ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ: ದೇಶದ ಪ್ರಮುಖ ನಾಯಕರ ಪ್ರತಿಕ್ರಿಯೆ

ನವದೆಹಲಿ: ಬಿಜೆಪಿಗೆ ಸರ್ಕಾರ ರಚನೆಗೆ ನೀಡಿರುವ ಆಹ್ವಾನ ಭ್ರಷ್ಟಾಚಾರಕ್ಕೆ ನೀಡಿರುವ ಮುಕ್ತ ಆಹ್ವಾನ ಎಂದು ಹಿರಿಯ ವಕೀಲ ರಾಂ ಜೇಠ್ಮಲಾನಿ ಹೇಳಿ ವಾಗ್ದಾಳಿ ನಡೆಸಿದ್ದಾರೆ. ಪ್ರಜಾಪ್ರಭುತ್ವವನ್ನು ಪ್ರಾಮಾಣಿಕವಾಗಿ ಜಾರಿಯಲ್ಲಿಡಬೇಕು ಎಂದ ಅವರು, ಇಂಥ ಮೂರ್ಖ ನಿರ್ಣಯ ತೆಗೆದುಕೊಳ್ಳುವಂಥ ಯಾವ ಸಂಗತಿಯನ್ನು ಬಿಜೆಪಿ ರಾಜ್ಯಪಾಲರಿಗೆ ಹೇಳಿದೆ ಎಂಬ ಸತ್ಯವನ್ನು ಜನತೆಯ ಮುಂದೆ ಬಹಿರಂಗಗೊಳಿಸದಿದ್ದಲ್ಲಿ ಸಂವಿಧಾನದ ಉಲ್ಲಂಘನೆಯಾದಂತೆ ಎಂದು ಅವರು ಹೇಳಿದ್ದಾರೆ. ಅಲ್ಲದೇ, ಸುಪ್ರೀಂ ಕೋರ್ಟ್​​​ ಈ ಪ್ರಕರಣದಲ್ಲಿ ಅನ್ಯಾಯ ಎಸಗುತ್ತದೆ ಎನ್ನಲಾಗದು ಎಂದಿದ್ದಾರೆ.

ಕರ್ನಾಟಕದಲ್ಲಿ ಬಹುಮತ ಸಾಬೀತು ವಿಚಾರದಲ್ಲಿ ಯಾವುದೇ ತುರ್ತು ಕ್ರಮದ ಅಗತ್ಯವಿಲ್ಲ ಎಂದು ಹಿರಿಯ ವಕೀಲ ಮುಕುಲ್ ರೋಹಟಗಿ ಹೇಳಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಿರುವುದರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು,
ಸುಪ್ರೀಂ ಕೋರ್ಟ್ ಯಾವುದೇ ನಿರ್ಧಾರ ತೆಗೆದುಕೊಳ್ಳಬಹುದು. ಒಂದು ವೇಳೆ ತಪ್ಪು ನಡೆದಿದ್ದಲ್ಲಿ, ಅದನ್ನು ಸುಪ್ರೀಂ ಕೋರ್ಟ್​ ತಡೆಯಬಹುದು ಎಂದಿರುವ ಅವರು, ನಿನ್ನೆ ರಾತ್ರಿ ನಮ್ಮ ಬಳಿ ಮನವಿಯೊಂದನ್ನು ಹೊರತುಪಡಿಸಿ, ಎಲ್ಲ ಅಗತ್ಯ ದಾಖಲೆಗಳಿರಲಿಲ್ಲ ಎಂದಿದ್ದಾರೆ.

ಪ್ರಜಾಪ್ರಭುತ್ವವನ್ನು ಬೆರಗುಗೊಳಿಸುವಂತೆ ನಿರ್ವಹಿಸಲಾಗುತ್ತಿದೆ ಎಂದು ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಟ್ವೀಟ್ ಮಾಡಿದ್ದಾರೆ. ಕರ್ನಾಟಕದಲ್ಲಿ ಪ್ರಜಾಪ್ರಭುತ್ವವನ್ನು ಕತ್ತರಿಸಲಾಗಿದೆ ಎಂದಿರುವ ಅವರು, ಇದು ಭವಿಷ್ಯದ ಭಾರತಕ್ಕೆ ಮಾರಕ ಎಂದಿದ್ದಾರೆ. ಎಲ್ಲರ ಕಣ್ಣುಗಳೂ ಈಗ ದೇಶದ ತಳಹದಿಯಾಗಿರುವ ಸುಪ್ರೀಂ ಕೋರ್ಟ್​​​​ನ ಮೇಲೆ ನೆಟ್ಟಿವೆ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಡಿಎಂಕೆ ಕಾರ್ಯಾಧ್ಯಕ್ಷ ಎಂ ಕೆ ಸ್ಟಾಲಿನ್ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಅಲ್ಪಮತದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿರುವುದರ ಕುರಿತು ಪ್ರತಿಕ್ರಿಯಿಸಿದ ಅವರು, ತಮಿಳುನಾಡಿನಲ್ಲಿ ಅಧಿಕಾರ ದುರ್ಬಳಕೆಯಾಗಿತ್ತು. ಈಗ ಕರ್ನಾಟಕದಲ್ಲಿ ಇದು ಪುನರಾವರ್ತನೆಯಾಗಿದೆ ಎಂದಿದ್ದಾರೆ. ಅಲ್ಲದೇ, ಇದು ಪ್ರಜಾಪ್ರಭುತ್ವ ಮತ್ತು ಕಾನೂನಿಗೆ ಸಂಪೂರ್ಣ ವಿರುದ್ಧ ಎಂದು ಅವರು ಪ್ರಧಾನಿ ಮೋದಿ ವಿರುದ್ಧ ಕಿಡಿ ಕಾರಿದ್ದಾರೆ.

ರಾಜ್ಯಪಾಲರು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಕರ್ನಾಟಕ ರಾಜ್ಯಪಾಲರ ವಿರುದ್ಧ ಕಿಡಿಕಾರಿದ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಹೇಳಿದ್ದಾರೆ. ಕೇಂದ್ರ ಸರ್ಕಾರದ ಆದೇಶದ ಮೇಲೆ ರಾಜ್ಯಪಾಲರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಮೋದಿ ಸಾಹೇಬರ ಅವಧಿಯಲ್ಲಿ ವಜೂಭಾಯಿಯವರು ಸಚಿವರಾಗಿದ್ದರು. ವಜೂಭಾಯಿಯವರು ಆರ್​ಎಸ್​ಎಸ್​​ ಸದಸ್ಯರಾಗಿದ್ದರು ಎಂದಿದ್ದಾರೆ. ಅಲ್ಲದೇ, ಕೇಂದ್ರದ ಆದೇಶವನ್ನು ಅವರು ಪಾಲಿಸುತ್ತಾರೆ ಎಂದು ಸಿಂಗ್ ಆರೋಪಿಸಿದ್ದಾರೆ.

ಅಂಬೇಡ್ಕರ್ ಸಂವಿಧಾನ ನಾಶವಾಗಿದೆ ಎಂದು ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಸಂವಿಧಾನ ನಾಶಕ್ಕೆ ಪಿತೂರಿ ನಡೆಸಲಾಗಿದೆ ಎಂದು ಕೇಂದ್ರದ ವಿರುದ್ಧ ಆರೋಪಿಸಿರುವ ಅವರು, ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಇಂಥ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಸರ್ಕಾರಿ ಯಂತ್ರಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಮತ್ತು ಸಂವಿಧಾನದ ಮೇಲೆ ದಾಳಿ ನಡೆಸಲಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇಂದು ಸಂವಿಧಾನದ ಮೇಲೆ ದಾಳಿ ನಡೆದಿದೆ ಎಂದ ಅವರು, ಕರ್ನಾಟದಲ್ಲಿ ಒಂದೆಡೆ ಶಾಸಕರು ನಿಂತಿದ್ದಾರೆ. ಮತ್ತೊಂದೆಡೆ ರಾಜ್ಯಪಾಲರು ನಿಂತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. 100 ಕೋಟಿ ರೂ. ಆಮಿಶ ಒಡ್ಡಲಾಗಿದೆ ಎಂದು ಜೆಡಿಎಸ್ ಆರೋಪಿಸಿದೆ ಎಂದು ಅವರು ಬಿಜೆಪಿ ವಿರುದ್ಧ ಆರೋಪಿಸಿದರು.

ಬಿ ಎಸ್ ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿರುವ ಕುರಿತು ಪ್ರತಿಕ್ರಿಯಿಸಿರುವ ಶಿವಸೇನೆಯ ಸಂಸದ ಸಂಜಯ್ ರಾವತ್, ಬಿಎಸ್​ವೈ ಬಹುಮತ ಸಾಬೀತುಪಡಿಸುವುದು ಕಷ್ಟ ಎಂದಿದ್ದಾರೆ. ರಾಜ್ಯಪಾಲರು ಅತಿದೊಡ್ಡ ಪಕ್ಷಕ್ಕೆ ಅವಕಾಶ ನೀಡಿದ್ದಾರೆ ಎಂದಿರುವ ಅವರು, ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ ಎಂದು ಜನ ಹೇಳುತ್ತಿದ್ದಾರೆ. ಆದರೆ, ದೇಶದಲ್ಲಿ ಪ್ರಜಾ ಪ್ರಭುತ್ವ ಜೀವಂತವಾಗಿಯೇ ಇಲ್ಲ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕರ್ನಾಕದಲ್ಲಿ ಯಾರ ಪರ ಜನಾದೇಶವಿದೆ? ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ. ಬಿಜೆಪಿ 104 ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ, ಕಾಂಗ್ರೆಸ್ 78 ಕ್ಷೇತ್ರಗಳಲ್ಲಿ ಗೆದ್ದಿದೆ. ಸಿಎಂ, ಸಚಿವರು ಭಾರಿ ಅಂತರದಲ್ಲಿ ಸೋತಿದ್ದಾರೆ ಎಂದಿರುವ ಅವರು, ಜೆಡಿಎಸ್​ 37 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಜೆಡಿಎಸ್​​ನ ಬಹುತೇಕರು ಠೇವಣಿ ಕಳೆದುಕೊಂಡಿದ್ದಾರೆ. ಜನ ಎಲ್ಲವನ್ನೂ ಅರಿಯುವಷ್ಟು ಬುದ್ಧಿವಂತರಿದ್ದಾರೆ ಎಂದು ಟ್ವೀಟ್ ಮೂಲಕ ಅಮಿತ್ ಶಾ ಪ್ರತಿಕ್ರಿಯಿಸಿದ್ದಾರೆ.

ಈ ನಡುವೆ ಬಿಜೆಪಿಯಿಂದ ಕುದುರೆ ವ್ಯಾಪಾರದ ಭೀತಿಯಲ್ಲಿರುವ ಕಾಂಗ್ರೆಸ್​​ನ 78 ಮತ್ತು ಜೆಡಿಎಸ್​​ನ 37 ಶಾಸಕರಿಗೆ ರಕ್ಷಣೆ ನೀಡುವುದಾಗಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಮತ್ತು ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಹೇಳಿದ್ದಾರೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *