ಅಕ್ರಮ ವಲಸಿಗರನ್ನು ಹೊರಗೆ ಎಸೆಯಬಾರದೆ: ಅಮಿತ್ ಶಾ

ಕೊಲ್ಕೊತ್ತಾ: ಬಿಜೆಪಿಗೆ ಬಂಗಾಳದಲ್ಲಿ ಪರಿವರ್ತನೆಯಾಗುತ್ತಿರುವುದರ ಕುರಿತು ಅರಿವಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದರು. ಕೊಲ್ಕೊತ್ತಾದಲ್ಲಿ ನಡೆದ ಬಿಜೆಪಿಯ ಮಹಾ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಂಗಾಳದಲ್ಲಿ ಬಿಜೆಪಿ ಪರಿವರ್ತನೆ ತಂದೇ ತರುತ್ತದೆ ಎಂದರು. ಬಿಜೆಪಿಗೆ ಜನ ಮೊದಲು, ಮತ ನಂತರ ಎಂದ ಅವರು, ಮಮತಾ ಬ್ಯಾನರ್ಜಿಯವರು ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು ವಿರೋಧಿಸಿದ್ದಾರೆ. ಎನ್​ಆರ್​​ಸಿ ಅಕ್ರಮ ವಲಸಿಗರನ್ನು ಎಸೆಯುವ ಪ್ರಕ್ರಿಯೆ. ಬಾಂಗ್ಲಾ ವಲಸಿಗರನ್ನು ಹೊರಗೆ ಎಸೆಯಬಾರದೇ? ಎಂದು ಅವರು ಪ್ರಶ್ನಿಸಿದರು. ಎರ್​ಆರ್​​ಸಿಯನ್ನು ನೀವು ವಿರೋಧಿಸುವುದರಿಂದ ನಿಲ್ಲುವುದಿಲ್ಲ. ಭ್ರಾಂತಿಯನ್ನು ಹರಡುವುದನ್ನು ನಿಲ್ಲಿಸಿ ಎಂದು ಅವರು ಸಲಹೆ ನೀಡಿದರು.

ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಅವರು ಆರೋಪಿಸಿದರು. ಎಲ್ಲ ಬಂಗಾಳಿ ವಾಹಿನಿಗಳ ಸಂಕೇತಗಳು ಕಳೆಗುಂದಿವೆ. ಇದರಿಂದಾಗಿ ಜನ ನಮ್ಮನ್ನು ನೋಡಲು ಸಾಧ್ಯವಾಗುತ್ತಿಲ್ಲ. ಆದರೆ, ನಮ್ಮ ದನಿಯನ್ನು ಅಡಗಿಸಲು ಯತ್ನಿಸಿದರೂ ಬಂಗಾಳದ ಎಲ್ಲ ಜಿಲ್ಲೆಗಳಿಗೆ ಹೋಗಿ, ಟಿಎಂಸಿಯನ್ನು ಅಧಿಕಾರದಿಂದ ಹೊರಗೆಸೆಯುತ್ತೇವೆ ಎಂದರು.

ಪಶ್ಚಿಮ ಬಂಗಾಳದಲ್ಲಿ ಈ ಮೊದಲು ರವೀಂದ್ರ ಸಂಗೀತ ಪ್ರತಿದಿನ ಕೇಳುತ್ತಿತ್ತು. ಆದರೆ, ಈಗ ಕೇವಲ ಬಾಂಬ್ ಸ್ಫೋಟದ ಶಬ್ದ ಕೇಳಿಬರುತ್ತಿದೆ ಎಂದು ಆರೋಪಿಸಿದರು. ಅಲ್ಲದೇ, ಬಾಂಗ್ಲಾ ದೇಶೀ ಅಕ್ರಮ ನುಸುಳುಕೋರರನ್ನು ರಕ್ಷಿಸುತ್ತಿರುವುದೇಕೆ ಎಂದ ಮಮತಾ ಅವರನ್ನು ಪ್ರಶ್ನಿಸಿದ ಅವರು, ರಾಹುಲ್ ಗಾಂಧಿಯವರು ಕೂಡ ಈ ವಿಷಯದಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸುತ್ತಿಲ್ಲ ಎಂದರು. ಇದಕ್ಕೆ ಕಾಂಗ್ರೆಸ್​​ನ ವೋಟ್ – ಬ್ಯಾಂಕ್ ಪಾಲಿಟಿಕ್ಸ್ ಕಾರಣ ಎಂದು ಕಿಡಿಕಾರಿದರು.

ಆದರೆ, ಅಮಿತ್ ಶಾ ಅವರ ಹೇಳಿಕೆಗಳನ್ನು ಟಿಎಂಸಿ ವಿರೋಧಿಸಿದೆ. ಅವರದು ವಿಫಲ ಶೋ ಎಂದು ಸಂಸದ ಡೆರೆಕ್ ಒಬ್ರಿಯಾನ್ ಹೇಳಿದ್ದಾರೆ. ಬೆಂಗಾಳಿಗರನ್ನು ಅಮಿತ್ ಶಾ ಅವಮಾನಿಸಿದ್ದಾರೆ. ಬಂಗಾಳದ ಸಂಸ್ಕೃತಿ ಅಮಿತ್ ಶಾಗೆ ಗೊತ್ತಿಲ್ಲ. ಅರಚುವ ಸುಳ್ಳುಗಳಿಂದ ಬೆಂಗಾಳಿಗರನ್ನು ಅವಮಾನಸಿದ್ದಾರೆ. ಅಮಿತ್ ಶಾ 72 ಗಂಟೆಯ ಒಳಗೆ ಕ್ಷಮೆ ಕೋರಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *