ಕರ್ನಾಟಕದ ಮೇಲೆ ಕಾವೇರಿ ನೀರು ರಚನಾ ಮಂಡಳಿ ತೂಗುಗತ್ತಿ: ಕರ್ನಾಟಕದಲ್ಲಿ ಪ್ರತಿಭಟನೆ

ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಸಾಧ್ಯತೆ
ಸೋಮವಾರ ಎಲ್ಲ ರಾಜ್ಯಗಳ ಶಿಫಾರಸು ಕೇಂದ್ರಕ್ಕೆ
ಕೇಂದ್ರದಿಂದ ಮುಂದಿನ ವಾರದಲ್ಲಿ ಮಹತ್ವದ ನಿರ್ಧಾರ

ದೆಹಲಿ: ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಕುರಿತು ಮುಖ್ಯ ಕಾರ್ಯದರ್ಶಿಗಳ ಸಭೆ ಇಂದು ದೆಹಲಿಯಲ್ಲಿ ನಡೆಯಿತು. ನಂತರ ಮಾತನಾಡಿದ ಕೇಂದ್ರ ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಉಪೇಂದ್ರ ಸಿಂಗ್, ನೀರು ಹಂಚಿಕೆ ಸೂತ್ರ ಮತ್ತು ಕಾವೇರಿ ನಿರ್ವಹಣಾ ಮಂಡಳಿ ನಡುವೆ ವ್ಯಾತ್ಯಾಸವಿಲ್ಲ. ಆದ್ರಿಂದ ನೀರಿನ ನಿರ್ವಹಣೆಗಾಗಿ ಸೂತ್ರ ರಚಿಸಲೇಬೇಕಿದೆ. ಈ ಕುರಿತು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ ಎಂದರು. ಸೂತ್ರದ ಸ್ವರೂಪದ ಕುರಿತು ಇಂದಿನ ಸಭೆಯಲ್ಲಿ ಎಲ್ಲ ರಾಜ್ಯಗಳ ಶಿಫಾರುಸು ಕೇಳಿದ್ದೇವೆ ಎಂದರು. ಈ ಮೂಲಕ ಪರೋಕ್ಷವಾಗಿ ಮಂಡಳಿ ಸ್ವರೂಪದ ಸ್ಕೀಂ ರಚಿಸುವ ಸುಳಿವನ್ನು ಕೇಂದ್ರ ಸರ್ಕಾರ ನೀಡಿದಂತಾಗಿದೆ.

ಅಂತಾರಾಜ್ಯ ನದಿ ವಿವಾದ ಕಾಯ್ದೆ ಮಂಡಳಿ ರಚಿಸಿ ಎಂದು ಹೇಳುತ್ತದೆ. ಆದರೆ, ಅದರ ಸ್ವರೂಪದ ಕುರಿತು ಅಂತಿಮ ರೂಪರೇಷಗಳು ಸಿದ್ಧವಾಗಿಲ್ಲ ಎಂದ ಉಪೇಂದ್ರ ಸಿಂಗ್, ಭಾಕ್ರಾನಂಗಲ್, ನರ್ಮದಾ ಮತ್ತು ಮಹಾನದಿ, ತುಂಗಭದ್ರಾ ನದಿಗಳಿಗೆ ಸಂಬಂಧಿಸಿದಂತೆ ಮಂಡಳಿಗಳ ರಚನೆಯಾಗಿದೆ. ಈ ಎಲ್ಲ ಮಂಡಳಿಗಳಿಗೂ ಪ್ರತೇಕ ನಿಯಮಗಳಿವೆ. ಆದ್ದರಿಂದ, ಯಾವ ರೂಪರೇಷೆಗಳಡಿ ಕಾವೇರಿ ಮಂಡಳಿ ರಚಿಸಬೇಕು ಎಂದು ವಿವರಣೆ ಬೇಕಿದೆ ಎಂದರು. ಇನ್ನು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮೌಖಿಕವಾಗಿ ಹೇಳಿಕೆ ನೀಡಿದ್ದಾರೆ. ಲಿಖಿತ ಹೇಳಿಕೆ ನೀಡಲು ಸೂಚಿಸಲಾಗಿದೆ ಎಂದರು.

ಈ ಕುರಿತು ಪ್ರತಿಕ್ರಿಯಿಸಿದ ರಾಜ್ಯ ಕಾರ್ಯದರ್ಶಿ ರತ್ನಪ್ರಭಾ, ಯಾವ ರೀತಿಯ ಸೂತ್ರ ಇರಬೇಕು ಎಂಬುದರ ಕುರಿತು ಸಭೆ ನಡೆದಿದೆ. ನೀರು ಹಂಚಿಕೆ ಸೂತ್ರ ಕುರಿತ ಶಿಫಾರಸುಗಳನ್ನು ಕಳಿಸಲು ಸೂಚಿಸಲಾಗಿದೆ ಎಂದರು. ಜೊತೆಗೆ, ಪ್ರತಿಯೊಂದು ರಾಜ್ಯಗಳಲ್ಲೂ ತಮ್ಮದೇ ಸೂತ್ರಗಳಿರುತ್ತವೆ. ಇದರ ಆಧಾರದಲ್ಲಿ ರಾಜ್ಯಗಳು ಶಿಫಾರಸುಗಳನ್ನು ಸಲ್ಲಿಸುತ್ತವೆ. ಶಿಫಾರಸುಗಳನ್ನು ಸಲ್ಲಿಸಲು ಎಲ್ಲ ರಾಜ್ಯಗಳಿಗೂ ಸೂಚಿಸಲಾಗಿದೆ. ರಾಜ್ಯ ಸರ್ಕಾರ ಈ ಕುರಿತು ನಿರ್ಧರಿಸಲಿದೆ. ಸೋಮವಾರ ಅಥವಾ ಮಂಗಳವಾರದ ಒಳಗೆ ಶಿಫಾರಸುಗಳನ್ನು ಕಳುಹಿಸಲಾಗುವುದು ಎಂದು ಅವರು ಹೇಳಿದ್ದಾರೆ. ಅಲ್ಲದೇ, ಸರ್ವಾನುಮತದಿಂದ ಸೂತ್ರ ರಚನೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ನಡುವೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ವಿರೋಧಿಸಿದ ಚನ್ನಪಟ್ಟಣದಲ್ಲಿ ಕಸ್ತೂರಿ ಕನ್ನಡ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಬಜೆಟ್ ಕಲಾಪ ಆರಂಭಕ್ಕೂ ಮುನ್ನ ದೆಹಲಿಯ ಸಂಸತ್ ಭವನದ ಗಾಂಧಿ ಪ್ರತಿಮೆ ಬಳಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಆಗ್ರಹಿಸಿ ಎಐಎಡಿಎಂಕೆ ಸಂಸದರು ಪ್ರತಿಭಟನೆ ನಡೆಸಿದರು. ಈ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಇನ್ನು 6 ವಾರಗಳಲ್ಲಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಸುಪ್ರೀಂ ಕೋರ್ಟ್​​​​ ಸ್ಪಷ್ಟ ನಿರ್ದೇಶನ ನೀಡಿದೆ. ಕೋರ್ಟ್ ಆದೇಶ ಜಾರಿಗೆ ತಮಿಳುನಾಡು ಸರ್ಕಾರ ಒತ್ತಡ ಹೇರಲಿದೆ ಎಂದು ತಮಿಳುನಾಡು ಸಚಿವ ಜಯಕುಮಾರ್ ಹೇಳಿದ್ದಾರೆ.

ಒಟ್ಟಿನಲ್ಲಿ ನೀರು ನಿರ್ವಹಣಾ ಯೋಜನೆ ಜಾರಿಗೆ ಬರುವುದು ಬಹುತೇಕ ಖಚಿತವಾಗಿದೆ. ಕಾವೇರಿ ಜಲಾನಯನದ ಮೇಲಿನ ರಾಜ್ಯವಾಗಿರುವ ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಮಂಡಳಿ ಅಥವಾ ನೀರು ಹಂಚಿಕೆ ಸೂತ್ರದ ನಂತರ ಯಾವ ಪರಿಸ್ಥಿತಿ ಎದುರಾಗಲಿದೆ ಎಂಬುದರ ಕುರಿತ ಸ್ಪಷ್ಟ ಚಿತ್ರಣ ಇನ್ನಷ್ಟೇ ಹೊರಬರಬೇಕಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *