ಮಕ್ಕಳ ಹಬ್ಬಕ್ಕೆ ಸಿಂಗಾರಗೊಳ್ತಿದೆ ಕಬ್ಬನ್​​ಪಾರ್ಕ್​​​​, ಬಾಲಭವನ

ಇನ್ನೇನು ಮಕ್ಕಳ ಹಬ್ಬ ಬಂದೇ ಬಿಡ್ತು. ಹಾಗಾಗಿ, ಬೆಂಗಳೂರಿನ ಬಾಲಭವನ ಹಾಗೂ ಕಬ್ಬನ್​​ಪಾರ್ಕ್​ ನವವಧುವಿನಂತೆ ಸಿಂಗಾರಗೊಳ್ತಿದೆ. ನವೆಂಬರ್​ 11 ರಿಂದ 14ರವರೆಗೆ ಹಬ್ಬವನ್ನ ಮಹಿಳಾ ಹಾಗೂ ಮಕ್ಕಳ ಇಲಾಖೆ ಹಾಗೂ ಬಾಲಭವನದ ಸಹಯೋಗದಲ್ಲಿ ನಡೆಸಲಾಗುತ್ತದೆ. ಮಹಿಳಾ ಮಕ್ಕಳ ಇಲಾಖೆ ವತಿಯಿಂದ 3ನೇ ವರ್ಷ ಮಕ್ಕಳ ಹಬ್ಬವನ್ನ ಅದ್ದೂರಿಯಾಗಿ ಆಚರಿಸಲು ಸಿದ್ಧತೆ ನಡೆದಿದೆ. ಇದೇ ಸಂದರ್ಭದಲ್ಲಿ ಇಬ್ಬರು ಮಕ್ಕಳಿಗೆ ಹಾಗೂ ಎರಡು ಸಂಸ್ಥೆಗಳಿಗೆ ಶೌರ್ಯ ಪ್ರಶಸ್ತಿಯನ್ನೂ ಸರ್ಕಾರ ನೀಡಲಿದೆ.

ಬಾಲಮಂದಿರದ ಮಕ್ಕಳು, ಮಕ್ಕಳ ದಿನಾಚರಣೆಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಹಬ್ಬದ ಅಂಗವಾಗಿ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಅದರಲ್ಲಿ ವಂಡರ್​ ಆಫ್​ ದ ವರ್ಲ್ಡ್, ತಾಜ್​ ಮಹಲ್​, ಮಮತೆ ತೊಟ್ಟಿಲು ಒಳಗೊಂಡಂತೆ ಹಲವು ಮಾದರಿ ಪ್ರದರ್ಶನ ಏರ್ಪಡಿಸಲಾಗ್ತಿದೆ. ಶಿಕ್ಷಣ ಇಲಾಖೆ, ಎಚ್​ಎಎಲ್​, ವಿಜ್ಞಾನ ಮತ್ತು ತಂತ್ರಜ್ಞಾನ, ಐಟಿಬಿಟಿ, ಮೆಟ್ರೋ ಒಳಗೊಂಡಂತೆ 72 ಮಳಿಗೆಗಳನ್ನ ತೆರೆಯಲಾಗುವುದು. ಇದಕ್ಕೆ ಈಗಾಗಲೇ ಭರದಿಂದ ಸಿದ್ಧತೆ ನಡೆದಿದೆ.

ಹಬ್ಬದಲ್ಲಿ ಬಿಎಂಟಿಸಿ ಓಪನ್​ ಬಸ್​ ಪ್ರದರ್ಶನಗೊಳ್ಳಲಿದೆ. ಜಾನಪದ, ತುಳು, ಬ್ಯಾರಿ ಅಕಾಡೆಮಿಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಡಲಿದೆ. ಮಕ್ಕಳ ಭದ್ರತೆ, ಆರೋಗ್ಯ ದೃಷ್ಟಿಯಿಂದ ಪೊಲೀಸ್​ ಹಾಗೂ ಆರೋಗ್ಯ ಇಲಾಖೆಗಳು ಹಬ್ಬದಲ್ಲಿ ಸಹಕಾರ ನೀಡಲಿವೆ. ರಾಜ್ಯದ ಸರ್ಕಾರಿ ಶಾಲೆ ಮಕ್ಕಳು ರಚಿಸಿರೋ 5 ಸಾವಿರ ಚಿತ್ರಗಳನ್ನ ಇದೇ ವೇಳೆ ಪ್ರದರ್ಶಿಸಲಾಗ್ತಿದೆ. ಚಿತ್ರಕಲಾ ಪರಿಷತ್ತಿನ ಕಲಾವಿದರು ಮಕ್ಕಳ ಹಬ್ಬದಲ್ಲಿ ಭಾಗವಹಿಸಲಿದ್ದಾರೆ.

ರಾಜ್ಯದೆಲ್ಲೆಡೆಯಿಂದ ಬರೋ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನ ನಗರದ ಮಕ್ಕಳೂ ಕಣ್ತುಂಬಿಕೊಳ್ಳಬಹುದಾಗಿದೆ. ಒಟ್ನಲ್ಲಿ ಚಿಣ್ಣರು ತಮಗಾಗೇ ಬರೋ ಹಬ್ಬದಲ್ಲಿ ಮಸ್ತ್​ ಮಜಾ ಮಾಡಲು ಕಾಯ್ತಿದ್ದಾರೆ.

ಶಶಿರೇಖಾ, ಸುದ್ದಿಟಿವಿ, ಬೆಂಗಳೂರು

0

Leave a Reply

Your email address will not be published. Required fields are marked *