ಶತಾಯುಷಿ ಅಜ್ಜಿಗೆ ಹುಟ್ಟು ಹಬ್ಬದ ಸಡಗರ..!

ರಾಯಚೂರು: ಸಸಿಗೆ ನೀರು ಹಾಕೋ ಮೂಲಕ ಹುಟ್ಟು ಹಬ್ಬ ಆಚರಿಸಿಕೊಂಡ ಶತಾಯುಷಿ. ಅಜ್ಜಿಯ ಹುಟ್ಟು ಹಬ್ಬಕ್ಕಾಗಿ ಸೇರಿದ್ದ ಬಂಧು-ಬಳಗ. ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು, ಗಿರಿ ಮೊಮ್ಮಕ್ಕಳ ಸಡಗರ. ಈ ದೃಶ್ಯ ಕಂಡಿದ್ದು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಯರಡೋಣಿ ಗ್ರಾಮದ ಶಿವಯೋಗಿ ಸಿದ್ಧರಾಮೇಶ್ವರ ಗುರುಮಠದಲ್ಲಿ. ಯರಡೋಣಿಯ ಶತಾಯುಷಿ ಶಾಂತಮ್ಮ ಹಿರೇಮಠ್ ಅವರ ಹುಟ್ಟು ಹಬ್ಬವನ್ನ ಆಚರಿಸಲಾಯ್ತು. 100ರ ಹರೆಯದ ಶಾಂತಮ್ಮ ಹಿರೇಮಠ್, ಸಸಿಗೆ ನೀರು ಹಾಕಿ-ಕೇಕ್ ಕತ್ತರಿಸಿ ತನ್ನ ಐದನೇ ತಲೆಮಾರಿನ ಜೊತೆ ಜನ್ಮದಿನ ಆಚರಿಸಿಕೊಂಡರು.

ಶಾಂತಮ್ಮ ಹಿರೇಮಠ್ ಅವರ ಹುಟ್ಟಿದ ವರ್ಷ ಅಂದಾಜು 1971 ಎನ್ನಲಾಗ್ತಿದೆ. 7 ಮಕ್ಕಳ ಪೈಕಿ ಮೂವರು ಗಂಡು, ನಾಲ್ವರು ಹೆಣ್ಣು. 34 ಮೊಮ್ಮಕ್ಕಳು, 34 ಮರಿಮಕ್ಕಳು, ಇಬ್ಬರು ಗಿರಿ ಮೊಮ್ಮಕ್ಕಳು ಸೇರಿದಂತೆ ಒಟ್ಟು 77 ಜನರ ಕುಟುಂಬ. ಮಕ್ಕಳು, ಮೊಮ್ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ ಶತಾಯುಷಿ ಶಾಂತಜ್ಜಿಯ ಪುತ್ರ ವೈದ್ಯರು. ಸಾಮಾನ್ಯ ಕೃಷಿ ಕುಟುಂಬದಲ್ಲಿ ಜನಿಸಿದ ಶಾಂತಮ್ಮ, ಭೂತಾಯಿಯ ಜೊತೆಗಿನ ನಂಟಿನಲ್ಲೇ ಜೀವನ ಸಾಗಿಸಿದಳು. ಅಜ್ಜಿಯ ಆರೋಗ್ಯದ ಗುಟ್ಟಿನ ಬಗ್ಗೆ ಕೇಳಿದ್ರೆ ಕಾಳುಗಳು, ತರಕಾರಿಯ ಸೇವನೆ ಜೊತೆಗೆ ಶ್ರಮದಾನವೇ ಕಾರಣ ಎನ್ನುತ್ತಾಳೆ.

ನೂರರ ಹೊಸ್ತಿಲಲ್ಲೂ ಆರೋಗ್ಯವಾಗಿರೋ ಶಾಂತಜ್ಜಿಗೆ ಮಕ್ಕಳು-ಮೊಮ್ಮಕ್ಕಳು, ಕುಟುಂಬಸ್ಥರು ಅಂದ್ರೆ ಎಲ್ಲಿಲ್ಲದ ಪ್ರೀತಿ. ಸ್ವಲ್ಪ ಗುರುತಿಸೋದು ಕಷ್ಟವಾದ್ರೂ ಖಡಕ್ ಧ್ವನಿ, ಆಲಿಸುವುದು, ನೋಡುವ ದೃಷ್ಟಿ ಕಡಿಮೆಯಾಗಿಲ್ಲ. 70ಕ್ಕೂ ಹೆಚ್ಚು ಸದಸ್ಯರು ಹಿರಿಯ ಜೀವದ ಹುಟ್ಟು ಹಬ್ಬದಲ್ಲಿ ಭಾಗಿಯಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.

ಯಮನೂರಪ್ಪ ನಗನೂರು, ಸುದ್ದಿಟಿವಿ, ರಾಯಚೂರು

0

Leave a Reply

Your email address will not be published. Required fields are marked *