ಗುಜರಾತ್​​ನಲ್ಲಿ ಬಿಜೆಪಿಗೆ ಗೆಲುವು: ಮತಗಳಿಕೆಯಲ್ಲಿ ಹಿಂದುಳಿಯಲಿದೆ ಎಂದ ಸಮೀಕ್ಷೆ

ಬಿಜೆಪಿ ಮಿಷನ್ 150 ಗುರಿ ಮುಟ್ಟಲ್ಲ ಅಂತಿವೆ ಸಮೀಕ್ಷೆಗಳು
ಮೋದಿ – ಶಾ ಜೋಡಿಗೆ ತವರಿನಲ್ಲೇ ಗುರಿ ಮುಟ್ಟಲಾಗದ ಆತಂಕ
22 ವರ್ಷದ ಬಿಜೆಪಿ ಆಡಳಿತ ಮತ್ತೊಂದು ಅವಧಿಗೆ ಮುಂದುವರಿಕೆ?

ಗಾಂಧಿನಗರ: ಬಿಜೆಪಿ ಗುಜರಾತ್​ನಲ್ಲಿ ಮಿಷನ್ 150ಗಾಗಿ ಹೋರಾಡುತ್ತಿದೆ. ಇದಕ್ಕಾಗಿ ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಟೊಂಕಕಟ್ಟಿ ನಿಂತಿದ್ದಾರೆ. ಆದರೆ, ಟೈಮ್ಸ್​​ನೌ – ವಿಎಂಆರ್ ಸಮೀಕ್ಷೆಯ ಪ್ರಕಾರ 106 – 115 ಕ್ಷೇತ್ರಗಳನ್ನು ಗೆಲ್ಲುವಷ್ಟಕ್ಕೆ ಮಾತ್ರ ಪಕ್ಷ ಸೀಮಿತವಾಗಲಿದೆ. ಇನ್ನು ಕಾಂಗ್ರೆಸ್​​ನ ಬಲ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ತವರು ಗುಜರಾತ್. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಗುಜರಾತ್ ವಿಧಾನಸಭೆ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಪಕ್ಷದ ಅಧ್ಯಕ್ಷ ಮತ್ತು ಪ್ರಧಾನಿ ಗುಜರಾತ್​ನವರೇ ಆಗಿರುವುದರಿಂದ ಇದು ಸಹಜ ಸಂಗತಿ. ಇದನ್ನು ಸವಾಲಾಗಿ ಸ್ವೀಕರಿಸುವ ಮೋದಿ ಮತ್ತು ಅಮಿತ್ ಶಾ ಶತಾಯಗತಾಯ 150 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ ಹೊಂದಿದ್ದಾರೆ. ಇದಕ್ಕಾಗಿಯೇ ಮೋದಿ 150ಕ್ಕೂ ಹೆಚ್ಚು ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಹಗಲು ರಾತ್ರಿ ಬೆವರು ಹರಿಸಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರವನ್ನೂ ಮಾಡಿದ್ದಾರೆ.

ಆದರೆ, ಅವರ ಈ ನಿರಂತರ ಪರಿಶ್ರಮದಿಂದ ಕೂಡ ಪಕ್ಷ 150ರ ಗಡಿ ಮುಟ್ಟುವುದು ಸಾಧ್ಯವಿಲ್ಲ ಎಂಬ ಅಚ್ಚರಿಯ ಸಂಗತಿಯನ್ನು ಟೈಮ್ಸ್​​ನೌ ಮತ್ತು ವಿಎಂಆರ್ ಸಮೀಕ್ಷೆ ಬಹಿರಂಗಪಡಿಸಿದೆ. ಈ ಸಮೀಕ್ಷೆಯ ಪ್ರಕಾರ, ಬಿಜೆಪಿ 106 – 116 ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲುತ್ತೆ. ಉಳಿದಂತೆ ಎರಡನೇ ಅತಿದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮುತ್ತೆ ಅನ್ನುತ್ತೆ ಇತ್ತಿಚಿನ ಸಮೀಕ್ಷೆ.

2012ರಲ್ಲಿ ರಾಜಕೀಯ ಪಕ್ಷಗಳ ಬಲಾಬಲ
ಒಟ್ಟು ವಿಧಾನಸಭೆ ಕ್ಷೇತ್ರಗಳು  – 182
ಬಹುಮತಕ್ಕೆ ಅಗತ್ಯ ಬಲ       –   91
ಬಿಜೆಪಿ                             – 120
ಕಾಂಗ್ರೆ                             –  47
ಎನ್​ಸಿಪಿ                           –   2
ಜೆಡಿಯು                           –   1
ಪಕ್ಷೇತರ                           –   1
ಖಾಲಿ ಸ್ಥಾನಗಳು                 –  15

2012ರಲ್ಲಿ ರಾಜಕೀಯ ಪಕ್ಷಗಳ ಬಲಾಬಲ ಇಂತಿದೆ. ಗುಜರಾತ್​ನಲ್ಲಿ ಒಟ್ಟು 182 ವಿಧಾನಸಭೆ ಕ್ಷೇತ್ರಗಳಿದ್ದು, 2012ರ ಅವಧಿಯ ವಿಧಾನಸಭೆಯಲ್ಲಿ ಬಿಜೆಪಿ – 120, ಕಾಂಗ್ರೆಸ್ – 47, ಎನ್​ಸಿಪಿ – 2, ಜೆಡಿಯು – 1, ಪಕ್ಷೇತರರು – 1 ಸ್ಥಾನದಲ್ಲಿ ಗೆದ್ದಿದ್ದರು. ಇನ್ನು ಕಾಂಗ್ರೆಸ್ ಪಕ್ಷವನ್ನು ಕೊನೆಯ ಕ್ಷಣದಲ್ಲಿ ತೊರೆದಿರುವವರು ಮತ್ತು ಇನ್ನಿತರ ಕಾರಣಗಳಿಂದ ಸದ್ಯಕ್ಕೆ 15 ವಿಧಾನಸಭೆ ಕ್ಷೇತ್ರಗಳು ಖಾಲಿ ಇವೆ.

ಚುನಾವಣಾ ಪೂರ್ವ ಜನಾಭಿಪ್ರಾಯ
ಸರಳ ಬಹುಮತಕ್ಕೆ ಅಗತ್ಯ ಸಂಖ್ಯೆ – 91
ಬಿಜೆಪಿ       – 106   – 116
ಕಾಂಗ್ರೆಸ್   –   63  –    73
ಇತರರು    –     2  –      4

ಚುನಾವಣಾ ಪೂರ್ವ ಜನಾಭಿಪ್ರಾಯದ ಪ್ರಕಾರ ಬಿಜೆಪಿ ಕಳೆದ ಬಾರಿಗಿಂತ ಕಳಪೆ ಪ್ರದರ್ಶನ ನೀಡಲಿದೆ. ಸಮೀಕ್ಷೆಯ ಪ್ರಕಾರ, ಬಿಜೆಪಿ – 106 – 116, ಕಾಂಗ್ರೆಸ್ – 63 – 73 ಮತ್ತು ಇತರ ಪಕ್ಷಗಳು – 2 – 4 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಲಿವೆ.

ಸಮೀಕ್ಷೆಯ ಪ್ರಕಾರ, ಬಿಜೆಪಿ ಕಳೆದ ಬಾರಿಗಿಂತ ಕಳಪೆ ಪ್ರದರ್ಶನ ನೀಡಲಿದ್ದು, ಸುಮಾರು 14 ಕ್ಷೇತ್ರಗಳನ್ನು ಕಳೆದುಕೊಳ್ಳಲಿದೆ. ಇನ್ನು ಕಾಂಗ್ರೆಸ್ ಉತ್ತಮ ಪ್ರದರ್ಶನ ನೀಡಲಿದ್ದು, 15ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಸರಳ ಬಹುಮತಕ್ಕೆ 91 ಸದಸ್ಯರ ಅಗತ್ಯವಿದ್ದು, ಈ ಬಾರಿ ಕೂಡ ಬಿಜೆಪಿ ಅಧಿಕಾರ ಹಿಡಿಯುತ್ತೆ ಅಂಥಾ ಸಮೀಕ್ಷೆ ಹೇಳಿದೆ. ಇನ್ನು, ಕಳೆದ ಬಾರಿ ಬಿಜೆಪಿ ಶೇ. 48ರಷ್ಟು ಮತ ಪಡೆದಿತ್ತು. ಆದರೆ, ಈ ಬಾರಿ ಇದರ ಪ್ರಮಾಣ ಶೇ. 45ಕ್ಕೆ ಕುಸಿಯಲಿದೆ. ಇನ್ನು ಕಾಂಗ್ರೆಸ್ ಶೇ. 39ರಷ್ಟಿದ್ದ ತನ್ನ ಮತಗಳಿಕೆಯ ಪ್ರಮಾಣವನ್ನು ಶೇ. 40ಕ್ಕೆ ಏರಿಸಿಕೊಳ್ಳುತ್ತದೆ. ಇತರ ಪಕ್ಷಗಳ ಮತಗಳಿಕೆಯ ಪ್ರಮಾಣದಲ್ಲಿ ಕೂಡ ಶೇ 2ರಷ್ಟು ಏರಿಕೆಯಾಗಲಿದೆ ಎನ್ನುತ್ತಿದೆ ಸಮೀಕ್ಷೆ.

ಟೈಮ್ಸ್​ನೌ ಮತ್ತು ವಿಎಂಆರ್ ನಡೆಸಿದ ಜಂಟಿ ಸಮೀಕ್ಷೆಯಲ್ಲಿ ಒಟ್ಟು 6,000 ಜನರ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. ಗುಜರಾತಿನ ಒಟ್ಟು 684 ಮತಗಟ್ಟೆಗಳಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿದ್ದು, ಸಮಾಜೋ-ಆರ್ಥಿಕವಾಗಿ ನಾಲ್ಕು ವಲಯಗಳನ್ನು ವಿಂಗಡಿಸಿಕೊಂಡು ಮಾಹಿತಿಯನ್ನು ಸಂಗ್ರಹಿಸಲಾಗಿದೆ. ನವೆಂಬರ್ 23 ರಿಂದ 30, 2017ರ ಅವಧಿಯಲ್ಲಿ ವಿವಿಧ ಗುಂಪುಗಳು, ಲಿಂಗ, ನಗರ, ಗ್ರಾಮೀಣ ಪ್ರದೇಶಗಳಲ್ಲಿ ಜನಾಭಿಪ್ರಾಯವನ್ನು ಸಂಗ್ರಹಿಸಲಾಗಿದೆ.

ಗುಜರಾತ್​ನಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಬಲಿಷ್ಠವಾಗುತ್ತಿರುವುದರ ಸೂಚನೆಯನ್ನು ಪ್ರಸ್ತುತ ಸಮೀಕ್ಷೆ ನೀಡಿದೆ. ಇನ್ನು ಹಾರ್ದಿಕ್ ಪಟೇಲ್, ಅಲ್ಪೇಶ್ ಠಾಕೂರ್, ಜಿಗ್ನೇಶ್ ಮೆವಾನಿಯವರ ಬೆಂಬಲ ಕೂಡ ಕಾಂಗ್ರೆಸ್​ನ ಬಲವನ್ನು ವರ್ಧಿಸಲಿದೆ ಎಂಬುದು ಬಹಿರಂಗವಾಗಿದೆ. ಎಲ್ಲ ಸಮೀಕ್ಷೆಗಳ ಸತ್ಯಾಸತ್ಯತೆ ಡಿ. 18ರಂದು ಅಂತಿಮ ಫಲಿತಾಂಶ ಪ್ರಕಟವಾದ ನಂತರ ಬಯಲಾಗಲಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *