕೇಂದ್ರ ಕ್ಷೇತ್ರದಿಂದ ರಿಜ್ವಾನ್ ಹರ್ಷದ್ ಅಥವಾ ಬಿ.ಕೆ.ಹರಿಪ್ರಸಾದ್, ಮಂಗಳೂರಿನಿಂದ ರಮಾನಾಥ್ ರೈ ಅಥವಾ ಮೊಹಿದ್ದೀನ್ ಭಾವಾ, ಉತ್ತರ ಕನ್ನಡದಿಂದ ಜೆ.ಡಿ.ನಾಯಕ ಅಥವಾ ಭೀಮಣ್ಣ ನಾಯಕ್, ಧಾರವಾಡ ದಕ್ಷಿಣದಿಂದ ವಿನಯ್ ಕುಲಕರ್ಣಿ, ಹಾವೇರಿಯಿಂದ ಡಿ.ಆರ್.ಪಾಟೀಲ್, ಬೆಳಗಾವಿಯಿಂದ ರಮೇಶ್ ಜಾರಕಿಹೊಳಿ ಅಥವಾ ಫಿರೋಜ್ ಶೇಟ್, ದಾವಣಗೆರೆಯಿಂದ ಎಸ್.ಎಸ್.ಮಲ್ಲಿಕಾರ್ಜುನ್, ಮೈಸೂರಿನಿಂದ ಬಿ.ಎ.ವಿಜಯಶಂಕರ್, ಕೊಪ್ಪಳದಿಂದ ಇಕ್ಬಾಲ್ ಅನ್ಸಾರಿ ಹಾಗೂ ಬೆಂಗಳೂರು ದಕ್ಷಿಣದಿಂದ ಕೃಷ್ಣ ಬೈರೇಗೌಡ, ರಾಮಲಿಂಗಾ ರೆಡ್ಡಿಯವರಿಗೆ ಟಿಕೆಟ್ ನೀಡುವಂತೆ ಶಿಫಾರಸು ಮಾಡಿದೆ.

0

Leave a Reply

Your email address will not be published. Required fields are marked *