ಬೆಂಗಳೂರಿನ ಅಭಿವೃದ್ಧಿಗಾಗಿ ಬಿಜೆಪಿ ಏನನ್ನೂ ಮಾಡಿಲ್ಲ: ಬಿ ಕೆ ಹರಿಪ್ರಸಾದ್

ಬೆಂಗಳೂರು: ಬೆಂಗಳೂರಿಗಾಗಿ ಬಿಜೆಪಿ ಪಕ್ಷ ಮತ್ತು ಪಕ್ಷದಿಂದ ಆಯ್ಕೆಯಾದ ಸಂಸದರು ಯಾವುದೇ ಕೆಲಸ ಮಾಡಿಲ್ಲ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಅಭ್ಯರ್ಥಿ ಬಿ ಕೆ ಹರಿಪ್ರಸಾದ್ ಹೇಳಿದರು. ಬೆಂಗಳೂರಿನ ಅಭಿವೃದ್ಧಿಗಾಗಿ ಜನತಾ ಪರಿವಾರ ಮತ್ತು ಕಾಂಗ್ರೆಸ್ ಪಕ್ಷಗಳು ಕೊಡುಗೆ ನೀಡಿವೆಯೇ ಹೊರತು, ಬಿಜೆಪಿಯ ಕೊಡುಗೆ ಶೂನ್ಯ ಎಂದು ಅವರು ಆರೋಪಿಸಿದರು.

ಬೆಂಗಳೂರು ಪ್ರೆಸ್ ಕ್ಲಬ್ ಆಯೋಜಿಸಿದ್ದ ಪತ್ರಕರ್ತರೊಂದಿಗೆ ಸಂವಾದದಲ್ಲಿ ಭಾಗವಹಿಸಿದ್ದ ಅವರು, ನರೇಂದ್ರ ಮೋದಿಯವರು ಯಾವಾಗಲೂ ಗುಜರಾತ್ ಮಾಡೆಲ್ ಎನ್ನುತ್ತಾರೆ. ಇದುವರೆಗೆ ಗುಜರಾತ್ ಮಾದರಿ ಎಂದರೆ ಏನು? ಎಂದು ಅವರು ಹೇಳಿಲ್ಲ. ಸಂಸತ್ತಿನ ಕಲಾಪದಲ್ಲಿ ಕೂಡ ನಾನು ಈ ಕುರಿತು ಚರ್ಚಿಸುವಂತೆ ಆಹ್ವಾನ ನೀಡಿದ್ದೆ. ಆದರೆ, ಅದರ ಕುರಿತು ಚರ್ಚೆಗೆ ಬಿಜೆಪಿ ಮತ್ತು ಅದರ ನಾಯಕರು ಸಿದ್ಧರಿಲ್ಲ ಎಂದರು.

54 ಚದರ ಕಿಮೀ. ಇದ್ದ ಬೆಂಗಳೂರು, ಈಗ 840 ಚದರ ಕಿಮೀ.ವರೆಗೆ ವಿಸ್ತರಿಸಿದೆ. ಬೆಳೆಯುವ ಮೂಲಕ ವಿವಿಧ ರೀತಿಯ ಹಸಿವು ಕೂಡ ಹೆಚ್ಚಿದೆ. ಆದ್ದರಿಂದ ಬೆಂಗಳೂರಿನ ಅಭಿವೃದ್ಧಿಗೆ ವಿಭಿನ್ನ ಯೋಜನೆಗಳ ಅವಶ್ಯಕತೆ ಇದೆ. ಆದರೆ, ಬಿಜೆಪಿ ಅಧಿಕಾರದ ಅವಧಿಯಲ್ಲಿ ಬೆಂಗಳೂರನ್ನು ಗಾರ್ಬೇಜ್ ಸಿಟಿಯಾಗಿಸಲಾಯಿತು. ಜೊತೆಗೆ, ಬೆಂಗಳೂರಿಗೆ ಅತ್ಯಾಚಾರಿಗಳ ನಗರ ಎಂದು ಬಿಜೆಪಿ ಅಪಪ್ರಚಾರದ ಮೂಲಕ ಪಟ್ಟಕಟ್ಟಿತು. ಇದು ಸರಿಯಾದ ಕ್ರಮವಲ್ಲ ಎಂದು ಅವರು ಬಿಜೆಪಿಗರ ವಿರುದ್ಧ ಹೇಳಿಕೆ ನೀಡಿದರು.

ಬೇರೆ ರಾಜ್ಯಗಳ ನಗರಗಳಿಗೆ ಹೋಲಿಸಿದರೆ ಬೆಂಗಳೂರು ಅತ್ಯುತ್ತಮ ನಗರ. ಬೆಂಗಳೂರಿನಲ್ಲಿ ಅಲ್ಲಲ್ಲಿ ಗ್ರೀನ್ ಪ್ಯಾಚ್‍ಗಳಿವೆ. ಕಬ್ಬನ್ ಪಾರ್ಕ್, ಲಾಲ್ ಬಾಗ್ ಮಾದರಿಯಲ್ಲಿ ಬೃಹತ್ ಪಾರ್ಕ್ ನಿರ್ಮಿಸುವ ಗುರಿ ಹೊಂದಿದ್ದೇನೆ ಎಂದರು. ಜೊತೆಗೆ ಬೆಂಗಳೂರಿನನ 4 ದಿಕ್ಕಿನಲ್ಲೂ ಇಂತಹ ಬೃಹತ್ ಪಾರ್ಕ್‍ಗಳನ್ನು ಸ್ಥಾಪಿಸಬೇಕು ಎಂದು ಅವರು ಹೇಳಿದರು.

ಬೆಂಗಳೂರಿಗೆ ದೇಶ, ವಿದೇಶಗಳಿಂದ ಉದ್ಯೋಗ ಅರಸಿ ಜನರು ಬರುತ್ತಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ನಗರವಾಗಿ ಬೆಳೆದಿದ್ದು ‘ಅವಕಾಶಗಳ ನಗರ’ವಾಗಿ ಪರಿವರ್ತನೆಯಾಗಿದೆ. ಉತ್ತರಪ್ರದೇಶ, ಬಿಹಾರ ಮೊದಲಾದ ನಗರಗಳಿಂದ ಜನ ಇಲ್ಲಿಗೆ ಬರುತ್ತಿದ್ದಾರೆ ಎಂದರು.

ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧದ ನಂತರ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭಿವೃದ್ಧಿ ಕುಂಟಿತವಾಗಿದೆ ಎಂದ ಅವರು ಜಿಎಸ್‍ಟಿಯನ್ನು ಕೂಡ ಸರಳಗೊಳಿಸಬೇಕು ಎಂದರು.

ಕೆಂಗಲ್ ಹನುಮಂತಯ್ಯನವರು ಬೆಂಗಳೂರಿನಲ್ಲಿ ವಿಧಾನಸೌಧವನ್ನು ನಿರ್ಮಿಸಿದ್ದಾರೆ. ಜಾಫರ್ ಷರೀಫ್ ಅವರು ಬೆಂಗಳೂರಿಗೆ ಅಚ್ಚು ಮತ್ತು ಗಾಲಿ ಕಾರ್ಖಾನೆಯನ್ನು ತಂದಿದ್ದಾರೆ. ಕೃಷ್ಣಪ್ಪನವರು ಕೆಎಂಎಫ್ ನಿರ್ಮಿಸಿದ್ದಾರೆ. ಇಂತಹ ಬೆಂಗಳೂರಿನಲ್ಲಿ ನಾನು ಬೆಳೆದಿದ್ದೇನೆ. ಈ ನಗರಕ್ಕಾಗಿ ಏನನ್ನಾದರೂ ಮಾಡಬೇಕು ಎಂಬ ಉದ್ದೇಶವನ್ನು ಹೊಂದಿದ್ದೇನೆ ಎಂದು ಅವರು ಹೇಳಿದರು.

20 ವರ್ಷ ಬೆಂಗಳೂರಿನಲ್ಲಿ ಗೆದ್ದಿರುವ ಬಿಜೆಪಿಗರು ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಬೆಂಗಳೂರಿನ ಅಭಿವೃದ್ಧಿಗಾಗಿ ಅವರು ಯಾವುದೇ ಕೊಡುಗೆಯನ್ನು ನೀಡಿಲ್ಲ. ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿಯವರು, ನಗರದ ಕುರಿತು ಒಂದೇ ಒಂದು ಶಬ್ದವನ್ನೂ ಆಡಲಿಲ್ಲ ಎಂದರು.

ಬೆಂಗಳೂರಿನಲ್ಲಿ ದೆಹಲಿಯಲ್ಲಿರುವ ವಿಜ್ಞಾನ ಭವನ ಮತ್ತು ಅಂಬೇಡ್ಕರ್ ಭವನಗಳ ಮಾದರಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಭವನಗಳನ್ನು ನಿರ್ಮಿಸಬೇಕಿದೆ. ಇದಕ್ಕಾಗಿ ನಾನು ಸಿದ್ಧವಾಗಿದ್ದೇನೆ ಎಂದು ಅವರು ಹೇಳಿದರು.

ಸಂವಾದದಲ್ಲಿ ಕೇಳಿಬಂದ ಪ್ರಶ್ನೆಗಳಿಗೆ ತಾಳ್ಮೆಯಿಂದಲೇ ಉತ್ತರಿಸಿದ ಅವರು, ತೇಜಸ್ವಿ ಸೂರ್ಯ ಅವರ ಸ್ಪರ್ಧೆ ಬಿಜೆಪಿಯ ಆಂತರಿಕ ವಿಚಾರ. ನಾನು ಅದರ ಕುರಿತು ಪ್ರತಿಕ್ರಿಯಿಸುವುದಿಲ್ಲ ಎಂದರು. ಜೊತೆಗೆ ಅವರ ಸ್ಪರ್ಧೆಯಿಂದ ಅನುಕೂಲ ಅನಾನುಕೂಲದ ಪ್ರಶ್ನೆಯೇ ಇಲ್ಲ. ನಾನು ನನ್ನ ಜೀವನದುದ್ದಕ್ಕೂ ಬಿಜೆಪಿ ವಿರುದ್ಧ ಹೋರಾಡುತ್ತಿದ್ದೇನೆ. ಭವಿಷ್ಯದಲ್ಲಿ ಈ ಹೋರಾಟವನ್ನು ಮುಂದುವರೆಸುತ್ತೇನೆ ಎಂದರು.

ತೇಜಸ್ವಿ ವಿರುದ್ಧದ ಮೀಟೂ ಆರೋಪ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಮೀಟೂದಂತಹ ಆರೋಪಗಳು ವೈಯಕ್ತಿಕ. ಅದರ ಕುರಿತು ಪಕ್ಷಗಳೇ ತೀರ್ಮಾನ ತೆಗೆದುಕೊಳ್ಳಬೇಕು ಎಂದರು.

ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಓಲೈಸುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾರಿಗೂ ಹೇಳದೆ ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ತಿನ್ನುವ, ತಮ್ಮ ಪ್ರಮಾಣ ವಚನಕ್ಕೆ ನವಾಜ್ ಷರೀಫ್ ಅವರಿಗೆ ಆಹ್ವಾನ ನೀಡುವ ಬಿಜೆಪಿ ಮತ್ತು ಮೋದಿಯವರು ಮಾಡುವುದು ಓಲೈಕೆಯಲ್ಲ. ಜನರ ಪರವಾಗಿ ಏನಾದರೂ ಕೆಲಸ ಮಾಡಿದರೆ ಅದು ಓಲೈಕೆ ಹೇಗಾಗುತ್ತದೆ ಎಂದು ಪ್ರಶ‍್ನಿಸಿದರು. ಜೊತೆಗೆ, ಪಠಾಣ್ ಕೋಟ್, ಉರಿ ಮೊದಲಾದ ಸೇನಾನೆಲೆಗಳ ಮೇಲೆ ಪಾಕಿಸ್ತಾನ ದಾಳಿ ನಡೆಸಿದೆ. ಆಗ 56 ಇಂಚಿನ ಎದೆಯ ಮೋದಿಯವರು ಏನು ಮಾಡಿದರು? ಎಂದು ಪ್ರಶ್ನಿಸಿದರು.

ಬಿಜೆಪಿಯ ಉಗ್ರ ಹಿಂದುತ್ವವನ್ನು ಮಣಿಸಲು ಕಾಂಗ್ರೆಸ್ ಮೃದು ಹಿಂದುತ್ವವನ್ನು ಅನುಸರಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದುತ್ವಕ್ಕೂ ಹಿಂದೂ ಧರ್ಮಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಹಿಂದುತ್ವ ಎನ್ನುವುದು ವೀರ ಸಾವರ್ಕರ್ ಅವರ ಹೇಳಿಕೆ. ನಾವು ಗಾಂಧಿ, ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ ಹಿಂದೂ ಧರ್ಮವನ್ನು ಅನುಸರಿಸುತ್ತೇವೆ ಎಂದರು.

ಸಂವಿಧಾನ, ಪ್ರಜಾಪ್ರಭುತ್ವದ ವಿರುದ್ಧ ಮೋದಿಯವರು ಹೇಳಿಕೆ ನೀಡುತ್ತಿದ್ದಾರೆ. ಸಂವಿಧಾನ ಇರಬೇಕೇ ಬೇಡವೇ? ಎಂದು ಚರ್ಚೆಗಳಾಗುತ್ತಿವೆ. ಸಂವಿಧಾನದ ಉಳಿವಿಗಾಗಿ ನಮ್ಮ ಹೋರಾಟ ಎಂದರು. ಈ ಬಾರಿ ಚುನಾವಣೆ ನಡೆದ ಮೇಲೆ ಮತ್ತೊಮ್ಮೆ ಚುನಾವಣೆಗಳೇ ನಡೆಯುವುದಿಲ್ಲ ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಹೇಳುತ್ತಾರೆ. ಇದು ಯಾರೋ ಒಬ್ಬ ಹುಚ್ಚ ನೀಡಿದ ಹೇಳಿಕೆಯಲ್ಲ. ಅವರು ಮಾಡಬೇಕೆಂದುಕೊಂಡಿರುವ ಕೆಲಸವೇ ಅದು ಎಂದರು.

ಜೆಡಿಎಸ್ ಸಕ್ರಿಯವಾಗಿ ತಮ್ಮ ಪರವಾಗಿ ಪ್ರಚಾರಕ್ಕೆ ಬರುತ್ತಿಲ್ಲವಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಹರಿಪ್ರಸಾದ್, ದೇವೇಗೌಡರೊಂದಿಗೆ ನನಗೆ ಉತ್ತಮ ಸಂಬಂಧವಿದೆ. ಮೋದಿಯನ್ನು ಸೋಲಿಸಬೇಕು ಎಂದು ದೇವೇಗೌಡರು ಕರೆನೀಡಿದ್ದಾರೆ. ಸಂವಿಧಾನವನ್ನು ಉಳಿಸಬೇಕು ಎಂಬ ಆಶಯ ನನ್ನದು ಎಂದರು.

0

Leave a Reply

Your email address will not be published. Required fields are marked *