ಕನ್ನಡದ ಕರ್ಣ ಇನ್ನಿಲ್ಲ

ಬೆಂಗಳೂರು: ಹಿರಿಯ ನಟ, ಮಾಜಿ ಸಚಿವ ಅಂಬರೀಶ್ ಇಂದು ರಾತ್ರಿ 10.20ಕ್ಕೆ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಕಾಲವಶರಾಗಿದ್ದಾರೆ. ಉಸಿರಾಟ ಹಾಗೂ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ನಿನ್ನೆ ಸಂಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಟ ಅಂಬರೀಶ್ ಅವರಿಗೆ 66 ವರ್ಷ ವಯಸ್ಸಾಗಿತ್ತು. ಪತ್ನಿ ಸುಮಲತಾ ಮತ್ತು ಪುತ್ರ ಅಭಿಷೇಕ್ ಸೇರಿದಂತೆ ಅನೇಕ ಅಭಿಮಾನಿಗಳನ್ನು ಅವರು ಅಗಲಿದ್ದಾರೆ.

ಕನ್ನಡ ಚಿತ್ರರಂಗ ಹಾಗೂ ದಕ್ಷಿಣ ಭಾರತದ ಮೇರು ನಟ ರೆಬೆಲ್​ ಸ್ಟಾರ್​ ಅಂಬರೀಶ್​​ ಮೂಲತಃ ಮಂಡ್ಯ ಜಿಲ್ಲೆ ದೊಡ್ಡರಸನಕೆರೆ ಗ್ರಾಮದವರು. ಹುಚ್ಚೇಗೌಡ ಹಾಗೂ ಪದ್ಮಮ್ಮ ದಂಪತಿಯವರ ಪುತ್ರರಾಗಿ ಅಂಬರೀಶ್​ 1952ರ ಮೇ 29ರಂದು ಜನಿಸಿದ್ದರು. ಅಂಬರೀಶ್​ ಅವರ ಮೂಲ ಹೆಸರು ಮಳವಳ್ಳಿ ಹುಚ್ಚೇಗೌಡ ಅಮರನಾಥ್​​. ಖ್ಯಾತ ಪಿಟೀಲು ವಿದ್ವಾನ್​​ ಟಿ. ಚೌಡಯ್ಯನವರ ಮೊಮ್ಮಗ. 1962ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್​ ನಿರ್ದೇಶನದ ‘ನಾಗರಹಾವು’ಸಿನಿಮಾದ ಜಲೀಲ ಪಾತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಅವರು ಪ್ರವೇಶಿಸಿದ್ದರು. ಅಂಬರೀಶ್ ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಮಂಡ್ಯದಲ್ಲಿ ಬಾಲ್ಯ ವಿದ್ಯಾಬ್ಯಾಸ ಮುಗಿಸಿ, ಪದವಿ ಶಿಕ್ಷಣವನ್ನು ಮೈಸೂರಿನಲ್ಲಿ ಪಡೆದರು. 1991ರಲ್ಲಿ ಬಹುಭಾಷ ನಟಿ ಸುಮಲತಾ ಅವರನ್ನು ವರಿಸಿದ್ದರು. ಮೊಟ್ಟ ಮೊದಲ ಚಿತ್ರವಾದ “ನಾಗರಾಹಾವು” ಚಿತ್ರದಲ್ಲಿ ಖಳ ನಾಯಕನ ಪಾತ್ರದಿಂದ ಪ್ರಸಿದ್ಧರಾದರು.

ಪಡುವಾರಳ್ಳಿ ಪಾಂಡವರು, ಮಸಣದ ಹೂವು, ಶುಭಮಂಗಳ, ರಂಗನಾಯಕಿ ಹೀಗೆ ಪ್ರಸಿದ್ಧ ಕನ್ನಡ ಚಿತ್ರಗಳಲ್ಲಿ ನಾಯಕನ ಪಾತ್ರದಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಯಶಸ್ವಿಯಾದರು. ಅವರಿಗೆ ಮಂಡ್ಯದ ಗಂಡು, ಕಲಿಯುಗದ ಕರ್ಣ, ಹೀಗೆ ಹಲವು ಬಿರುದುಗಳನ್ನು ನೀಡಲಾಗಿದೆ.

ಅಂಬರೀಶ್ ಅವರಿಗೆ 2013ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಗೌರವ ಡಾಕ್ಟರೇಟ್  ನೀಡಿ ಗೌರವಿಸಿದೆ.

ರಾಜಕೀಯ ಕ್ಷೇತ್ರದಲ್ಲಿ ಅಂಬರೀಶ್ ಹೆಜ್ಜೆಗಳು

ಕನ್ನಡ ಚಿತ್ರರಂಗದಲ್ಲಿ ಹಲವು ಪಾತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ ಅಂಬರೀಶ್ ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ರಂಗವನ್ನು ಪ್ರವೇಶಿಸಿದರು. ಸಂಸದ, ಶಾಸಕ, ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

* 1998-99: 12ನೇ ಲೋಕಸಭಾ ಸದಸ್ಯ

* 1999-04: 13ನೇ ಲೋಕಸಭಾ ಸದಸ್ಯ

* 2004-09: 14ನೇ ಲೋಕಸಭಾ ಸದಸ್ಯ

* 2006-08: ಕರ್ನಾಟಕ ರಾಜ್ಯ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ

* 2008ರಲ್ಲಿ ಕಾವೇರಿ ನೀರಿನ ವಿವಾದದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ

* 2012: ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ

* 2013ರ ಚುನಾವಣೆಯಲ್ಲಿ ಗೆಲುವು. ಕರ್ನಾಟಕ ರಾಜ್ಯ ವಸತಿ ಸಚಿವ

ಪ್ರಶಸ್ತಿಗಳು:

* ಕರ್ನಾಟಕ ರಾಜ್ಯ ಪ್ರಶಸ್ತಿ – ಅತ್ಯುತ್ತಮ ನಟ – 1982

* ಕರ್ನಾಟಕ ರಾಜ್ಯ ಪ್ರಶಸ್ತಿ – ಅತ್ಯುತ್ತಮ ಸಹ ನಟ – ಮಸಣದ ಹೂವು (1985-86)

* ಫಿಲ್ಮ್ ಫೇರ್ ಪ್ರಶಸ್ತಿ – ಅತ್ಯುತ್ತಮ ನಟ – ಒಲವಿನ ಉಡುಗೊರೆ

* ಎನ್.ಟಿ.ಆರ್ ನ್ಯಾಷನಲ್ ಪ್ರಶಸ್ತಿ – 2005

* ಜೀವಮಾನ ಫಿಲ್ಮ್ ಫೇರ್ ಪ್ರಶಸ್ತಿ – 2009

* ನಂದಿ ಪ್ರಶಸ್ತಿ( ಆಂದ್ರಸರ್ಕಾರ) – 2009

* ಟಿವಿ9 ಸ್ಯಾಂಡಲ್ ವುಡ್ ಸ್ಟಾರ್ ಪ್ರಶಸ್ತಿ – 2012

* ವಿಷ್ಣುವರ್ದನ್ ಪ್ರಶಸ್ತಿ (ಕರ್ನಾಟಕ ಸರ್ಕಾರ) – 2011

* ಗೌರವ ಡಾಕ್ಟರೇಟ್ ಕರ್ನಾಟಕ ವಿವಿ) – 2013

0

Leave a Reply

Your email address will not be published. Required fields are marked *