ಈ ಬಾರಿಯ ಉಪ ಚುನಾವಣೆ ಮಹಾಭಾರತದಲ್ಲಿ ನಡೆದ ಧರ್ಮಯುದ್ಧದಂತೆ: ಬಿಜೆಪಿ ಶಾಸಕ ಶ್ರೀರಾಮುಲು

ಈ ಬಾರಿಯ ಉಪ ಚುನಾವಣೆ ಮಹಾಭಾರತದಲ್ಲಿ ನಡೆದ ಧರ್ಮಯುದ್ಧದಂತೆ. ಪಾಂಡವರಾದ ನಮ್ಮ ವಿರುದ್ಧ ಕೌರವರಾದ ಕಾಂಗ್ರೆಸಿಗರು ಬರುತ್ತಿದ್ದಾರೆ. ಅಂತಿಮವಾಗಿ ಗೆಲುವು ನಮ್ಮದೇ ಎಂದು ಬಿಜೆಪಿ ಶಾಸಕ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾಭಾರತದಲ್ಲಿ ಕೌರವರು ಪಾಂಡವರ ವಿರುದ್ಧ ಎಷ್ಟೇ ಒಳಸಂಚು ನಡೆಸಿ ದರೂ ಅಂತಿಮವಾಗಿ ಗೆಲುವು ಸಾಧಿಸಿದ್ದು ಪಾಂಡವರೇ. ಈಗ ಇತಿಹಾಸ ಮತ್ತೆ ಮರುಕಳಿಸಲಿದೆ ಎಂದು ರಾಮುಲು ಹೇಳಿದರು. ಒಂದು ಕಾಲದಲ್ಲಿ ಕಾಂಗ್ರೆಸ್‍ನ ಭದ್ರಕೋಟೆಯಾಗಿದ್ದ ಬಳ್ಳಾರಿಯಲ್ಲಿ ಬಿಜೆಪಿಯ ಕಮಲ ಅರಳುವಂತೆ ಮಾಡಿದ್ದು ನಮ್ಮ ಸಾಧನೆ. ಇಲ್ಲಿ ಯಾರೇ ಬರಲಿ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಈ ಉಪ ಚುನಾವಣೆಯನ್ನು ಸಾವಾಲಾಗಿ ತೆಗೆದುಕೊಂಡಿದ್ದು, ಗೆದ್ದೇ ಗೆಲ್ಲುತ್ತೇವೆ ಎಂದಿದ್ದಾರೆ. ನನ್ನ ಜೀವನದಲ್ಲಿ ನಾನು ಎಂದಿಗೂ ಬೆನ್ನು ತೋರಿಸಿ ಹೋಗುವ ಜಾಯಮಾನದವನಲ್ಲ. ಸರ್ಕಾರವೇ ಬರಲಿ, ಪ್ರಭಾವಿಗಳೇ ಬರಲಿ ನಾವು ಅದಕ್ಕೆ ತಲೆ ಕೆಡಿಸಿಕೊಳ್ಳುವವರಲ್ಲ. ನಮಗೆ ಕಾರ್ಯಕರ್ತರೇ ಆಸ್ತಿ. ಈ ಚುನಾವಣೆಯನ್ನು ಗೆದ್ದು ಇತಿಹಾಸ ಸೃಷ್ಟಿಸಬೇಕೆಂಬ ಛಲವನ್ನು ಇಟ್ಟುಕೊಂಡಿದ್ದೇನೆ. ಅದನ್ನು ಸಾಧಿಸಿಯೇ ತೋರಿಸುತ್ತೇನೆ ಎಂದು ಶಪಥ ಮಾಡಿದರು.

0

Leave a Reply

Your email address will not be published. Required fields are marked *