ಕಾಶ್ಮೀರದಲ್ಲಿ ಮುಂದುವರೆದ ಉಗ್ರರ ಅಟ್ಟಹಾಸ: ಪತ್ರಕರ್ತನ ಹತ್ಯೆಗೆ ಖಂಡನೆ

ಜಮ್ಮು ಕಾಶ್ಮೀರದಲ್ಲಿ ರಂಜಾನ್ ಪ್ರಯುಕ್ತ ಕೇಂದ್ರ ಸರ್ಕಾರ ಕದನ ವಿರಾಮವನ್ನು ಘೋಷಿಸಿತ್ತು. ಆದರೆ, ಯೋಧರು, ಸೈನಿಕರ ಹತ್ಯೆಯೊಂದಿಗೆ ಪತ್ರಕರ್ತರ ಹತ್ಯೆ ಕೂಡ ನಡೆದಿದ್ದು, ಇಂದು ಕೂಡ ಯೋಧರ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ರಂಜಾನ್ ಮುನ್ನಾ ದಿನ ಕೂಡ ಉಗ್ರರು ಅಟ್ಟಹಾಸ ಮುಂದುವರೆಸಿದ್ದು, ಪೊಲೀಸ್ ಬೆಂಗಾವಲು ಪಡೆ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಇಬ್ಬರು ಪೊಲೀಸರು ಮತ್ತು ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಇದೇ ಮಾದರಿಯಲ್ಲಿ ಬೆಂಗಾವಲು ಪಡೆ ಮತ್ತು ನಾಗರಿರಕ ಮೇಲೆ ಉಗ್ರರು ನಿರಂತರ ದಾಳಿ ನಡೆಸುತ್ತಿದ್ದಾರೆ.

ಇನ್ನು ನಿನ್ನೆ ರಾತ್ರಿ ಶ್ರೀನಗರದಲ್ಲಿ ರೈಸಿಂಗ್ ಕಾಶ್ಮೀರ್ ಪತ್ರಿಕೆಯ ಸಂಪಾದಕ ಶುಜಾತ್ ಬುಖಾರಿಯವರನ್ನು ಉಗ್ರರು ಹತ್ಯೆಗೈದಿದ್ದಾರೆ. ಇದುವರೆಗೆ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ 4 ಆರೋಪಿಗಳ ಭಾವಚಿತ್ರಗಳನ್ನು ಬಿಡುಗಡೆಗೊಳಿಸಿರುವ ಪೊಲೀಸರು, ಆರೋಪಿಗಳ ಪತ್ತೆಗೆ ನೆರವಾಗುವಂತೆ ಮನವಿ ಮಾಡಿದ್ದಾರೆ. ಕಾಶ್ಮೀರದಲ್ಲಿ ಪತ್ರಕರ್ತ ಶುಜಾತ್ ಬುಖಾರಿ ಹತ್ಯೆಯನ್ನು ಭಾರತದ ಅಮೆರಿಕ ರಾಯಭಾರಿ ಖಂಡಿಸಿದ್ದಾರೆ. ನಿನ್ನೆ ರಾತ್ರಿ ಶುಜಾತ್ ಬುಕಾರಿಯವರನ್ನು ಉಗ್ರರು ಗುಂಡಿಕ್ಕಿ ಹತ್ಯೆಗೈದಿದ್ದರು. ಘಟನೆ ಖಂಡಿಸಿ ಹೇಳಿಕೆ ನೀಡಿರುವ ಕೆನ್ನೆತ್ ಜಸ್ಟರ್, ಅತ್ಯಂತ ಗೌರವಾರ್ಹ ಪತ್ರಕರ್ತ, ರೈಸಿಂಗ್ ಕಾಶ್ಮೀರದ ಸಂಪಾದಕರ ಹತ್ಯೆನ್ನು ಖಂಡಿಸುವುದಾಗಿ ಟ್ವೀಟ್ ಮೂಲಕ ಹೇಳಿಕೆ ನೀಡಿದ್ದಾರೆ.

ಶುಜಾತ್ ಬುಖಾರಿ ಹತ್ಯೆ ಹೇಡಿಗಳ ಕೃತ್ಯ ಎಂದಿರುವ ಡಿಸಿಎಂ ಕವೀಂದರ್ ಗುಪ್ತಾ, ಸಿಸಿಟಿವಿ ದೃಶ್ಯಗಳು ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾಳಜಿ ತೋರಿಸಬೇಕಾದ ಸಂಗತಿ ಎಂದ ಅವರು, ಭದ್ರತಾ ಕ್ರಮಗಳನ್ನು ಪರಿಶೀಲೀಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ದೇಶದಲ್ಲಿ ಸೈನಿಕರು, ಪತ್ರಕರ್ತರು, ಸಜ್ಜನರು, ಕೂಲಿಗಳು, ವಿದ್ಯಾರ್ಥಿಗಳ ಹತ್ಯೆ ನಡೆಯುತ್ತಿದೆ. ಯೋಧರ ಹತ್ಯೆ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಸರತ್ತು ನಡೆಸುತ್ತಾರೆ ಎಂದು ಸಮಾಜವಾದಿ ಪಕ್ಷದ ಹಿರಿಯ ನಾಯಕ ಆಜಂ ಖಾನ್ ಕಿಡಿಕಾರಿದರು. ಜೊತೆಗೆ, ಪ್ರಧಾನಿ ಫಿಟ್, ದೇಶ ಅನ್​​ಫಿಟ್ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈ ನಡುವೆ ನಿನ್ನೆ ಅಪಹರಣಕ್ಕೊಳಗಾಗಿದ್ದ ಯೋಧ ಔರಂಗಜೇಬ್​ರನ್ನು ಉಗ್ರರು ಹತ್ಯೆಗೈದು ಶವವನ್ನು ಎಸೆದು ಪರಾರಿಯಾಗಿದ್ದರು. ಯೋಧನ ಅಂತ್ಯ ಸಂಸ್ಕಾರ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೆರೆದ ದೇಶಾಭಿಮಾನಿಗಳು ಶಹೀದ್ ಔರಂಗಜೇಬ್ ಅಮರ್ ರಹೇ ಎಂದು ಘೋಷಣೆ ಕೂಗಿ, ಉಗ್ರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಉಗ್ರರಿಗೆ ಬಲಿಯಾದ ಪೂಂಚ್​​ನ ಮೆಂಧರ್​​ನ ಯೋಧ ಪಂಚಭೂತಗಳಲ್ಲಿ ಲೀನವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.

ಒಟ್ಟಿನಲ್ಲಿ ಕಾಶ್ಮೀರದಲ್ಲಿ ಬಿಗುವಿನ ವಾತಾವರಣವನ್ನು ಸಹಜ ಸ್ಥಿತಿಗೆ ತರುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿರುವುದರ ವಿರುದ್ಧ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿದ್ದು, ಅಮಾಯಕರ ಬಲಿಗೆ ಕೇಂದ್ರ ಸರ್ಕಾರ ಇನ್ನಾದರೂ ಕ್ರಮ ಕೈಗೊಳ್ಳಲಿದೆಯೇ ಎಂಬ ಪ್ರಶ್ನೆ ಎದುರಾಗಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *