ಮುಂಬೈನಲ್ಲಿ ನನ್ನ ವಿರುದ್ಧ ಸ್ಪರ್ಧಿಸಿ ಎಂದು ಖರ್ಗೆಗೆ ಸವಾಲೆಸೆದ ಪೀಯುಷ್ ಗೋಯಲ್

ಲೋಕಸಭೆಯ ಮುಂಗಾರು ಅಧಿವೇಶನಕ್ಕೆ ತೆರೆ
ಅನಿರ್ದಿಷ್ಟಾವಧಿಗೆ ಕಲಾಪ ಮುಂದೂಡಿದ ಸ್ಪೀಕರ್
ಆಡಳಿತ – ವಿಪಕ್ಷ ನಾಯಕರ ವಾಗ್ವಾದಕ್ಕೆ ಸಾಕ್ಷಿಯಾದ ಸದನ

ದೆಹಲಿ: ಲೋಕಸಭೆಯ ಮುಂಗಾರು ಅಧಿವೇಶನದ ಕಡೆಯ ದಿನ ಹಣಕಾಸು ಖಾತೆ ಉಸ್ತುವಾರಿ ಸಚಿವ ಪೀಯುಷ್ ಗೋಯಲ್ ಮತ್ತು ಲೋಕಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ನಡುವೆ ವಾಗ್ವಾದ ತಾರಕಕ್ಕೆ ಏರಿತು. 2019ರ ಲೋಕಸಭೆ ಚುನಾವಣೆಯಲ್ಲಿ ಮುಂಬೈನಲ್ಲಿ ತಮ್ಮ ವಿರುದ್ಧ ಸ್ಪರ್ಧಿಸುವಂತೆ ಗೋಯಲ್ ಖರ್ಗೆಯವರಿಗೆ ಸವಾಲು ಹಾಕಿದರು.

ಲೋಕಸಭೆಯ ಮುಂಗಾರು ಅಧಿವೇಶನದ ಕಡೆಯ ದಿನ ಕೂಡ ಆಡಳಿತ – ವಿಪಕ್ಷಗಳ ನಡುವೆ ಸಾಕಷ್ಟು ವಾಗ್ವಾದ ನಡೆಯಿತು. ರಫೇಲ್ ಯುದ್ಧ ವಿಮಾನ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಈ ಕುರಿತು ವಿಚಾರಣೆ ನಡೆಸಲು ಜಂಟಿ ಸಂಸದೀಯ ಸಮಿತಿ ರಚಿಸುವಂತೆ ಒತ್ತಾಯಿಸಿದರು. ಈ ವೇಳೆ ಜಿಎಸ್​ಟಿ ಮಸೂದೆ ಕುರಿತು ಚರ್ಚೆಗೆ ಬಿಜೆಪಿ ಮುಂದಾಯಿತು. ಆದರೆ, ಪಟ್ಟು ಬಿಡದ ಮಲ್ಲಿಕಾರ್ಜುನ ಖರ್ಗೆ, ರಫೇಲ್ ಕುರಿತು ಚರ್ಚಿಸುವಂತೆ ಒತ್ತಾಯಿಸಿದರು.

ಈ ಸಮಯದಲ್ಲಿ ಮಧ್ಯಪ್ರವೇಶಿಸಿದ ಕೇಂದ್ರ ಸಚಿವ ಅನಂತಕುಮಾರ್, ದೇಶಕ್ಕೆ ಲಾಭ ಮಾಡಿಕೊಡುವ ಸಲುವಾಗಿಯೇ ರಫೇಲ್ ಒಪ್ಪಂದ ಮಾಡಿಕೊಳ್ಳಲಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಗಸ್ಟಾ ವೆಸ್ಟ್​ಲ್ಯಾಂಡ್ ಹಗರಣ ಸೇರಿದಂತೆ ಅನೇಕ ಹಗರಣಗಳಿಗೆ ಸಾಕ್ಷಿಯಾಗಿದೆ ಎಂದು ಪ್ರತಿಯಾಗಿ ಆರೋಪಿಸಿದರು. ಅಲ್ಲದೇ, ರಫೇಲ್ ಆರೋಪ ಕುರಿತ ಖರ್ಗೆಯವರ ಹೇಳಿಕೆಯನ್ನು ಕಡತದಿಂದ ತೆಗೆದುಹಾಕುವಂತೆ ಉಪ ಸಭಾಪತಿ ಎಂ ತಂಬಿದುರೈಯವರಿಗೆ ಮನವಿ ಮಾಡಿದರು.

ಆದರೆ, ಮಲ್ಲಿಕಾರ್ಜುನ ಖರ್ಗೆ ರಫೇಲ್ ಕುರಿತು ಮತ್ತೆ ಪ್ರಸ್ತಾಪಿಸಿದರು. ಈ ವೇಳೆ, ಜಿಎಸ್​ಟಿ ಕುರಿತು ಮಾತನಾಡಲು ಬಿಜೆಪಿಯ ಸುಭಾಷ್ ಚಂದ್ರ ಬೆಹ್ರಿಯಾರಿಗೆ ತಂಬಿದುರೈ ಅವಕಾಶ ನೀಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಪೀಯುಷ್ ಗೋಯಲ್, ನಾನು ಈಗಾಗಲೇ ಜಿಎಸ್​ಟಿ ತಿದ್ದುಪಡಿ ಕುರಿತು ಚರ್ಚಿಸಲು 4 ಬಾರಿ ಮನವಿ ಮಾಡಿದ್ದೇನೆ. ಆದರೆ, ನೀವು ನಿರಂತರವಾಗಿ ತೊಂದರೆಮಾಡುತ್ತಿದ್ದೀರಿ. ಈ ಮೂಲಕ ನೀವು ನಿಮ್ಮ ಬಣ್ಣವನ್ನು ಬಯಲು ಮಾಡಿಕೊಳ್ಳುತ್ತಿದ್ದೀರಿ. ನಿಮ್ಮನ್ನು ನೀವೇ ಬಯಲು ಮಾಡಿಕೊಳ್ಳುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

ಈ ನಡುವೆ ಮುಂಬರುವ 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 4 ಸ್ಥಾನಗಳಿಗೆ ಕುಸಿಯುತ್ತದೆ ಎಂದು ಪೀಯುಷ್ ಗೋಯಲ್ ಭವಿಷ್ಯ ನುಡಿದರು. ಈ ಕುರಿತು ಪ್ರತಿಕ್ರಿಯಿಸಿದ ಖರ್ಗೆ, ನೀವು ಕಾಂಗ್ರೆಸ್ 2-3 ಕ್ಷೇತ್ರಗಳಿಗೆ ಕುಸಿಯುತ್ತದೆ ಎಂದಿದ್ದೀರಿ. ಎನ್​ಡಿಎ ಸರ್ಕಾರ ಜನರ ಲಾಭಕ್ಕಾಗಿ ಯಾವುದೇ ಕೆಲಸಗಳನ್ನು ಮಾಡುತ್ತಿಲ್ಲ. ಕಾಂಗ್ರೆಸ್​ ದೇಶದ ಒಳಿತಿಗಾಗಿ ಏನನ್ನೂ ಮಾಡಿಲ್ಲವೇ? ಎಂದು ಪ್ರಶ್ನಿಸಿದರು.

ಈ ವೇಳೆ ಕಾಂಗ್ರೆಸ್ ಸದಸ್ಯರು ಸಭಾಪತಿಗಳ ಅಂಗಳಕ್ಕಿಳಿದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಮಲ್ಲಿಕಾರ್ಜುನ ಖರ್ಗೆ ಏಕಾಂಗಿಯಾಗಿ ಕೇಂದ್ರದ ವಿರುದ್ಧ ವಾಗ್ದಾಳಿ ಮುಂದುವರೆಸಿದರು. ಈ ವೇಳೆ ಪೀಯುಷ್ ಗೋಯಲ್ ಅವರು ಇದುವರೆಗೆ ಯಾವುದೇ ಒಂದು ಚುನಾವಣೆಯಲ್ಲೂ ಸ್ಪರ್ಧಿಸಿ ಗೆದ್ದಿಲ್ಲ ಎಂದು ಕುಟುಕಿದರು.

ಖರ್ಗೆಯವರ ಹೇಳಿಕೆಯಿಂದ ಕೆರಳಿದ ಪೀಯುಷ್ ಗೋಯಲ್, 2019ರ ಲೋಕಸಭೆ ಚುನಾವಣೆಯಲ್ಲಿ ಮುಂಬೈನಲ್ಲಿ ತಾವು ಚುನಾವಣೆಗೆ ನಿಲ್ಲುವುದಾಗಿ ಮತ್ತು ತಮ್ಮ ವಿರುದ್ಧ ಸ್ಪರ್ಧಿಸಿ ಎಂದು ಖರ್ಗೆಯವರಿಗೆ ಸವಾಲೆಸೆದರು. ನನ್ನ ಭಾಷಣದಲ್ಲಿ ನಾನು ಯಾರ ವಿರುದ್ಧವೂ ವೈಯಕ್ತಿಕವಾಗಿ ಮಾತನಾಡಿಲ್ಲ. ಖರ್ಗೆಯವರು ಹೀಗೇಕೆ ಮಾತನಾಡಿದರು ಎಂಬುದು ನನಗೆ ಗೊತ್ತಿಲ್ಲ. ವೈಯಕ್ತಿಕ ದಾಳಿಯನ್ನು ಅವರು ಚರ್ಚೆ ವೇಳೆ ಮಾಡಿದ್ದೇಕೆ ಗೊತ್ತಿಲ್ಲ. ಮುಂಬೈಯಲ್ಲಿ ನನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸಿ ಎಂದು ಬಹಿರಗ ಸವಾಲೆಸೆದರು. ಇವರಿಗೆ ನಿಶಿಕಾಂತ್ ದುಬೆ ಮತ್ತು ಇತರ ಆಡಳಿತ ಪಕ್ಷದ ಸದಸ್ಯರು ಸಾಥ್ ನೀಡಿದರು.

ಈ ವೇಳೆ ಆಡಳಿತ ಪಕ್ಷ ವಿಪಕ್ಷಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ ಎಂದು ಟಿಎಂಸಿಯ ಸುಗತಾ ರಾಯ್ ಆರೋಪಿಸಿದರು. ಈ ನಡುವೆ ಪ್ರಧಾನಿ ಮೋದಿ ನೇತೃತ್ವದ ಲೋಕಸಭೆಯ ಕಡೆಯ ಮುಂಗಾರು ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. 2019ರ ಲೋಕಸಭೆ ಚುನಾವಣೆಯಲ್ಲಿ ಎನ್​ಡಿಎ ಮತ್ತೊಮ್ಮೆ ಅಧಿಕಾರಕ್ಕೆ ಬಂದಲ್ಲಿ ಮೋದಿಯವರ ನೇತೃತ್ವದಲ್ಲಿ ಮತ್ತೊಂದು ಅಧಿವೇಶನ ನಡೆಯಲಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *