ಎನ್​​ಡಿಎ ಮೈತ್ರಿಕೂಟದಲ್ಲಿ ಭುಗಿಲೆದ್ದ ಅಸಮಧಾನ: ಅಮಿತ್ ಶಾಗೆ ಹಿನ್ನಡೆ

ಎನ್​ಡಿಎ ಮೈತ್ರಿಕೂಟ ಬೆಸೆಯಲು ಮುಂದಾದ ಶಾ
ಎರಡು ಮೈತ್ರಿ ಪಕ್ಷಗಳಲ್ಲಿ ಭಿನ್ನಾಭಿಪ್ರಾಯ
ಎನ್​​ಡಿಎ ಜೊತೆ ನಮ್ಮದು ಶಾಶ್ವತ ಸಂಬಂಧ ಎಂದ ಅಕಾಲಿ ದಳ

2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೇತರ ಪಕ್ಷಗಳು ಒಗ್ಗೂಡುವ ಮುನ್ಸೂಚನೆ ಸಿಕ್ಕ ಬೆನ್ನಲ್ಲೇ ಅಮಿತ್ ಶಾ, ಎನ್​ಡಿಎ ಮೈತ್ರಿಕೂಟದ ಪಕ್ಷಗಳ ನಾಯಕರನ್ನು ಭೇಟಿಯಾದರು. ಆದರೆ, ಅವರಿಗೆ ಸಿಹಿ – ಕಹಿಯ ಅನುಭವಗಳು ಎದುರಾಗಿದ್ದು, ಹಳೆಯ ಮೈತ್ರಿಕೂಟ ಶಿವಸೇನೆ ಮತ್ತು ಜೆಡಿಯು ತಕರಾರು ತೆಗೆದರೆ, ಅಕಾಲಿದಳ ಎನ್​ಡಿಎಯಲ್ಲಿ ಉಳಿಯುವುದಾಗಿ ಹೇಳಿಕೆ ನೀಡಿದೆ.

ದೇಶದಲ್ಲಿ ವಿಪಕ್ಷಗಳು ಬಿಜೆಪಿ ವಿರುದ್ಧ ಒಗ್ಗಟ್ಟಗುತ್ತಿದ್ದಂತೆ ಬಿಜೆಪಿಗೆ ಬಲ ತುಂಬಲು ಅಮಿತ್ ಶಾ ಕಸರತ್ತು ನಡೆಸಿದ್ದಾರೆ. ನಿನ್ನೆ 3 ದಶಕದಷ್ಟು ಹಳೆಯ ಮೈತ್ರಿ ಪಕ್ಷ ಶಿವಸೇನೆ ಜೊತೆ ಮಾತುಕತೆ ನಡೆಸಿದ್ದರು. ಆದರೆ, ಮೈತ್ರಿಕೂಟದ ಬಿರುಕು ಮುಂದುವರೆದಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ಶಿವಸೇನೆ ಸಂಸದ ಸಂಜಯ್ ರಾವುತ್, ಮಹಾರಾಷ್ಟ್ರದಲ್ಲಿ ನಾವು ಪ್ರತ್ಯೇಕವಾಗಿ ಸ್ಪರ್ಧಿಸುತ್ತೇವೆ ಎಂದಿದ್ದಾರೆ. ಅಮಿತ್ ಶಾ ಅಜೆಂಡಾ ಕುರಿತು ನಮಗೆ ಅರಿವಿದೆ. ನಾವು ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇವೆ. ಭವಿಷ್ಯದ ಎಲ್ಲ ಚುನಾವಣೆಗಳಲ್ಲೂ ನಾವು ಸ್ವಂತ ಬಲದ ಮೇಲೆ ಏಕಾಂಗಿಯಾಗಿ ಸ್ಪರ್ಧಿಸುತ್ತೇವೆ. ಈ ನಿರ್ಧಾರದಲ್ಲಿ ಯಾವುದೇ ಬದಲವಾವಣೆ ಇಲ್ಲ ಎಂದಿದ್ದಾರೆ.

ನಿತೀಶ್ ಕುಮಾರ್ ಮತ್ತು ಜೆಡಿಯು ಬಿಹಾರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ ಎಂದು ಜೆಡಿಯು ಪ್ರಧಾನ ಕಾರ್ಯದರ್ಶಿ ಶ್ಯಾಮ್ ರಾಜಕ್ ಹೇಳಿದ್ದಾರೆ. ಅಲ್ಲದೇ, ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಹಾರದಿಂದ ನಾವು 25 ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೆವು. ಇದಕ್ಕಿಂಥ ಕಡಿಮೆ ಸ್ಥಾನಗಳ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದಿದ್ದಾರೆ. ಎನ್​ಡಿಎ ನಿತೀಶ್ ಕುಮಾರ್ ಅವರ ಪ್ರಭಾವದಿಂದ ಲಾಭ ಪಡೆಯಬೇಕಾದಲ್ಲಿ, ಜೆಡಿಯುಗೆ ನ್ಯಾಯ ಒದಗಿಸಬೇಕು ಎಂದು ಅವರು ಹೇಳಿದ್ದಾರೆ.

ಇನ್ನು ಹೈಕೋರ್ಟ್, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇಮಿಸುವ ಕೊಲೋಜಿಯಂ ಕುರಿತು ತಕರಾರು ತೆಗೆದಿದ್ದ ಮಾನವ ಸಂಪನ್ಮೂಲ ಇಲಾಖೆಯ ರಾಜ್ಯ ಸಚಿವ ಉಪೇಂದ್ರ ಖುಷ್ವಾಹ ಹೇಳಿಕೆಗೆ ತಿರುಗೇಟು ನೀಡಿರುವ ರಾಜಕ್, ಬಿಹಾರದಲ್ಲಿ ನ್ಯಾಯಾಂಗದಲ್ಲಿ ಮೀಸಲಾತಿ ಜಾರಿಯಲ್ಲಿದೆ. ಇದನ್ನು ಸುಪ್ರೀಂ ಕೋರ್ಟ್, ಹೈ ಕೋರ್ಟ್​ನಲ್ಲಿ ಯಾಕೆ ಜಾರಿಗೆ ತರಲು ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದು ಬಿಜೆಪಿಯ ಉದ್ದೇಶಗಳ ಮೇಲೆ ಅನುಮಾನವನ್ನು ಮೂಡಿಸುತ್ತದೆ. ಬಿಜೆಪಿಗರು ಅಂಬೇಡ್ಕರ್ ಮತ್ತು ದಲಿತರ ಪರವಾಗಿದ್ದಲ್ಲಿ ದಲಿತರಿಗೆ, ಬಿಹಾರಕ್ಕೆ ಮತ್ತು ನಮಗೆ ಮೈತ್ರಿಯಲ್ಲಿ ಗೌರವಯುತ ಸಹಭಾಗಿತ್ವವನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಬಿಹಾರ ಎನ್​ಡಿಎ ಮೈತ್ರಿಕೂಟದಲ್ಲಿ ಮತ್ತೊಮ್ಮೆ ಬಿರುಕು ಕಾಣಿಸಿಕೊಂಡಿದ್ದು, ರಾಷ್ಟ್ರೀಯ ಲೋಕ ಸಮತಾ ಪಕ್ಷ ಹೊಸದಾಗಿ ಕಿರಿಕಿರಿ ಆರಂಭಿಸಿದೆ. ಲೋಕಸಭೆ ಚುನಾವಣೆಯಲ್ಲಿ ಎನ್​ಡಿಎ ಗೆಲುವು ಸಾಧಿಸಿದಲ್ಲಿ ಉಪೇಂದ್ರ ಖುಷ್​ವಾಹಾ ಸಿಎಂ ಆಗುತ್ತಾರೆ ಎಂದು ಆರ್​ಎಸ್​ಎಲ್​​ಪಿಯ ಕಾರ್ಯಾಧ್ಯಕ್ಷ ನಾಗಮಣಿ ಹೇಳಿದ್ದಾರೆ. ನಾವು ನಿತೀಶ್ ಕುಮಾರ್ ವಿರುದ್ಧ ಇಲ್ಲ ಎಂದಿರುವ ಅವರು, ನಿತೀಶ್ ಹೆಸರಿನಲ್ಲಿ ಎನ್​ಡಿಎ ಗೆಲ್ಲುವ ಪರಿಸ್ಥಿತಿ ಇಲ್ಲ ಎನ್ನುವ ಮೂಲಕ ಮೈತ್ರಿ ಕೂಟದ ನಡುವೆ ಭಿನ್ನಾಭಿಪ್ರಾಯ ಇರುವುದನ್ನು ಜಗಜ್ಜಾಹೀರು ಮಾಡಿದ್ದಾರೆ.

ಜೆಡಿಯುಗಿಂಥ ನಮ್ಮದು ದೊಡ್ಡ ಪಕ್ಷ ಎಂದಿರುವ ಪಕ್ಷದ ನಾಯಕ ನಾಗಮಣಿ, ಲೋಕಸಭೆ ಕ್ಷೇತ್ರಗಳ ಪೈಕಿ ಜೆಡಿಯು 2ರಲ್ಲಿ ಗೆದ್ದಿದೆ. ನಾವು 3 ಕ್ಷೇತ್ರಗಳಲ್ಲಿ ಗೆದ್ದಿದ್ದೇವೆ. ನಮ್ಮದು ದೊಡ್ಡ ಪಕ್ಷವಾದ್ದರಿಂದ, ನಾವು ನಿತೀಶ್ ಕುಮಾರ್ ಅವ​ರನ್ನು ನಮ್ಮ ನಾಯಕ ಎಂದು ಒಪ್ಪುವುದಿಲ್ಲ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಅಲ್ಲದೇ, ನಿತೀಶ್ ಕುಮಾರ್ ಯಾವಾಗ ಬೇಕಾದರೂ ಲಾಲು ಪರ ಯೂಟರ್ನ್ ತೆಗೆದುಕೊಳ್ಳಬಹುದು. ಅವ​​ರನ್ನು ನಾವು ನಂಬುವುದಿಲ್ಲ ಎಂದಿದ್ದಾರೆ.

ಈ ನಡುವೆ, ಪಾಟ್ನಾದಲ್ಲಿ ಎನ್​ಡಿಎ ಮೈತ್ರಿಕೂಟಕ್ಕೆ ಬಿಜೆಪಿ ಔತಣ ಕೂಟ ಏರ್ಪಡಿಸಿದೆ. ಆದರೆ, ಮೀಸಲಾತಿ ಕುರಿತು ಮೈತ್ರಿಕೂಟದಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಮಾನವ ಸಂಪನ್ಮೂಲ ಇಲಾಖೆಯ ರಾಜ್ಯ ಸಚಿವ ಮತ್ತು ರಾಷ್ಟ್ರೀಯ ಲೋಕ ಸಮತಾ ಪಕ್ಷದ ನಾಯಕ ಉಪೇಂದ್ರ ಖುಷ್ವಾಹ ಔತಣಕೂಟದಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ. ಈ ಮೂಲಕ 2019ರ ಲೋಕಸಭೆ ಚುನಾವಣೆಗೆ 11 ತಿಂಗಳ ಮುನ್ನವೇ ಮೈತ್ರಿ ಕೂಟದಲ್ಲಿ ಸೀಟು ಹಂಚಿಕೆ ಹಾಗೂ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ಅಸಮಧಾನ ಭುಗಿಲೆದ್ದಿದೆ.

ಇನ್ನು ಪಂಜಾಬ್​ಗೆ ತೆರಳಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಶಿರೋಮಣಿ ಅಕಾಲಿದಳದ ನಾಯಕರೊಂದಿಗೆ ಮಾತುಕತೆ ನಡೆಸಿದರು. ನಂತರ ಪ್ರತಿಕ್ರಿಯಿಸಿದ ಪಕ್ಷದ ನಾಯಕ ಸುಖ್​ಬೀರ್ ಸಿಂಗ್ ಬಾದಲ್, ಶಿರೋಮಣಿ ಅಕಾಲಿ ದಳ ಬಿಜೆಪಿಯ ಶಾಶ್ವತ ಮೈತ್ರಿ ಪಕ್ಷ ಎಂದರು. ಅಲ್ಲದೇ, ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದಿರುವ ಅವರು, ನಮ್ಮ ಎಲ್ಲ ಮೈತ್ರಿ ಪಕ್ಷಗಳೂ 6 ತಿಂಗಳ ಕಾಲ ಹೋರಾಡಬೇಕು ಎಂದು ಕರೆ ನೀಡಿದ್ದಾರೆ. ನಾವೆಲ್ಲ ಒಗ್ಗಟ್ಟಾಗಿ ನಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ನಡೆಯಬೇಕು ಎಂದು ಅವರು ಕರೆ ನೀಡಿದ್ದಾರೆ.

ಒಟ್ಟಿನಲ್ಲಿ ಮಹಾರಾಷ್ಟ್ರದಲ್ಲಿ ಶಿವಸೇನೆಯೊಂದಿಗೆ ಮೈತ್ರಿ ಮುಂದುವರೆಸುವಂತೆ ಮನ ಒಲಿಸುವ ಅಮಿತ್ ಶಾ ತಂತ್ರ ವಿಫಲವಾಗಿದ್ದರೆ, ಬಿಹಾರದಲ್ಲಿ ಕೂಡ ಹಗ್ಗಜಗ್ಗಾಟ ಆರಂಭವಾಗಿದೆ. ಆದರೆ, ಪಂಜಾಬ್​​ನಲ್ಲಿ ಮೈತ್ರಿ ಸುಭದ್ರ ಎಂಬ ನೆಮ್ಮದಿ ಬಿಜೆಪಿ ಸಿಕ್ಕಿದೆ. ಎನ್​ಡಿಎಯಿಂದ ಟಿಡಿಪಿ, ಟಿಆರ್​ಎಸ್ ಹೊರಬಂದ ನಂತರ ಇನ್ನಷ್ಟು ಪಕ್ಷಗಳು ಬಿಜೆಪಿಯೊಂದಿಗೆ ಸಂಬಂಧ ಕಡಿದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಇನ್ನು ಒಂದು ವರ್ಷದ ಒಳಗೆ ಯಾವೆಲ್ಲ ಬದಲಾವಣೆಗಳು ನಡೆಯುತ್ತವೆಯೋ ಕಾದು ನೋಡಬೇಕಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *