ಪ್ರಧಾನಿ ಮೋದಿಗೆ ಪತ್ರ ಬರೆದ ಪುರುಷೋತ್ತಮ ಬಿಳಿಮಲೆ

ರಾಜ್ಯ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸದಲ್ಲಿದ್ದಾರೆ. ಈ ವೇಳೆ ಇಂಗ್ಲಿಷ್​​ನಲ್ಲಿ ಬರೆದಿರುವ ಡಾ. ಪುರುಷೋತ್ತಮ ಬಿಳಿಮಲೆಯವರ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದೆ. ಇದರ ಕನ್ನಡ ಅನುವಾದವೂ ಹಂಚಿಕೆಯಾಗುತ್ತಿದೆ.

ಸನ್ಮಾನ್ಯ ಪ್ರಧಾನಿಗಳಿಗೆ ಗೌರವಪೂರ್ವಕ ವಂದನೆಗಳು,

ತಾವು ಮೊದಲು ನಿಶ್ಚಯಿಸಿದ 15 ಭಾಷಣಗಳನ್ನು ಇದೀಗ ಬದಲಾಯಿಸಿ, ಒಟ್ಟು 21 ಬಾರಿ ಕರ್ನಾಟಕದಲ್ಲಿ ಭಾಷಣ ಮಾಡಿ ವಿರೋಧಿಗಳನ್ನು ಹಿಮ್ಮೆಟ್ಟಿಸಲಿದ್ದೀರಿ ಎಂದು ತಿಳಿದೆ. ಈ ಸಂಖ್ಯೆಗೂ ಪರಶುರಾಮರು 21 ಬಾರಿ ಭೂಪ್ರದಕ್ಷಿಣೆ ಮಾಡಿ ಕ್ಷತ್ರಿಯರ ನಾಶ ಮಾಡಿದ್ದಕ್ಕೂ ಇರುವ ಸಂಬಂಧ ಕೇವಲ ಕಾಕತಾಳೀಯ ಎಂದು ನಾನು ಭಾವಿಸುತ್ತೇನೆ.

ಕಳೆದ ಸುಮಾರು 60 ವರ್ಷಗಳಿಂದ ಈ ದೇಶವನ್ನು ನೋಡುತ್ತಾ ಬಂದಿರುವ ನನಗೆ, ಇದುವರೆಗೆ ಯಾವ ಪ್ರಧಾನಿಗಳೂ ಇಷ್ಟೊಂದು ಬಾರಿ ನನ್ನ ರಾಜ್ಯಕ್ಕೆ ಬಂದದ್ದು ಗೊತ್ತಿಲ್ಲ. ಹೀಗಾಗಿ ಇದೊಂದು ಚಾರಿತ್ರಿಕ ಘಟನೆ. ಇದರ ಪೂರ್ಣ ಪ್ರಯೋಜನ ಕರ್ನಾಟಕಕ್ಕೆ ಆಗಬೇಕೆಂದು ನನ್ನ ಆಸೆ. ಹಾಗಾಗಿ ಮುಂದೆ ಬರುವಾಗ ದಯವಿಟ್ಟು ಸ್ವಲ್ಪ ಗಂಭೀರವಾಗಿ ಬನ್ನಿ. ನಿಮ್ಮ ಅನುಯಾಯಿಗಳ ಜೊತೆ ಎಲ್ಲ ಕನ್ನಡಿಗರಿಗೂ ನಿಮ್ಮ ನಾಯಕತ್ವದ ಬಗ್ಗೆ ಗೌರವ ಮೂಡುವ ಹಾಗೆ ಮಾತಾಡಿ. ಚರಿತ್ರೆ ಮತ್ತು ವರ್ತಮಾನದ ಬಗೆಗೆ ತಿಳಿವಳಿಕೆ ಹೆಚ್ಚಿಸಿಕೊಳ್ಳಲು ನಾಚಿಕೆ ಪಡಬೇಕಾಗಿಲ್ಲ. ನಿಮ್ಮ ದೇಹಭಾಷೆಗೆ ಪ್ರಧಾನಿಯ ಘನತೆಯಿಲ್ಲ.

ಉತ್ತರ ಭಾರತ ಮತ್ತು ದಕ್ಷಿಣ ಭಾರತಗಳ ನಡುವಣ ವ್ಯತ್ಯಾಸ ದಿನೇದಿನೇ ಹೆಚ್ಚಾಗುತ್ತಿದೆ. ಇದಕ್ಕೆ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಕಾರಣಗಳಿವೆ. ದಕ್ಷಿಣ ಭಾರತದ ಪ್ರತ್ಯೇಕ ಒಕ್ಕೂಟ ರಚನೆಯ ಬಗ್ಗೆ ಒಲವು ಹೆಚ್ಚಾಗುತ್ತಿದೆ. ಇದನ್ನು ನಾವು ಪರಿಹರಿಸಿಕೊಂಡು ಬಲಿಷ್ಠ ಭಾರತವನ್ನು ಕಟ್ಟುವುದು ಹೇಗೆ? ಎಂಬ ಕುರಿತು ದಯವಿಟ್ಟು ತಮ್ಮ ಯೋಚನೆಗಳನ್ನು ಹಂಚಿಕೊಳ್ಳಿ.

ಮಳೆ ಕಡಿಮೆಯಾಗಿದೆ. ನೀರಿಲ್ಲ. ಕಾಡು ಬೆಳೆಸಲು ನಮ್ಮಲ್ಲಿ ಯೋಜನೆಗಳೇ ಇಲ್ಲ. ಇಲ್ಲದ ನೀರಿಗಾಗಿ ರಾಜ್ಯ ರಾಜ್ಯಗಳ ನಡುವೆ ಹೋರಾಟ ಆರಂಭವಾಗಿದೆ. ಇದನ್ನು ಶಾಶ್ವತವಾಗಿ ಪರಿಹರಿಸಿಕೊಳ್ಳಲು ನಮ್ಮಲ್ಲಿ ಇನ್ನೂ ರಾಷ್ಟ್ರೀಯ ಜಲನೀತಿ ಎಂಬುದು ರೂಪುಗೊಂಡೇ ಇಲ್ಲ. ತಮ್ಮ ಕನಸಿನಲ್ಲಿರುವ ಜಲನೀತಿಯನ್ನು ನಮ್ಮೊಡನೆ ಹಂಚಿಕೊಳ್ಳಿ.

ಸಂವಿಧಾನದಲ್ಲಿ ಸ್ಥಾನ ನೀಡಲಾದ 22 ಭಾಷೆಗಳಲ್ಲಿ 18 ಭಾಷೆಗಳು ಉತ್ತರ ಭಾರತದವು, ಕೇವಲ ನಾಲ್ಕು ದಕ್ಷಿಣ ಭಾರತದವು. ಜೊತೆಗೆ ಒಟ್ಟು 96 ಭಾಷೆಗಳು ಅಧಿಕೃತ ಮನ್ನಣೆಗೆ ಕಾದುಕುಳಿತಿವೆ. ಈ ನಡುವೆ ನಮ್ಮ ದೇಶದ 79 ಭಾಷೆಗಳು ಸಾಯಲು ಸಿದ್ಧವಾಗಿವೆ. ಈ ಭಾಷೆಗಳ ಬೆಳವಣಿಗೆಗೆ ರಾಷ್ಟ್ರೀಯ ಭಾಷಾ ನೀತಿಯೊಂದು ತಕ್ಷಣ ರೂಪುಗೊಳ್ಳಬೇಕಾಗಿದೆ. ಈ ಕುರಿತು ತಮ್ಮ ಯೋಚನೆ-ಯೋಜನೆಗಳನ್ನು ದಯವಿಟ್ಟು ಹಂಚಿಕೊಳ್ಳಿರಿ.

ಕಳೆದ ನಾಲ್ಕು ವರ್ಷದಲ್ಲಿ ತಾವು 60ಕ್ಕೂ ಹೆಚ್ಚು ದೇಶ ಸುತ್ತಿದ್ದೀರಿ. ಇದರಿಂದ ನಮ್ಮ ದೇಶಕ್ಕೆ ಆದ ಲಾಭದ ಬಗ್ಗೆ ವಿವರಿಸಿ, ನಮ್ಮ ಸಂಶಯಗಳನ್ನು ತೊಡೆದು ಹಾಕಿ. ಈ ಭೇಟಿಯ ಪರಿಣಾಮವಾಗಿ ದೇಶಕ್ಕೆ ಹರಿದು ಬಂದ ಹಣವೆಷ್ಟು? ಅದರಿಂದ ಸೃಷ್ಟಿಯಾದ ಉದ್ಯೋಗಗಳೆಷ್ಟು? ಒಂದು ವೇಳೆ ಅದು ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲವೆಂದಾದರೆ ಅದಕ್ಕೆ ಕಾರಣಗಳೇನು ಎಂಬುದನ್ನು ನಮ್ಮೊಡನೆ ಹಂಚಿಕೊಳ್ಳಿ. ಆ ಮೂಲಕ ನಮ್ಮನ್ನು ಬೆಳೆಸಿ. ಪ್ರಜಾಪ್ರಭುತ್ವದಲ್ಲಿ ಇದೆಲ್ಲಾ ಅಗತ್ಯ.

ಹೇಳುವುದು ತುಂಬಾ ಇದೆ. ಈಗ ಇಷ್ಟು ಸಾಕು. ನಿಮ್ಮ ಮುಂದಿನ ಭಾಷಣ ಕೇಳಿ ಮತ್ತೆ ಬರೆಯುತ್ತೇನೆ.

21 ಬಾರಿಯ ತಮ್ಮ ಕರ್ನಾಟಕ ಭೂ ಪ್ರದಕ್ಷಿಣೆಯಲ್ಲಿ ನಾನು ನಿಮ್ಮಿಂದ ತುಂಬಾ ನಿರೀಕ್ಷಿಸುತ್ತೇನೆ. ನಿರೀಕ್ಷೆ ಹುಸಿ ಮಾಡಬೇಡಿ.
ವಂದಿಸುವ

ಡಾ. ಪುರುಷೋತ್ತಮ ಬಿಳಿಮಲೆ
ನಿರ್ದೇಶಕ
ಕನ್ನದ ಅಧ್ಯಯನ ಕೇಂದ್ರ
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ
ನವ ದೆಹಲಿ

0

Leave a Reply

Your email address will not be published. Required fields are marked *