ಜಿಡಿಪಿ ಕುಸಿತ: 3 ಲಕ್ಷ ಕೋಟಿ ಕಳೆದುಕೊಂಡ ಭಾರತ ವರ್ಸಸ್ ಪ್ರಧಾನಿ ಸಮರ್ಥನೆ

ಕೇಂದ್ರ ಸರ್ಕಾರದ ವಿವಿಧ ಆರ್ಥಿಕ ನೀತಿಗಳಿಂದಾಗಿ ದೇಶದ ಖಾಸಗಿ ಕ್ಷೇತ್ರದ ಉದ್ಯೋಗ ಸೃಷ್ಟಿಯಲ್ಲಿ ಹಿಂದಿಳಿದಿರುವ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ನಡುವೆ, ಉದ್ಯೋಗ ಕಡಿತ ಆರ್ಥಿಕತೆಗೆ ಶುಭ ಸಂಕೇತ ಎಂದು ಕೇಂದ್ರ ರೈಲ್ವೇ ಸಚಿವ ಪೀಯುಷ್ ಗೋಯಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ತರಾತುರಿಯಲ್ಲಿ ಕೇಂದ್ರ ಸರ್ಕಾರ ಎರಡು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿತ್ತು. ಅವುಗಳ ಪೈಕಿ ನವೆಂಬರ್ 8, 2016ರಂದು ಗರಿಷ್ಠ ಮುಖಬೆಲೆಯ ನೋಟುಗಳನ್ನು ಪ್ರಧಾನಿ ನಿಷೇಧಿಸುವ ನಿರ್ಧಾರ ಕೈಗೊಂಡಿದ್ದರು. ಅದಾದ ಎಂಟು ತಿಂಗಳ ಒಳಗೆ ಮತ್ತೊಂದು ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿತ್ತು. ಅದು ಜುಲೈ ಒಂದರಿಂದ ಜಾರಿಗೆ ತಂದ ಸರಕು ಮತ್ತು ಸೇವಾ ತೆರಿಗೆ ಜಾರಿ ನಿರ್ಧಾರ. ಈ ಎರಡು ನಿರ್ಧಾರಗಳು ದೇಶದ ಅಸಂಘಟಿತ ಪೌರಕಾರ್ಮಿಕರು ಮತ್ತು ಸಣ್ಣ ಉದ್ಯಮಗಳ ಮೇಲೆ ಭಾರೀ ದುಷ್ಪರಿಣಾಮ ಬೀರಿದವು.

ಇದರಿಂದ ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ಉಂಟಾದ ದುಷ್ಪರಿಣಾಮವನ್ನು ಇದುವರೆಗೆ ಕರಾರುವಕ್ಕಾಗಿ ಲೆಕ್ಕ ಹಾಕಲು ಕೂಡ ಸಾಧ್ಯವಾಗಿಲ್ಲ. ಈ ಎರಡು ಪ್ರಮುಖ ನಿರ್ಧಾರಗಳನ್ನು ಕೇಂದ್ರ ಸರ್ಕಾರ, ಕೇಂದ್ರ ಸಚಿವರು ಮತ್ತು ಸ್ವತಃ ಪ್ರಧಾನಿಗಳು ಮತ್ತೆಮತ್ತೆ ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದು ಸಂಘಪರಿವಾರದ ಒಂದು ಸುಳ್ಳನ್ನು ಸಾವಿರ ಬಾರಿ ಸಾರಿ, ನಿಜವಾಗಿಸುವ ಕುತಂತ್ರದ ಮುಂದುವದರಿ ಭಾಗವಾಗಿದೆ.

ದೇಶದ ಜಿಡಿಪಿ 2 ಅಂಶಗಳಷ್ಟು ಕುಸಿದದ್ದನ್ನು ಸಮರ್ಥಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಈ ಹಿಂದಿನ ಸರ್ಕಾರದ ಅವಧಿಯಲ್ಲೂ ಜಿಡಿಪಿ ಕುಸಿದಿತ್ತು ಎಂದರು. ಆದರೆ, ನೋಟು ನಿಷೇಧ ಮತ್ತು ಜಿಎಸ್​ಟಿ ಜಾರಿ ನಂತರ ಜಿಡಿಪಿ ಕುಸಿದದ್ದಕ್ಕೆ ಈ ಹಿಂದೆ ಕೂಡ ಜಿಡಿಪಿ ಕುಸಿದಿತ್ತು ಎಂದು ಹೇಳುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ.

ವಾಸ್ತವದಲ್ಲಿ ಜಿಡಿಪಿ ದರ ಕುಸಿದಿದೆ. ಒಂದು ಅಂಶ ಜಿಡಿಪಿ ಸದ್ಯದ ಲೆಕ್ಕಾಚಾರದ ಪ್ರಕಾರ, ಸು. 1.5 ಲಕ್ಷ ಕೋಟಿಯಾಗುತ್ತದೆ. ಎರಡು ಅಂಶ ನಷ್ಟದಿಂದ ಸುಮಾರು 3 ಲಕ್ಷ ಕೋಟಿ ರೂ. ನಷ್ಟವಾಗಿದೆ. ಆದರೆ, ನಷ್ಟವಾಗಿರುವುದನ್ನು ಸಮರ್ಥಿಸಿಕೊಳ್ಳುವ ನರೇಂದ್ರ ಮೋದಿಯವರು ಹಿಂದಿನ ಸರ್ಕಾರಗಳ ಅವಧಿಯಲ್ಲೂ ಜಿಡಿಪಿ ಕುಸಿದಿರುವುದನ್ನು ಉಲ್ಲೇಖಿಸುವ ಮೂಲಕ ಸಮರ್ಥಿಸಿಕೊಳ್ಳುತ್ತಾರೆ. ಹಿಂದಿನ ಸರ್ಕಾರವನ್ನು ದೂರುವುದೇ ಸದ್ಯದ ಪ್ರಧಾನಿಗಳ ಘನ ಕರ್ತವ್ಯ ಆಗಿದೆಯೇ ಹೊರತು, ಆತ್ಮಾವಲೋಕನ, ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳುವ ವಿವೇಕ ಕಂಡು ಬರದಿರುವುದು ದೇಶವನ್ನು ಇನ್ನಷ್ಟು ದುರಂತದತ್ತ ಕೊಂಡೊಯ್ಯುತ್ತಿದೆ.

ಭಾರತದಲ್ಲಿ ಕಳೆದ ಕೆಲವು ವರ್ಷಗಳಿಂದ 200 ಕಂಪನಿಗಳಲ್ಲಿ ನಿರಂತರವಾಗಿ ಉದ್ಯೋಗ ಕಡಿತ ಮಾಡಲಾಗುತ್ತಿದೆ ಎಂದು ಭಾರ್ತಿ ಏರ್​​ಟೆಲ್​​​​ನ ಮುಖ್ಯಸ್ಥ ಸುನಿಲ್ ಮಿತ್ತಲ್ ಅಭಿಪ್ರಾಯಪಟ್ಟಿದ್ದರು. ಅವರ ಈ ಆಕ್ಷೇಪಕ್ಕೆ ಪ್ರತಿಯಾಗಿ ಉತ್ತರ ಕೊಡುವ ಬರದಲ್ಲಿ ಪೀಯುಷ್ ಗೋಯಲ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಉದ್ಯೋಗ ಕಡಿತ ಆರ್ಥಿಕ ಪರಿಸ್ಥಿತಿಯ ದುಃಸ್ಥಿತಿಯ ದ್ಯೋತಕ ಎನ್ನುವುದು ಹಳ್ಳಿಯ ಒಬ್ಬ ಸಾಮಾನ್ಯ ಮನುಷ್ಯರಿಗೂ ಅರಿವಾಗುತ್ತದೆ. ಆದರೆ, ಕೆಲವು ರಾಜ್ಯಗಳ ಒಟ್ಟು ಬಜೆಟ್​ಗಿಂಥ ಹೆಚ್ಚಿನ ಮೊತ್ತದ ವಹಿವಾಟು ನಡೆಸುವ ಮಹತ್ವದ ರೈಲ್ವೇ ಖಾತೆ ಸಚಿವರೊಬ್ಬರು ಇಂಥ ಮೂರ್ಖ ಹೇಳಿಕೆ ನೀಡುವುದು ಸದ್ಯದ ದೇಶದ ಹೀನ ಪರಿಸ್ಥಿತಿಗೆ ದ್ಯೋತಕವಾಗಿದೆ. ಆದರೆ, ಇವರ ಹೇಳಿಕೆಯನ್ನು ಕೂಡ ಸಮರ್ಥಿಸುವ ಆನ್​​ಲೈನ್ ವೀರರ ಪಡೆ ಬಿಜೆಪಿಗೆ ಇರುವುದು ದುರಾದೃಷ್ಟಕರ ಸಂಗತಿಯಾಗಿದೆ.

ಇನ್ನೊಂದು ಮಹತ್ವದ ಸಂಗತಿ ಎಂದರೆ, ದೇಶದ ವಿದ್ಯಾವಂತ ಕೋಟಿಗಟ್ಟಲೆ ಯುವ ಸಮೂಹ ನಿರುದ್ಯೋಗದಿಂದ ಬಳಲುತ್ತಿರುವುದು ಕೇಂದ್ರ ಸರ್ಕಾರದ ಯಾವ ಪ್ರತಿನಿಧಿಗಳಿಗಾಗಲಿ, ಪ್ರಧಾನಿಯವರಿಗಾಗಲಿ, ಹಣಕಾಸು ಸಚಿವರಿಗಾಗಲಿ ನೋವಿನ ಸಂಗತಿಯಾಗಿ ಕಾಡುತ್ತಿಲ್ಲ. ಬದಲಾಗಿ ಅವರ ಕಾರ್ಯಕರ್ತರ ಹತ್ಯೆಯನ್ನು ವಿರೋಧಿಸಿ, ಪಕ್ಷಕ್ಕೆ ಲಾಭ ಮಾಡಿಕೊಂಡು ಮುಂದಿನ ಅವಧಿಗೆ ಅಧಿಕಾರ ಹಿಡಿಯುವುದು ಹೇಗೆ ಎಂಬುದು ಅವರ ಸದ್ಯದ ತುರ್ತಾಗಿ ಮಾರ್ಪಟ್ಟಿದೆ. ಈ ಮೂಲಕ ಮಡಿದ ಸಂಘ ಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರು ಮತ್ತು ಅವರ ಕುಟುಂಬಗಳಿಗೂ ಬಿಜೆಪಿ ಮೋಸ ಮಾಡುತ್ತಿದೆ.

ಇನ್ನೊಂದು ವಿಷಯವನ್ನು ಬಿಜೆಪಿ ಇತ್ತೀಚೆಗೆ ಬಲವಾಗಿ ಪ್ರತಿಪಾದಿಸುತ್ತಿದೆ. ಕೇಂದ್ರದ ಮುದ್ರಾ ಯೋಜನೆಯ ಪ್ರಕಾರ, 2015ರಲ್ಲಿ ಒಟ್ಟು 8 ಕೋಟಿ ನಾಗರಿಕರಿಗೆ 3.42 ಲಕ್ಷ ಕೋಟಿ ರೂ.ಗಳನ್ನು ಸಾಲವಾಗಿ ವಿತರಿಸಲಾಗಿದೆಯಂತೆ. ಈ ಕುರಿತು ವಿವಿಧ ರಾಜ್ಯಗಳಲ್ಲಿ ಪ್ರವಾಸ ಮಾಡುವ ಕೇಂದ್ರ ಸಚಿವರು ಭಾರೀ ಪ್ರಚಾರ ನೀಡುತ್ತಿದ್ದಾರೆ.

ಆದರೆ, ಅನೇಕರಿಗೆ ಈ ಯೋಜನೆಯಲ್ಲಿ ಸಾಲ ತೆಗೆದುಕೊಳ್ಳಲು ಸಾಧ್ಯವಾಗದಿರುವ ಕಾರಣ ಏನು ಎನ್ನುವುದನ್ನು ಮತ್ತು ಈ ಸಮಸ್ಯೆಗೆ ಪರಿಹಾರೋಪಾಯವನ್ನು ಕೇಂದ್ರ ಸರ್ಕಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಇದುವರೆಗೆ ಒಂದೂ ಹೆಜ್ಜೆಯನ್ನೂ ಇಟ್ಟಿಲ್ಲ.

ಇನ್ನು ಕೆಲವು ಬೃಹತ್ ಖಾಸಗಿ ಕಂಪನಿಗಳು ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಉದ್ಯೋಗ ಕಡಿತವನ್ನು ಘೋಷಿಸುತ್ತಿವೆ. ಸರ್ಕಾರಿ ಹುದ್ದೆಗಳಿಗೆ ನೇಮಕವಾಗುತ್ತಿರುವುದರ ಪ್ರಮಾಣ ಕೂಡ ಅತ್ಯಂತ ಕನಿಷ್ಠ ಸಂಖ್ಯೆಯಲ್ಲಿದೆ. ಈ ಮೂಲಕ ಸರ್ಕಾರಿ ಮತ್ತು ಖಾಸಗಿ ಉದ್ಯೋಗ ಸೃಷ್ಟಿಯಲ್ಲಿ ಕೂಡ ಕಳಪೆ ಪ್ರದರ್ಶನ ಮುಂದುವರೆದಿದೆ. ಇಂಥ ಭೀಕರ ಸಮಯದಲ್ಲಿ ಗೋಯಲ್ ಅವರು ದೇಶದ ಆರ್ಥಿಕ ಪರಿಸ್ಥಿತಿಯ ಕುರಿತು ಅವಿವೇಕತನದ ಮಾತುಗಳನ್ನು ಆಡಿದ್ದಾರೆ.

ಪ್ರದೀಪ್ ಮಾಲ್ಗುಡಿ ಹಿರಿಯ ಉಪ ಸಂಪಾದಕ ಸುದ್ದಿ ಟಿವಿ

0

Leave a Reply

Your email address will not be published. Required fields are marked *