ನೀವು ಹಿಟ್ಲರ್​ನ ಪುನರ್ ಅವತಾರವೇ?: ಪ್ರಕಾಶ್ ರೈ ಟ್ವೀಟ್ ವಾರ್

ಬಿಜೆಪಿ, ಸಂಘ ಪರಿವಾರದ ವಿರುದ್ಧ ಬಹುಭಾಷಾ ನಟ ಪ್ರಕಾಶ್​ ರೈ ಟ್ವೀಟ್ ವಾರ್ ಮುಂದುವರೆಸಿದ್ದಾರೆ.#justasking ಹ್ಯಾಷ್​​ಟ್ಯಾಗ್​ನಡಿ ಮುಂದುವರಿದ ಟ್ವೀಟ್ ಸರಣಿಯ ಭಾಗವಾಗಿ, ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ರೈ ಟ್ವೀಟ್ ಮಾಡಿದ್ದಾರೆ. ರಾಷ್ಟ್ರೀಯತೆ ಮತ್ತು ಹಿಂದುತ್ವ ಎಂದರೆ ಒಂದೇ ಅರ್ಥ ಎಂದಿದ್ದ ಅನಂತ್ ಕುಮಾರ್ ಹೆಗಡೆಯವರ ವೀಡಿಯೋವನ್ನು ಹಂಚಿಕೊಂಡಿರುವ ಅವರು, ಹಿಂದೂಯೇತರ ಕುರಿತು ನಿಮ್ಮ ಅಭಿಪ್ರಾಯವೇನು? ನಿಮ್ಮ ಅಜೆಂಡಾ ಏನು? ಸುಮ್ಮನೇ ಕೇಳುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಪ್ರಿಯ ಶ್ರೀ ಅನಂತ್ ಕುಮಾರ್ ಹೆಗಡೆಯವರೇ, ರಾಷ್ಟ್ರೀಯತೆ ಮತ್ತು ಹಿಂದುತ್ವ ಬೇರೆಯಲ್ಲ. ಅವುಗಳು ಅರ್ಥದಲ್ಲಿ ಒಂದೇ ನೀವು ಹೇಳಿದ್ದೀರಿ. ರಾಷ್ಟ್ರೀಯತೆಯನ್ನು ಧರ್ಮದೊಂದಿಗೆ ಏಕೆ ಎಳೆದು ತರುತ್ತೀರಿ? ಹಾಗಾದಲ್ಲಿ ಹಿಂದೂಯೇತರರ ಕುರಿತು ನಿಮ್ಮ ನಿಲುವೇನು? ದೇಶ ಹೆಮ್ಮೆ ಪಡುವ ಪಟ್ಟಿ ದೊಡ್ಡದಿದೆ. ಅಂಬೇಡ್ಕರ್, ಅಬ್ದುಲ್ ಕಲಾಂ, ಎ ಆರ್ ರೆಹಮಾನ್, ಖುಷ್ವಂತ್ ಸಿಂಗ್, ಅಮೃತಾ ಪ್ರೀತಂ, ಡಾ. ವರ್ಗೀಸ್ ಕುರಿಯನ್… ಪಟ್ಟಿ ಹೀಗೆಯೇ ಮುಂದುವರೆಯುತ್ತದೆ… ಯಾವುದೇ ಧರ್ಮವಿಲ್ಲದ, ಆದರೆ ಮಾನವೀಯತೆಯಲ್ಲಿ ನಂಬಿಕೆ ಇಟ್ಟಿರುವ ನನ್ನಂಥವರ ಕತೆ ಏನು?… ನಾವು ಈ ದೇಶದ ನಾಗರಿಕರಲ್ಲವೇ? ನೀವ್ಯಾರು ಹುಡುಗರೆ? ನಿಮ್ಮ ಅಜೆಂಡಾ ಏನು? ಎಂದು ಖಾರ ಮತ್ತು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ಅಲ್ಲದೇ, ಅಂತಿಮ ಸಾಲಿನಲ್ಲಿ ಮಾರ್ಮಿಕವಾದ ಪ್ರಶ್ನೆಯೊಂದನ್ನು ಇಟ್ಟಿದ್ದು, ನೀವು ಪುನರ್ಜನ್ಮದಲ್ಲಿ ನಂಬಿಕೆ ಇಟ್ಟುಕೊಂಡಿದ್ದೀರಿ… ನೀವು ಜರ್ಮನಿಯ ಹಿಟ್ಲರ್​ನ ಪುನರ್ ಅವತಾರವೇ? ಸುಮ್ಮನೇ ಕೇಳುತ್ತಿದ್ದೇನೆ ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *