ಪತ್ರಕರ್ತರಿಂದ ಬ್ಲಾಕ್​ಮೇಲ್: ಸಮೀಪದ ಠಾಣೆಗೆ ದೂರು ಕೊಡಿ…!!! ಹೋದದ್ದು ವಿಶ್ವಾಸಾರ್ಹತೆಯಲ್ಲ: ಮಾನ

ಪಬ್ಲಿಕ್ ಟಿವಿಯ ಇನ್​​ಪುಟ್ ಎಡಿಟರ್ ಹೇಮಂತ್ ಕಶ್ಯಪ್ ಅವರನ್ನು 50 ಲಕ್ಷ ಲಂಚ ಕೇಳಿದ ಆರೋಪದಡಿ ಬಂಧಿಸಲಾಗಿದೆ. ಇದು ಕರ್ನಾಟಕ ಪತ್ರಿಕೋದ್ಯಮದ ಇಂದಿನ ದುರಂತಕ್ಕೆ ಸಿಕ್ಕ ಬಹಿರಂಗ ಸಾಕ್ಷ್ಯ. ಒಂದು ಕಾಲಕ್ಕೆ ಪ್ರಭುತ್ವ ವಿರೋಧಿಯಾಗಿ, ಜನಪರವಾಗಿ, ಚಳವಳಿಗಳಿಗೆ ಬೆಂಗಾವಲಿಗೆ ನಿಂತಿದ್ದ ಪತ್ರಿಕೋದ್ಯಮ ಇಂದು ವಸೂಲಿ ಗಿರಾಕಿಗಳಿಂದ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆ. ಯಾವುದೇ ಕ್ಷೇತ್ರ ಇಂದು ಭ್ರಷ್ಟಾಚಾರದಿಂದ ಹೊರತಲ್ಲ. ಆಧುನಿಕ ಸಂದರ್ಭದಲ್ಲಿ ಭ್ರಷ್ಟಾಚಾರ ಹೊಸ ರೂಪ ಪಡೆದಿದೆ. ಒಬ್ಬ ಆಟೋ ಡ್ರೈವರ್​​ನನ್ನು … ಇಲ್ಲಿಗೆ ಬರುತ್ತೀರಾ ಎಂದರೆ, ಮೀಟರ್ ಮೇಲೆ 30 ಕೊಡಿ, ಮಿನಿಮಮ್ ದರ ಆಗುವೆಡೆ 70 ಕೊಡಿ ಎನ್ನುತ್ತಾನೆ. ಸರ್ಕಾರಿ ಬಸ್​ಗಳಲ್ಲಿ ಟಿಕೆಟ್ ತೆಗೆದುಕೊಳ್ಳುವಾಗ ಬ್ಯಾಗ್ ಅಥವಾ ಕಿಸೆಯಲ್ಲಿ ಚಿಲ್ಲರೆ ಇದ್ದರೂ ಟಿಕೆಟ್ ಹಿಂದೆ ಬರೆದುಕೊಡುವ ಸಂಗತಿ, ಶಾಲೆಗೆ ಹೋಗಲು ಅಥವಾ ಊಟ, ತಿಂಡಿ ಮಾಡಲು ಮಗುವಿಗೆ ಚಾಕಲೇಟ್ ಇತ್ಯಾದಿ ಆಮಿಷಗಳನ್ನು ಒಡ್ಡುವ ವಿಚಾರ… ಇತ್ಯಾದಿಗಳೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಭಾರತೀಯರು ಭ್ರಷ್ಟಾಚಾರಕ್ಕೆ ಒಗ್ಗಿ ಹೋಗಿರುವುದರ ಸಂಕೇತವೇ ಆಗಿದೆ.

