ಪ್ರಕೃತಿ ಮಡಿಲಿನ ಪುಟ್ಟ ಜಿಲ್ಲೆಯಲ್ಲಿ ದೊಡ್ಡ ಜಾನಪದ ಲೋಕ

ಕೊಡಗು: ಕೈಯಲ್ಲಿ ಕೋಲು, ಬಾಯಲ್ಲಿ ಸಂಗೀತ, ಇವರಿಗ್ಯಾರೂ ಸಾಟಿಯಿಲ್ಲ. ನಿಂತಲ್ಲೆ ಎದ್ದು ಕುಣಿಯುವಂತ ಸುಮಧುರ ಸಂಗೀತದ ನಾದಕ್ಕೆ ಕೋಲಾಟದ ಮೂಲಕ ಹೆಜ್ಜೆಹಾಕೋ ಗುಂಪು. ಇದು ಕಾಫಿನಾಡು ಕೊಡಗಿನ ಪುತ್ತರಿ ಸ್ಪೆಷಲ್. ಕೊಡಗಿನಲ್ಲಿ ಪುತ್ತರಿ ಹಬ್ಬ ಬಂದ್ರೆಸಾಕು ಇಲ್ಲಿನ ಗ್ರಾಮ ಗ್ರಾಮಗಳೂ ಕೂಡ ಕೊಡಗಿನ ಜಾನಪದ ಕಲೆಗಳ ನೆಲೆಗಳಾಗಿ ಮಾರ್ಪಾಡಾಗುತ್ತವೆ. ಗ್ರಾಮದ ಕೋಲ್ ಮಂದ್ ಗಳಲ್ಲಿ ಊರಿನ ಜನರೆಲ್ಲಾ ಒಗ್ಗಟ್ಟಿನಿಂದ ಪ್ರದರ್ಶೀಸೋ ಪುತ್ತರಿ ಕೋಲಾಟ ನಯನ ಮನೋಹರವಾಗಿರುತ್ತೆ. ಇಂದು ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಬಳಿಯ ಬಿದ್ದಾಟಂಡವಾಡೆಯಲ್ಲಿ ನಡೆದ ಹುತ್ತರಿ ಕೋಲಾಟ ಎಲ್ಲರ ಮನಸೋರೆಗೊಂಡಿತು. ಬಿದ್ದಾಟಂಡ ಕುಟುಂಬದ ನೇತೃತ್ವದಲ್ಲಿ ನಡೆಯೋ ಕೋಲಾಟದಲ್ಲಿ ಸುತ್ತಮುತ್ತಲ ಐದಾರು ಹಳ್ಳಿಯ ಜನರು ಭಾಗಿಯಾಗಿ ತಮ್ಮ ಕಲೆಯನ್ನು ಪ್ರದರ್ಶನ ಮಾಡುತ್ತಾರೆ. ಕೊಡವ ಸಾಂಪ್ರದಾಯಿಕ ಉಡುಪು ಕಪ್ಪು ಹಾಗು ಬಿಳಿಯ ಕುಪ್ಪಸತೊಟ್ಟು ಹಸಿರು ಹುಲ್ಲು ಹಾಸಿನಮೇಲೆ ತಾಳಕ್ಕೆ ತಕ್ಕಂತೆ ಕೋಲಾಟವಾಡುತ್ತಿದ್ದರೆ ಎಂತಹವರಿಗೂ ನಿಂತಲ್ಲೆ ಕುಣಿಯುವಂತಹ ಮನಸ್ಸಾಗುತ್ತದೆ.

ಇಡೀ ಜಿಲ್ಲೆಯಲ್ಲಿಯೇ ವಿಶಿಷ್ಟ ಮಹತ್ವ ಪಡೆದುಕೊಂಡಿರುವ ಬಿದ್ದಾಟಂಡವಾಡೆಯ ಈ ಹುತ್ತರಿಕೋಲಾಟ ನೋಡಲು ಸಹಸ್ರಾರು ಜನರು ಆಗಮಿಸುತ್ತಾರೆ. ಶತಮಾನಗಳ ಹಿಂದೆ ಬಿದ್ದಾಟಂಡ ಕುಟುಂಬ ಸದಸ್ಯರೊಬ್ಬರ ಭಕ್ತಿಗೆ ಮೆಚ್ಚಿದ ಮಕ್ಕಿ ಸಾರ್ತಾವೋ ದೇವರು ಪ್ರತ್ಯಕ್ಷವಾಗಿ ವರವನ್ನು ನೀಡುತ್ತಾರೆ ಅಲ್ಲದೆ ಇಲ್ಲಿಯೇ ನೆಲೆಸೋದಾಗಿ ಹೇಳುತ್ತಾರೆ. ಆ ದೇವರ ಸವಿನೆನಪಿಗಾಗಿ ಸುತ್ತಮುತ್ತಲ ಗ್ರಾಮಸ್ಥರೆಲ್ಲಾ ಹುತ್ತರಿ ಹಬ್ಬವನ್ನು ಕೋಲಾಟದ ಪ್ರದರ್ಶನದ ಮೂಲಕ ನಮಿಸುತ್ತಾರೆ. ಇದಕ್ಕೂ ಮುನ್ನ ಮಕ್ಕಿ ಸಾರ್ತಾವೋ ದೇವರ ಸನ್ನಿದಿಗೆ ತೆರಳಿ ದೇವರ ಸಂಕೇತವಾದ ಕಾಪಾಳ ವೇಶಧಾರಿಗಳನ್ನು ಮೆರವಣಿಗೆ ಮೂಲಕ ಕರೆತಂದು ಪೂಜಿಸುತ್ತಾರೆ. ಮೈ ಕೈಗೆಲ್ಲಾ ಕಪ್ಪು ಬಣ್ಣ ಬಳಿದುಕೊಂಡ ದೇವರ ವೇಶಧಾರಿಗಳು ಎಲ್ಲರಿಗೂ ಆಶಿರ್ವಧಿಸುತ್ತಾರೆ. ಇದಾದ ನಂತರ ಕೋಲ್ ಮಂದ್(ಮೈದಾನ)ಕ್ಕೆ ಬಂದು ಮೂರು ಸುತ್ತು ಪ್ರದಕ್ಷಿಣೆ ಮಾಡಿ ನಂತರ ಬಿದ್ದಾಟಂಡ ಕುಟುಂಬಸ್ಥರು ಕೋಲಾಟ ಪ್ರದರ್ಶನ ಮಾಡುತ್ತಾರೆ. ನಂತರ ಸುತ್ತಮುತ್ತಲ ಊರುಗಳಿಂದ ಆಗಮಿಸಿದ್ದ ಜನರೂ ಕೂಡ ಕೋಲಾಟ ಪ್ರದರ್ಶನದ ಮೂಲಕ ಗಮನಸೆಳೆಯುತ್ತಾರೆ.

ಒಟ್ಟಿನಲ್ಲಿ ಹುತ್ತರಿಮಾಸ ಬಂದರೆ ಸಾಕು ಕೊಡಗು ರಂಗೇರುತ್ತೆ. ವಿಶಿಷ್ಟ ಸಂಸ್ಕೃತಿ ಆಚಾರ ವಿಚಾರಗಳಿಂದ ಗಮನಸೆಳೆಯೋ ಪ್ರಕೃತಿ ಮಡಿಲಿನ ಪುಟ್ಟ ಜಿಲ್ಲೆಯಲ್ಲಿ ದೊಡ್ಡ ಜಾನಪದ ಲೋಕವೇ ಗರಿಬಿಚ್ಚಿಕೊಳ್ಳುತ್ತೆ. ಶತಮಾನಗಳಿಂದ ಆಚರಿಸಿಕೊಂಡು ಬಂದ ಕಲೆಗಳನ್ನು ಊರ ಜನರೆಲ್ಲಾ ಒಂದುಗೂಡಿ ಪ್ರದರ್ಶನಮಾಡುತ್ತಾ ಸಂತಸ ಪಡುತ್ತಾರೆ. ಹಾಡು ಕುಣಿತಾ ಅಂತೆಲ್ಲಾ ದೊಡ್ಡವರು ಸಣ್ಣವರೆನ್ನುವ ಬೇಧವಿಲ್ಲದೆ ಎಲ್ಲರು ಒಂದಾಗಿ ಹಾಡಿ ಕುಣಿದು ನಲಿಯುತ್ತಾರೆ.

ಮನೋಜ್ ಕುಮಾರ್, ಸುದ್ದಿಟಿವಿ, ಕೊಡಗು.

0

Leave a Reply

Your email address will not be published. Required fields are marked *