ಅತೃಪ್ತ ಶಾಸಕರಿಗೆ ಕಾಂಗ್ರೆಸ್ ಶಾಕ್!

ಕಾಂಗ್ರೆಸ್ ಶಾಸಕಾಂಗ ಸಭೆಗೆ ಗೈರಾಗಿರುವ ನಾಲ್ವರು ಅತೃಪ್ತ ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸುವಂತೆ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ.

ಕಾಂಗ್ರೆಸ್ ಶಾಸಕಾಂಗ ಸಭೆಯ ನಂತರ ಸಿದ್ದರಾಮಯ್ಯನವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸಕರಾದ ರಮೇಶ್‍ಜಾರಕಿಹೊಳಿ, ಉಮೇಶ್ ಜಾಧವ್, ನಾಗೇಂದ್ರ ಮತ್ತು ಮಹೇಶ್ ಕುಮಟಳ್ಳಿ ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆ ಶೆಡ್ಯೂಲ್ 10ರಡಿ ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ವಿಧಾನಸಭಾಧ್ಯಕ್ಷರಿಗೆ ಸಂಜೆಯೊಳಗೆ ದೂರು ಸಲ್ಲಿಸಲಾಗುವುದು ಎಂದರು.

ನಾಲ್ವರು ನನಗೆ ಪತ್ರ ಬರೆದಿದ್ದು, ಶಾಸಕಾಂಗ ಸಭೆಗೆ ಭಾಗವಹಿಸಲು ಆಗುತ್ತಿಲ್ಲ ಎಂದು ತಿಳಿಸಿದ್ದಾರೆ. ರಮೇಶ್ ಜಾರಕಿಹೊಳಿಯವರು ಮದುವೆ ಕಾರ್ಯಕ್ರಮದಿಂದಾಗಿ ಬರಲಾಗುತ್ತಿಲ್ಲ ಎಂದಿದ್ದಾರೆ. ಕುಮಟಳ್ಳಿಯವರು ಅನಾರೋಗ್ಯ ಕಾರಣ ನೀಡಿದ್ದಾರೆ. ನಾಗೇಂದ್ರ ಅವರು ವೈಯಕ್ತಿಕ ಕೆಲಸಗಳಿಂದ ಬರಲಾಗುತ್ತಿಲ್ಲ ಎಂದಿದ್ದಾರೆ. ಉಮೇಶ್ ಜಾಧವ್ ಅವರು ಪೂರ್ವ ನಿಗದಿತ ಕಾರ್ಯಕ್ರಮ ಇದ್ದಿದ್ದರಿಂದ ಬರಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.

ಜ.18ರಂದು ನಡೆದ ಶಾಸಕಾಂಗ ಸಭೆಗೆ ಗೈರಾಗಿದ್ದಕ್ಕೆ ನಾಲ್ಕು ಮಂದಿಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು. ಅದಕ್ಕೆ ಅವರು ಉತ್ತರ ಕೊಟ್ಟಿದ್ದರು. ಉತ್ತರ ಸಮಾಧಾನಕರವಾಗಿಲ್ಲ. ನಿಮ್ಮ ಹೇಳಿಕೆಗಳನ್ನು ಖುದ್ದಾಗಿ ನನ್ನ ಮುಂದೆ ಹಾಜರಾಗಿ ಸಮರ್ಥಿಸಿಕೊಳ್ಳುವಂತೆ ಪತ್ರ ಬರೆದಿದ್ದೆ. ಆದರೆ ಅವರು ಹಾಜರಾಗಿಲ್ಲ. ಸದಾ ವಿಪ್‍ನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ. ಹಿಂದಿನ ಶಾಸಕಾಂಗ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ನಾಲ್ವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ಕೈಗೊಂಡು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಕಾಂಗ್ರೆಸ್‍ನ ಎಲ್ಲ ಶಾಸಕರು ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಅಂಗೀಕಾರ ಮತ್ತು ಹಣಕಾಸು ಮಸೂದೆ ಅಂಗೀಕಾರದ ವೇಳೆ ಕಡ್ಡಾಯವಾಗಿ ಹಾಜರಿರಬೇಕೆಂದು ವಿಪ್ ನೀಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇಂದಿನ ಶಾಸಕಾಂಗ ಸಭೆಗೆ ಈ ನಾಲ್ಕು ಮಂದಿಯಲ್ಲದೆ ರೋಷನ್ ಬೇಗ್, ಬಿ.ಸಿ.ಪಾಟೀಲ್, ಜೆ.ಎನ್.ಗಣೇಶ್ ಅವರೂ ಬಂದಿರಲಿಲ್ಲ. ರೋಷನ್ ಬೇಗ್ ಅವರು ದೆಹಲಿಯ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಭಾಗವಹಿಸಿರುವುದರಿಂದ ಬರಲಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಬಿ.ಸಿ.ಪಾಟೀಲ್ ಅವರು ನಗರದಿಂದ ಹೊರಗಡೆ ಇರುವುದರಿಂದ ಸಭೆಗೆ ಭಾಗವಹಿಸಲು ಆಗುತ್ತಿಲ್ಲ. ಸಂಜೆ 4 ಗಂಟೆಯೊಳಗೆ ಬಂದು ನಿಮ್ಮನ್ನು ಭೇಟಿ ಮಾಡುವುದಾಗಿ ತಿಳಿಸಿದ್ದಾರೆ. ಜೆ.ಎನ್.ಗಣೇಶ್ ಅವರು, ಎಲ್ಲಿದ್ದಾರೋ ನಮಗೆ ಗೊತ್ತಿಲ್ಲ. ಫೋನ್ ಸಂಪರ್ಕಕ್ಕೂ ಸಿಕ್ಕಿಲ್ಲ, ನಮಗೂ ಫೋನ್ ಮಾಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

0

Leave a Reply

Your email address will not be published. Required fields are marked *