ಖಾಸಗಿ ವಾಹಿನಿಗಳಲ್ಲಿ ಸ್ಲಾಟ್ ತೆಗೆದುಕೊಳ್ಳುವುದರಿಂದ ಹಿಡಿದು ಸರ್ಕಾರಿ ಟೆಂಡರ್ ಪಡೆದುಕೊಳ್ಳುವವರೆಗೆ, ಚುನಾವಣೆಗಳಲ್ಲಿ ಜನರಿಗೆ ಪ್ರಣಾಳಿಕೆಯಲ್ಲಿ ಭರವಸೆ ನೀಡುವುದರೊಂದಿಗೆ ಚುನಾವಣೆ ವೇಳೆ ನೀಡುವ ಹಣ, ಮದ್ಯ, ಬಟ್ಟೆ ಇತ್ಯಾದಿಗಳೆಲ್ಲವೂ ಭ್ರಷ್ಟಾಚಾರದ ಅಡಿಯಲ್ಲೇ ಬರುತ್ತವೆ. ಇನ್ನು ಸರ್ಕಾರಿ ಉದ್ಯೋಗಿಗಳು ಯಾವುದೇ ಕೆಲಸ ಮಾಡಲು ಇಂತಿಷ್ಟು ದರ ಎಂದು ನಿಗದಿಯಾಗಿರುತ್ತದೆ. ಇಂತವರಲ್ಲಿ ಕೆಲವರು ಪ್ರಾಮಾಣಿಕ ಅಧಿಕಾರಿಗಳೂ ಇದ್ದಾರೆ. ಆದರೆ, ಪ್ರಾಯಶಃ ಪ್ರಾಮಾಣಿಕರ ಶೇಕಾಡಾವಾರು 1-2ನ್ನೂ ಮೀರಲಾರದು ಎನಿಸುತ್ತದೆ. ರಾಜ್ಯಗಳ ಅಧಿಕಾರ ವ್ಯಾಪ್ತಿಯಲ್ಲಿ ಬರುವ ಆರ್​ಟಿಒ, ಅಬಕಾರಿ, ಕಂದಾಯ, ಪೊಲೀಸ್, ಲೋಕೋಪಯೋಗಿ, ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ವಿದೇಶಾಂಗ ವ್ಯವಹಾರ, ವಾಣಿಜ್ಯ, ಹಣಕಾಸು, ಭೂಸಾರಿಗೆ, ರಕ್ಷಣೆ, ರೈಲ್ವೇ ಮೊದಲಾದ ಇಲಾಖೆಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುವುದು ಸಹಜ ಸಂಗತಿಯಾಗಿದೆ. ಈ ಭ್ರಷ್ಟಾಚಾರವನ್ನು ನಿಯಂತ್ರಿಸಲು ಯಾವುದೇ ಸರ್ಕಾರಗಳೂ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿಲ್ಲ. ಇನ್ನು ಇವೆಲ್ಲ ಸಂಗತಿ ಗೊತ್ತಿರುವ ಪತ್ರಿಕೋದ್ಯಮ ಇವುಗಳ ಬೆನ್ನು ಬೀಳುತ್ತಿರುವುದು ಇತ್ತೀಚಿನ ದಿನಗಳಲ್ಲಿ ಏರುತ್ತಿದೆ.

ಕುಖ್ಯಾತ ಉದ್ಯಮಿಗಳೆಲ್ಲ ಮಾಧ್ಯಮಗಳಲ್ಲಿ ಅವಿತುಕೊಂಡು ತಮ್ಮ ಕುಕೃತ್ಯಗಳನ್ನು ಮರೆಮಾಚಲು ಯತ್ನಿಸುವ ಘಟನೆಗಳು ನಡೆಯುತ್ತಿವೆ. ವೃತ್ತಿ ಪತ್ರಿಕೋದ್ಯಮಕ್ಕೂ ಇದಕ್ಕೂ ಯಾವುದೇ ರೀತಿಯ ಸಂಬಂಧ ಇಲ್ಲ. ಇನ್ನೊಂದು ಮಹತ್ವದ ಸಂಗತಿ ಎಂದರೆ, ಇಂದು ವಿದ್ಯುನ್ಮಾನವಿರಲಿ ಅಥವಾ ಮುದ್ರಣ ಮಾಧ್ಯಮವಿರಲಿ ಕೋಟಿಗಟ್ಟಲೇ ಹಣವನ್ನು ಹೂಡಲೇಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಮಯದಲ್ಲಿ ಕೋಟಿಗಟ್ಟಲೇ ಹಣವನ್ನು ಹೂಡಿ ದೇಶಭಕ್ತಿ, ಸಮಾಜಸೇವೆ, ಜನಪರ ಕಾಳಜಿ, ಹೋರಾಟಗಳಿಗೆ ಬೆಂಬಲ ನೀಡುವುದು ಸಾಧ್ಯವಿಲ್ಲ.

ದೇಶದ ಬಹುತೇಕ ಮಾಧ್ಯಮಗಳು ಅಧಿಕಾರಸ್ಥ ರಾಜಕಾರಣಿಗಳ ಬೆಂಬಲಕ್ಕೆ ನಿಂತಿವೆ. ಈಗ ಮಾಧ್ಯಮ ಕ್ಷೇತ್ರವನ್ನು ರಾಜಕಾರಣಿಗಳ ಬೆಂಬಲಿಗ ಉದ್ಯಮಿಗಳೇ ಸೂರೆಹೊಡೆಯುತ್ತಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಪ್ರಧಾನಿ ಬೆಂಬಲಿಗ ಉದ್ಯಮಿ ಡಿಟಿಎಚ್ ತೆರೆದಿರುವುದಲ್ಲದೇ, ಹಾಥ್​ವೇಯನ್ನೂ ತನ್ನ ಬುಟ್ಟಿಗೆ ಹಾಕಿಕೊಂಡು ಆಯಿತು. ಈ ಮೂಲಕ ಡಿಸ್ಟ್ರಿಬ್ಯೂಷನ್ ಮೇಲೆ ಕೂಡ ಹಿಡಿತ ಸಾಧಿಸುವ ಕೆಲಸಕ್ಕೆ ಅವರು ಕೈಹಾಕಿದ್ದಾರೆ. ಈ ಮೂಲಕ ಯಾವ ಸುದ್ದಿ ಪ್ರಕಟವಾಗಬೇಕು? ಎಷ್ಟು ಪ್ರಕಟವಾಗಬೇಕು? ಯಾವುದು ಪ್ರಕಟವಾಗಬಾರದು? ಎಂದು ನಿಯಂತ್ರಿಸುವ ಕೆಲಸವನ್ನೂ ಇದೇ ಉದ್ಯಮಿಗಳು ಮಾಡತೊಡಗಿದ್ದಾರೆ. ದೇಶದ ರಕ್ಷಣಾ ಇತಿಹಾಸದಲ್ಲೇ ಅತ್ಯಂತ ದೊಡ್ಡ ರಕ್ಷಣಾ ಹಗರಣ ಎಂದು ಹೆಸರಾದ ರಫೇಲ್​​ ಆರೋಪ ದಿಕ್ಕುತಪ್ಪಿದ್ದು ಇದಕ್ಕೊಂದು ಉದಾಹರಣೆ. ಆಳುವ ಪ್ರಭುತ್ವದ ಮರ್ಜಿಯಲ್ಲಿರುವ ಪತ್ರಿಕೋದ್ಯಮ ನೈಜ ಸಂಗತಿಯನ್ನು ತೇಲಿಸದೇ ವಿಧಿಯಿಲ್ಲ. ಇದೇ ಕಾರಣಕ್ಕೆ 35,000 ಕೋಟಿ ರೂಪಾಯಿ ಅವ್ಯವಹಾರದ ಆರೋಪದ ಕುರಿತು ದೇಶದ ಬೆರಳೆಣಿಕೆಯಷ್ಟು ಸುದ್ದಿ ಮಾಧ್ಯಮ ಉದಾಹರಣೆಗೆ ದಿ ಹಿಂದೂ, ಎನ್​​ಡಿಟಿವಿ, ಇಂಡಿಯಾ ಟುಡೇ, ಕರ್ನಾಟಕದಲ್ಲಿ ಪ್ರಜಾವಾಣಿ, ಸಮಾಚಾರ.ಕಾಂ, ವಾರ್ತಾಭಾರತಿಯಂತಹ ಕೆಲವು ಮಾಧ್ಯಮಗಳನ್ನು ಹೊರತುಪಡಿಸಿದರೆ ಉಳಿದ ಯಾವುದೇ ಮಾಧ್ಯಮಗಳು ದೇಶದ ಜನರ ಗಮನ ಸೆಳೆಯುವ ಯತ್ನವನ್ನು ಮಾಡಲಿಲ್ಲ. ಇದಕ್ಕೆ ಸರ್ಕಾರಗಳು ನೀಡುವ ಜಾಹಿರಾತಿನಿಂದ ಹಿಡಿದು, ಪತ್ರಿಕೋದ್ಯಮದಲ್ಲಿ ಉದ್ಯೋಗ ನಿರತರಾಗಿರುವವರ ಆಳುವವರ ಓಲೈಕೆ, ಸೈದ್ಧಾಂತಿಕತೆಗಳೂ ಕಾರಣವಾಗುತ್ತಿವೆ.

ಹೇಮಂತ್ ಕಶ್ಯಪ್ ಬಂಧನ, ಬೂಕನಕೆರೆ ಮಂಜುನಾಥ್, ಮುರಳಿಯವರ ವಿರುದ್ಧ ಹೆಸರು ಬ್ಲಾಕ್ ಮೇಯ್ಲ್ ಆರೋಪದ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪತ್ರಕರ್ತ ಸತೀಶ್ ಚಪ್ಪರಿಕೆ “23 ವರ್ಷಗಳ ಕಾಲ ಮಾಧ್ಯಮದ ಅವಿಭಾಜ್ಯ ಅಂಗವಾಗಿ ಇದ್ದದ್ದಕ್ಕೆ ಮತ್ತು ಅನ್ನದ ಋಣವಿರುವ ಕಾರಣ ಕೇಳುತ್ತಿದ್ದೇನೆ… ಆತ್ಮೀಯರು, ಹಿರಿಯರು ಆದ ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್. ರಂಗನಾಥ್, ಸುವರ್ಣ 24×7ನ ಅಜಿತ್ ಹನುಮಕ್ಕನವರ್, ಟಿವಿ9 ನ ರಂಗನಾಥ ಭಾರದ್ವಾಜ್ ಮತ್ತು ಮಹೇಂದ್ರ ಮಿಶ್ರ, ದಿಗ್ವಿಜಯ ನ್ಯೂಸ್ ಮುಖ್ಯಸ್ಥ ಸುಭಾಷ್ ಹೂಗಾರ್, ಹಿರಿಯ ಟಿವಿ ಪತ್ರಕರ್ತ ಶಶಿಧರ ಭಟ್, ಸಮಯ ನ್ಯೂಸ್ನ ಮುಖ್ಯಸ್ಥ ಶಿವಪ್ರಸಾದ್ ಟಿ.ಆರ್, ಪ್ರಜಾವಾಣಿ ಸಂಪಾದಕ ರವೀಂದ್ರ ಭಟ್, ಕನ್ನಡ ಪ್ರಭ ಸಂಪಾದಕ ರವಿ ಹೆಗಡೆ, ಉದಯವಾಣಿ ಸಂಪಾದಕ ಅರವಿಂದ ನಾವಡ, ವಿಜಯ ಕರ್ನಾಟಕ ಸಂಪಾದಕ ತಿಮ್ಮಪ್ಪ ಭಟ್, ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ ಮತ್ತು ವಿಜಯವಾಣಿ ಸಂಪಾದಕ ಚನ್ನೇಗೌಡ… ಎಲ್ಲರ ಬಳಿ ಕಳಕಳಿಯಿಂದ ಕೇಳುತ್ತಿದ್ದೇನೆ…

“ಮಾಧ್ಯಮದಲ್ಲಿ ಭ್ರಷ್ಟಾಚಾರ ಕುರಿತು ನಿಮ್ಮ ಮತ್ತು ನಿಮ್ಮ ಸಂಸ್ಥೆಗಳ ನಿಲುವೇನು? ಮಾಧ್ಯಮದಲ್ಲಿನ ಭ್ರಷ್ಟಾಚಾರದ ಕುರಿತು ಮುಕ್ತವಾಗಿ ಮಾತನಾಡಲು ಈಗ ಕಾಲ ಕೂಡಿ ಬಂದಿಲ್ಲವೇ? ಸಂಜೆಯ ಪ್ರೈಮ್ ಟೈಮ್​​ನಲ್ಲಿ ಮಾಧ್ಯಮದಲ್ಲಿ ಭ್ರಷ್ಟಾಚಾರದ ಕುರಿತು ಎರಡು ಗಂಟೆಯ ಚರ್ಚೆ ನಡೆಸಲು ಇದು ಸಕಾಲವಲ್ಲವೇ? ಮಾಧ್ಯಮದಲ್ಲಿನ ಕೊಳಕು ತೊಳೆಯಲು ಇದು ಸರಿಯಾದ ಅವಕಾಶವಲ್ಲವೇ? ನೀವೆಲ್ಲ ಒಂದಾದರೆ, ನಿಮ್ಮ-ನಿಮ್ಮ ಮನೆಯೊಳಗಿನ ಕೊಳೆ ತೊಳೆದರೆ ಮಾಧ್ಯಮದಲ್ಲಿನ ಭ್ರಷ್ಟಾಚಾರಕ್ಕೆ ಕೊನೆ ಹಾಡಲು ಸಾಧ್ಯವಿಲ್ಲವೇ?”

ದಯವಿಟ್ಟು ಮಾತನಾಡಿ, ಸೂಕ್ತ ಕ್ರಮ ತೆಗೆದುಕೊಳ್ಳಿ. ನಿಮಗೆ-ನಮಗೆ ಸಾವಿರಾರು ಜನರಿಗೆ ಅನ್ನ ನೀಡುವ ಮಾಧ್ಯಮ ಲೋಕದ ಮರ್ಯಾದೆ ಉಳಿಸಿ” ಎಂದು ಪತ್ರಿಕೋದ್ಯಮದ ನೈತಿಕತೆಯ ಪ್ರಶ್ನೆಯನ್ನು ಎತ್ತಿದ್ದಾರೆ. ಕರ್ನಾಟಕದ ಎಲ್ಲ ಪತ್ರಿಕೆ, ಸುದ್ದಿವಾಹಿನಿಗಳ ಸಂಪಾದಕರಿಗೆ ಅವರು ಈ ಪ್ರಶ್ನೆ ಎತ್ತಿದ್ದಾರೆ. ಮೇಲಿನ ಮಾತುಗಳು ಕನ್ನಡವಿರಲಿ ಅಥವಾ ದೇಶದ ಯಾವುದೇ ಮಾಧ್ಯಮಕ್ಕೂ ಅನ್ವಯಿಸುತ್ತದೆ.

ಇನ್ನು ಈ ಕುರಿತು ಪ್ರತಿಕ್ರಿಯಿಸಿದ್ದ ಇನ್ನೊಬ್ಬ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, “ಡಿಸಿಪಿ ದೇವರಾಜ್ ಅವರನ್ನು ಅಭಿನಂದಿಸಲೇ ಬೇಕು. ಅವರ ಮೇಲಿನ ಒತ್ತಡಗಳನ್ನು ಅರ್ಥಮಾಡಿಕೊಳ್ಳಬಹುದು. ಆದರೆ‌ ಇಂತಹ ಪ್ರಕರಣಗಳಲ್ಲಿ ಸಾಮಾನ್ಯವಾಗಿ ವರದಿಗಾರರಷ್ಟೇ ಸಿಕ್ಕಿಹಾಕಿಕೊಳ್ತಾರೆ, ಭಾಗಿದಾರರೀಗೂ ಭಾಗ ಹೋಗಿರಬಹುದಲ್ವೇ? All right ಮುಂದೇನಾಗುವುದು ನೋಡೋಣ” ಎಂದಿದ್ದಾರೆ. ಕನ್ನಡ ಪತ್ರಕರ್ತರ ವ್ಯಾಪಕ ಖಂಡನೆಯ ನಂತರ ಹೇಳಿಕೆ ನೀಡಿದ ಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ರಂಗನಾಥ್ ಅವರು, ನಮ್ಮ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಆರೋಪಿಯನ್ನು ಕೆಲಸದಿಂದ ವಜಾ ಮಾಡಿದ್ದೇವೆ. ನಮ್ಮ ಆಡಳಿತ ಮಂಡಳಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ಪತ್ರ ಬರೆದಿದೆ ಎಂದಿದ್ದಾರೆ. ಇದನ್ನು ಅವರು ಯೂಟ್ಯೂಬ್​ನಲ್ಲಿ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಇಲ್ಲಿಗೆ ಪತ್ರಿಕೋದ್ಯಮ ಸ್ವಚ್ಛವಾಯಿತು ಎಂದೇನು ಅಲ್ಲ.

ಎಲ್ಲ ಕ್ಷೇತ್ರದಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿರುವ ಹೊತ್ತಿನಲ್ಲಿ ಪತ್ರಿಕೋದ್ಯಮ ಅದರಿಂದ ಹೊರತಾಗಿರಲು ಸಾಧ್ಯವೇ? ಎಂಬ ಪ್ರಶ್ನೆ ಕೂಡ ಎದುರಾಗುತ್ತದೆ. ಆದರೆ, ಉಳಿದೆಲ್ಲರನ್ನು, ಎಲ್ಲವನ್ನೂ ಪ್ರಶ್ನಿಸುವ ಪತ್ರಿಕೋದ್ಯಮ ಇಂತಹ ದುಃಸ್ಥಿತಿಗೆ ಇಳಿಯಬಾರದಿತ್ತು. ಭವಿಷ್ಯದಲ್ಲಿ ಪತ್ರಿಕೋದ್ಯಮದಲ್ಲಿರುವವರು ತಮ್ಮ ವೃತ್ತಿಯ ಕುರಿತು ಸಾರ್ವಜನಿಕವಾಗಿ ಹೇಳಿಕೊಳ್ಳಲು ಮುಜುಗರ ಉಂಟು ಮಾಡುವ ಇಂತಹವರನ್ನು ಪತ್ರಿಕೋದ್ಯಮಿಗಳು ಮತ್ತು ಸಂಪಾದಕರು ದೂರ ಇಡಬೇಕು.

ಇನ್ನು ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಗಮನಾರ್ಹ ಕೆಲಸವನ್ನು ಮಾಡಬೇಕಿದೆ. ರಾಜ್ಯದಲ್ಲಿ ಪತ್ರಕರ್ತರ ಮೇಲೆ ಆರೋಪ, ಬಂಧನ, ಬ್ಲಾಕ್​ಮೇಯ್ಲ್ ಪ್ರಕರಣ, ರಾಜಕಾರಣಿಗಳು ಪತ್ರಕರ್ತರಿಗೆ ನೀಡಿರುವ ಲಂಚ ರೂಪದ ಹಣ, ಉಡುಗೊರೆ ಇತ್ಯಾದಿಗಳ ಕುರಿತು ಕೂಲಂಕಷ ತನಿಖೆಯನ್ನು ನಡೆಸಲು ಖಡಕ್ ಅಧಿಕಾರಿಯ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಬೇಕು. ಇದುವರೆಗೆ ಯಾವೆಲ್ಲ ಪತ್ರಕರ್ತರ ವಿರುದ್ಧ ಆರೋಪಗಳು ಕೇಳಿಬಂದಿವೆಯೋ ಅವುಗಳ ಕುರಿತು ಸಮಗ್ರ ಮತ್ತು ಪಾರದರ್ಶಕವಾಗಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಭವಿಷ್ಯದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ನಾವು ಇದ್ದೇವೆ, ಇದ್ದೆವು ಎಂದು ಹೇಳಿಕೊಳ್ಳಲು ನಾಚಿಕೆಪಟ್ಟುಕೊಳ್ಳುವ ದಿನ ದೂರವಿಲ್ಲ. ನಾನು ಕೂಡ ಕನ್ನಡದ ಮುದ್ರಣ ಮತ್ತು ವಿದ್ಯುನ್ಮಾನ, ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿರುವುದರಿಂದ ನನ್ನ ಅಭಿಪ್ರಾಯಗಳನ್ನು ಹೇಳುತ್ತಿದ್ದೇನೆ.

ಪ್ರದೀಪ್ ಮಾಲ್ಗುಡಿ, ಹಿರಿಯ ಉಪ ಸಂಪಾದಕ, ಸುದ್ದಿ ಟಿವಿ

5+

Leave a Reply

Your email address will not be published. Required fields are marked *