ತಲ್ವಾರ್​ ದಂಪತಿ ದೋಷಮುಕ್ತ ಎಂದು ತೀರ್ಪು ನೀಡಿದ ನ್ಯಾಯಾಲಯ​​

ಆರುಷಿ ​ ಕೊಲೆ ಪ್ರಕರಣದಲ್ಲಿ ತಲ್ವಾರ್​ ದಂಪತಿಗೆ ರಿಲೀಫ್
ಅಲಹಾಬಾದ್: ಆರುಷಿ ತಲ್ವಾರ್​, ಹೇಮ್​ರಾಜ್​ ಜೋಡಿ ಕೊಲೆ ಪ್ರಕರಣದ ಆರೋಪಿಗಳಾಗಿದ್ದ ತಲ್ವಾರ್​ ದಂಪತಿಗೆ ಬಿಗ್​ ರಿಲೀಫ್​ ಸಿಕ್ಕಿದೆ. ಪ್ರಕರಣದ ಮೇಲ್ಮನವಿ ವಿಚಾರಣೆ ನಡೆಸಿದ ಅಲಹಾಬಾದ್​ ಹೈಕೋರ್ಟ್ ನೂಪುರ್​, ರಾಜೇಶ್​ ತಲ್ವಾರ್​ ಇಬ್ಬರನ್ನೂ ದೊಷಮುಕ್ತ ಎಂದು ತೀರ್ಪು ಪ್ರಕಟಿಸಿದೆ.​

ಆರುಷಿ ತಲ್ವಾರ್​… ಕಳೆದ 9 ವರ್ಷಗಳ ಹಿಂದೆ ದೇಶದಲ್ಲಿ ಭಾರಿ ಸಂಚಲನ ಮೂಡಿಸಿದ್ದ, ಚರ್ಚೆಗೆ ಗ್ರಾಸವಾಗಿದ್ದ ಹೆಸರು. ತಂದೆ ತಾಯಿಯೇ ಮರ್ಯಾದಾ ಹತ್ಯೆಗೈದಿದ್ದಾರೆಂಬ ಆರೋಪ ಆರುಷಿ ಪೋಷಕರ ಮೇಲೆ ಕೇಳಿಬಂದಿತ್ತು. ಇದೀಗ ತಲ್ವಾರ್​ ದಂಪತಿಗೆ ಈ ಪ್ರಕರಣದಿಂದ ಬಿಗ್​ ರಿಲೀಫ್​ ಸಿಕ್ಕಿದೆ. ರಾಜೇಶ್​ ತಲ್ವಾರ್​, ನೂಪುರ್​ ತಲ್ವಾರ್ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳಿಲ್ಲವೆಂಬ ಕಾರಣದಿಂದ ಪ್ರಕರಣದಿಂದ ಖುಲಾಸೆಯಾಗಿದ್ದಾರೆ.

2008ರಲ್ಲಿ ನಡೆದಿದ್ದ ಆರುಷಿ ಹಾಗೂ ಹೇಮ್​ರಾಜ್​ ಕೊಲೆ ಪ್ರಕರಣದ ವಿಚಾರಣೆ ನಡೆಸಿದ್ದ ಘಾಜಿಯಾಬಾದ್​ ಸಿಬಿಐ ವಿಶೇಷ ನ್ಯಾಯಾಲಯ 2013ರಂದು ತಲ್ವಾರ್​ ದಂಪತಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಜೀವಾವಧಿ ಶಿಕ್ಷೆ ತೀರ್ಪು ಪ್ರಶ್ನಿಸಿ ರಾಜೇಶ್​ ತಲ್ವಾರ್​, ನೂಪುರ್​ ತಲ್ವಾರ್​ ಅಲಹಾಬಾದ್​ ಹೈಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಿದ್ದರು.

ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಬಿ. ಕೆ. ನಾರಾಯಣ ಮತ್ತು ನ್ಯಾಯಾಮೂರ್ತಿ ಎ. ಕೆ. ಮಿಶ್ರಾ ಅವರನ್ನೊಳಗೊಂಡ ಪೀಠವು ಪ್ರಕರಣದ ತೀರ್ಪನ್ನು ಇಂದಿಗೆ  ಕಾಯ್ದಿರಿಸಿತ್ತು. ಇಂದು ಮೇಲ್ಮನವಿ ವಿಚಾರಣೆ ನಡೆಸಿದ ಅಲಹಾಬಾದ್​ ಹೈಕೋರ್ಟ್​​ ಸಿಬಿಐ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿ,ತಲ್ವಾರ್​ ದಂಪತಿಯನ್ನು  ಪ್ರಕರಣದಿಂದ ಖುಲಾಸೆಗೊಳಿಸಿದೆ

ಆರುಷಿ, ಮನೆಗೆಲಸದವನಾದ ಹೇಮ್​ರಾಜ್​ ಕೊಲೆಗೆ ತಲ್ವಾರ್​ ದಂಪತಿ ಹೊಣೆಗಾರರಲ್ಲ. ಸಿಬಿಐ ತನಿಖೆಯಲ್ಲಿಯೇ ಕೆಲ ಲೋಪದೋಷಗಳಿವೆ. ಅವರು ಕೊಲೆ ಮಾಡಿರುವುದಕ್ಕೆ ಸಾಕ್ಷ್ಯಾಧಾರಗಳಿಲ್ಲ. ಕೇವಲ ಶಂಕೆ ಆಧಾರದಲ್ಲಿ ರಾಜೇಶ್​, ನೂಪುರ್​ ಇಬ್ಬರನ್ನೂ ಅಪರಾಧಿಗಳು ಎಂದು ಹೇಳಲು ಸಾಧ್ಯವಿಲ್ಲ ಅಂತ ಅಲಹಾಬಾದ್​ ಕೋರ್ಟ್​​ ಹೇಳಿದೆ.

ಕೋರ್ಟ್​ ತೀರ್ಪಿಗೆ ಪ್ರತಿಕ್ರಿಯಿಸಿರುವ ಸಿಬಿಐ, ನ್ಯಾಯಾಲಯ ಸಂಪೂರ್ಣ ತೀರ್ಪಿನ ಪ್ರತಿಗೆ ಕಾಯುತ್ತಿದ್ದೇವೆ. ನಮಗೆ ಮೇಲ್ಮನವಿ ಸಲ್ಲಿಸಲು 90 ದಿನಗಳ ಕಾಲಾವಕಾಶವಿದ್ದು, ತೀರ್ಪಿನ ಪ್ರತಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಅಂತ ಸಿಬಿಐ ಹೇಳಿದೆ.

2008ರ ಮೇ 15 ರಂದು ನೋಯ್ಡಾದ ಜಲವಾಯು ವಿಹಾರ ನಿವಾಸದಲ್ಲಿ ಆರುಷಿ ಮೃತದೇಹ ಪತ್ತೆಯಾಗಿತ್ತು. ಮೊದಲು ಮನೆಗೆಲಸದವನ ಮೇಲೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ಆದ್ರೆ 2 ದಿನಗಳ ಬಳಿಕ ಹೇಮ್​ರಾಜ್​ ಶವ ಮನೆಯ ಮಹಡಿಯ ಮೇಲೆ ದೊರೆತಿತ್ತು. ಆರುಷಿ ಪೋಷಕರೇ ತಮ್ಮ ಮಗಳನ್ನ ಮರ್ಯಾದಾ ಹತ್ಯೆಗೈದಿರಬಹುದು ಎಂಬ ಅನುಮಾನ ಬಲವಾಗಿತ್ತು. ಇದೇ ಅಂಶವನ್ನು  ಗಮನದಲ್ಲಿಟ್ಟುಕೊಂಡ ಸಿಬಿಐ ತಲ್ವಾರ್​ ದಂಪತಿಯನ್ನು ಬಂಧಿಸಿತ್ತು.

ಜ್ಯೋತಿ ದಫೇದಾರ್,ನ್ಯಾಷನಲ್​ ಡೆಸ್ಕ್​ ಸುದ್ದಿ ಟಿವಿ

0

Leave a Reply

Your email address will not be published. Required fields are marked *