ಮುಂದುವರೆದ ಖಾಸಗಿ ವೈದ್ಯರ ಮುನಿಸು…

ರಾಜ್ಯ ಸರ್ಕಾರದ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆ ವಿರೋಧಿಸಿ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳ ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಹೀಗಾಗಿ ವಿವಿಧ ಜಿಲ್ಲೆಗಳಲ್ಲಿ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ನಾಲ್ವರು ಬಲಿಯಾಗಿದ್ದಾರೆ.ಕೆಪಿಎಂಇಎ ಕಾಯ್ದೆಯನ್ನ ವಿರೋಧಿಸಿ ಬೆಳಗಾವಿಯ ತಾರಿಹಾಳದಲ್ಲಿ ಖಾಸಗಿ ವೈದ್ಯರು ನಡೆಸುತ್ತಿರೋ ಅಹೋರಾತ್ರಿ ಧರಣಿ ಮೂರನೆ ದಿನಕ್ಕೆ ಕಾಲಿಟ್ಟಿದೆ. ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಹೆಚ್​.ಎನ್​.ರವೀಂದ್ರ ಅವರ ನೇತೃತ್ವದಲ್ಲಿ ನಿನ್ನೆ ಆಹೋರಾತ್ರಿ ಉಪವಾಸ ಸತ್ಯಾಗ್ರಹ ನಡೆಸಿದ್ರು. ಇಂದು ಕೂಡ ಪ್ರತಿಭಟನೆ ಮುಂದುವರೆದಿದ್ದು ವಿಜಯಪುರ, ಗದಗ, ಬಾಗಲಕೋಟೆ, ಮತ್ತು ಹಾವೇರಿ ಸೇರಿ ಹಲವು ಜಿಲ್ಲೆಯ ವೈದ್ಯರು ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗಲಿದ್ದಾರೆ. ವೈದ್ಯರನ್ನ ಜೈಲಿಗೆ ಹಾಕುವುದು, ದಂಡ ಹಾಕುವಂತಹ ಕೆಲ ಪ್ರಮುಖ ಅಂಶಗಳನ್ನ ಕೈ ಬಿಡಬೇಕು ಮತ್ತು ವಿಕ್ರಮಜಿತ್​ ಸೇನ್​ ವರದಿಯನ್ನ ಯಥಾವಾಥಾಗಿ ಜಾರಿಗೆ ತರಬೇಕು ಅಂತ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ ವೈದ್ಯರು.

ಇನ್ನು ಹಲವು ಬಿಜೆಪಿ ನಾಯಕರು ಸತ್ಯಾಗ್ರಹದ ಸ್ಥಳಕ್ಕೆ ಭೇಟಿ ನೀಡಿ ವೈದ್ಯರಿಗೆ ಬೆಂಬಲವನ್ನ ವ್ಯಕ್ತಪಡಿಸಿದ್ರು. ಮಾಜಿ ಸಚಿವ ಆರ್​. ಅಶೋಕ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ರು. ಈ ವೇಳೆ ಮಾತನಾಡಿದ ಆರ್.ಅಶೋಕ ವೈದ್ಯರು ಮತ್ತು ಸರ್ಕಾರದ ಹಠಮಾರಿತನದಿಂದ ರಾಜ್ಯದಲ್ಲಿ ರೋಗಿಗಳು ಪರದಾಡ್ತಿದ್ದಾರೆ. ಇದರಿಂದ ಆಗುತ್ತಿರುವ ಹಲವು ಸಾವು ನೋವುಗಳಿಗೆ ಸರ್ಕಾರವೇ ನೇರವಾಗಿ ಹೊಣೆಯಾಗುತ್ತೆ. ಹೀಗಾಗಿ ಹಠಮಾರಿತನ ಬಿಟ್ಟು ಒಂದು ಇತ್ಯರ್ಥಕ್ಕೆ ಬರಲಿ ಎಂದರು.ಇತ್ತ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳ ವೈದ್ಯರು ನಡೆಸುತ್ತಿರುವ ಪ್ರತಿಭಟನೆಯಿಂದಾಗಿ ರೋಗಿಗಳು ನರಳಾಡುತ್ತಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಈಗಾಗಲೇ ನಾಲ್ವರು ಬಲಿಯಾಗಿರುವುದು ವರದಿಯಾಗಿದೆ. ಒಟ್ಟಿನಲ್ಲಿ ಗಂಡ ಹೆಂಡಿರ ಮಧ್ಯ ಕೂಸು ಬಡವಾಯ್ತು ಅನ್ನೋ ಹಾಗೆ ಸರ್ಕಾರ ಮತ್ತು ವೈದ್ಯರ ನಡುವಿನ ಹಗ್ಗಜಗ್ಗಾಟದಲ್ಲಿ ರೋಗಿಗಳು ಹೈರಾಣಾಗಿರುವುದಂತೂ ಸತ್ಯ.

ಸುರೇಶ ಕಡ್ಲಿಮಟ್ಟಿ ಸುದ್ದಿಟಿವಿ ಬೆಳಗಾವಿ

0

Leave a Reply

Your email address will not be published. Required fields are marked *