ಹಾಡು ಮುಗಿಸಿದ ಸುಬ್ಬುಲಕ್ಷ್ಮಿ ಪುತ್ರಿ…

ದಕ್ಷಿಣ ಭಾರತದ ಸಂಗೀತ ಲೋಕದಲ್ಲಿ ಅವರು ಮತ್ತೊಬ್ಬ ಅಮ್ಮ. ಆದರೆ ಅವರ ಅಮ್ಮ ಇಡೀ ಜಗತ್ತೇ ಆರಾಧಿಸುವ ಸಂಗೀತ ಪ್ರಪಂಚದ ಮಹಾತಾಯಿ. ಅವರಿಬ್ಬರು ಜೊತೆಯಲ್ಲಿ ನಡೆಸಿಕೊಟ್ಟ ಹತ್ತಾರು ಕಚೇರಿಗಳು ಇತಿಹಾಸ ಸೃಷ್ಟಿಸಿದ್ದವು. ಈಗ ಆ ಮಹಾನ್ ಸಂಗೀತ ಲೋಕದ ದಿಗ್ಗಜೆ ಮತ್ತೆ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಇದು ಆ ಚೇತನಕ್ಕೆ ಅರ್ಪಿಸುತ್ತಿರುವ ಭಾವಪೂರ್ಣ ಅಕ್ಷರಾಂಜಲಿ.

ಎಂಎಸ್ ಸುಬ್ಬುಲಕ್ಷ್ಮಿ ಯಾರಿಗೆ ಗೊತ್ತಿಲ್ಲ? ನಮ್ಮ ಕರ್ನಾಟಕ ಶಾಸ್ತ್ರೀಯ ಸುಗಮ ಸಂಗೀತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದ ಸುಗಮ ಸಂಗೀತ ಕ್ಷೇತ್ರದ ಮಹಾತಾಯಿ ಅವರು. ಅವರ ಜೊತೆಯಲ್ಲಿ ಸದಾ ಕಾಣಿಸಿಕೊಳ್ಳುತ್ತಿದ್ದ ಮಹಿಳೆ ಬೇರಾರು ಅಲ್ಲ, ಅದು ಅವರ ಪುತ್ರಿ ರಾಧಾ ವಿಶ್ವನಾಥನ್. ನಿಮಗೆ ಗೊತ್ತಿರದ ರಾಧಾರ ಸರಳ ಸಂಕ್ಷಿಪ್ತ ಜೀವನ ಪರಿಚಯ ಇಲ್ಲಿದೆ.

ಕರ್ನಾಟಕ ಶಾಸ್ತ್ರೀಯ ಸುಗಮ ಸಂಗೀತ ಕ್ಷೇತ್ರದ ಮಹಾನ್ ಪ್ರತಿಭೆಯೊಂದು ಇಹಲೋಕದ ವ್ಯವಹಾರ ಮುಗಿಸಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಐದು ದಶಕಗಳ ಕಾಲ ಹೆಸರು ಮಾಡಿದ್ದ ಪ್ರಖ್ಯಾತ ಗಾಯಕಿ ಡಾ. ರಾಧಾ ವಿಶ್ವನಾಥನ್‌ ಇನ್ನಿಲ್ಲ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ರಾಧಾ, ಶಾಶ್ವತವಾಗಿ ಹಾಡು ನಿಲ್ಲಿದ್ದಾರೆ. ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ 83 ವರ್ಷದ ರಾಧಾ ವಿಶ್ವನಾಥನ್ ಅವರನ್ನು ಬೆಂಗಳೂರಿನ ಫೋರ್ಟಿಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು.

‘ಮಂಗಳವಾರ ರಾತ್ರಿ ಮೊಮ್ಮಗಳು ಐಶ್ವರ್ಯಾ ಬಳಿ ಎಂ. ಎಸ್‌. ಸುಬ್ಬುಲಕ್ಷ್ಮಿ ಅವರ ಪ್ರಖ್ಯಾತ ಭಜನೆಗಳಲ್ಲಿ ಒಂದಾದ ‘ಶ್ರೀಮನ್‌ ನಾರಾಯಣ…’ ಹಾಡುವಂತೆ ಕೇಳಿದ್ದಳು. ಚರಣದಲ್ಲಿ ಬರುವ ‘ಶ್ರೀಪಾದಮೆ ಶರಣು…’ ಎಂಬ ಸಾಲನ್ನು ಹಾಡುವಾಗಲೇ ಕೊನೆಯುಸಿರೆಳೆದರು’ ಎಂದು ರಾಧಾ ಅವರ ಮಗ ವಿ. ಶ್ರೀನಿವಾಸನ್‌ ಭಾವುಕರಾಗಿ ಹೇಳಿದ್ದಾರೆ. ರಾಧಾ ಸುಮಾರು 700 ಕೀರ್ತನೆಗಳನ್ನು ಹೇಳಿಕೊಟ್ಟಿದ್ದರು. ಎಂ. ಎಸ್. ಸುಬ್ಬಲಕ್ಷ್ಮೀ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವಂತೆ ಸದಾ ಹೇಳುತ್ತಿದ್ದರು ಎಂದು ಐಶ್ವರ್ಯಾ ನೆನಪಿಸಿಕೊಂಡಿದ್ದಾರೆ. ಅವರು ಕೆಲ ವರ್ಷಗಳ ಹಿಂದೆ ಚೆನ್ನೈ ತೊರೆದು ಬೆಂಗಳೂರಿಗೆ ಬಂದು ನೆಲೆಸಿದ್ದರು.

ರಾಧಾ ವಿಶ್ವನಾಥನ್ ಅಂದರೆ ನಿಮಗೆ ತಕ್ಷಣ ನೆನಪಾಗದೇ ಇರಬಹುದು; ಆದರೆ ಭಾರತರತ್ನ ಎಂ ಎಸ್ ಸುಬ್ಬುಲಕ್ಷ್ಮಿಯವರ ಕಚೇರಿಯಲ್ಲಿ ವೀಣೆ ನುಡಿಸುವ ಮಹಿಳೆಯ ಚಿತ್ರಣ ನಿಮ್ಮ ಕಣ್ಣ ಮುಂದೆ ಬಂದರೆ, ಅದೇ ರಾಧಾ ವಿಶ್ವನಾಥನ್. ಇವರು ಬೇರೆ ಯಾರೂ ಅಲ್ಲ ದೇಶ ಕಂಡ ಮಹಾನ್ ಸಂಗೀತಗಾರ್ತಿ, ಶಾಸ್ತ್ರೀಯ ಸಂಗೀತ ಲೋಕದ ಧ್ರುವತಾರೆ, ಸಂಗೀತಕ್ಕಾಗಿಯೇ ತಮ್ಮ ಜೀವನ 6 ದಶಕಗಳನ್ನು ಮೀಸಲಿಟ್ಟ ಮಹಾತಾಯಿ ಎಂ ಎಸ್ ಸುಬ್ಬುಲಕ್ಷ್ಮಿಯವರ ಮಗಳು.

ಗಾನವಿದುಷಿ, ಭಾರತರತ್ನ ಎಂ. ಎಸ್‌. ಸುಬ್ಬುಲಕ್ಷ್ಮಿ ಅವರ ಧ್ವನಿಗೆ ದನಿಯಾದವರು ಸಂಗೀತರತ್ನ ಡಾ. ರಾಧಾ ವಿಶ್ವನಾಥನ್‌. ಈ ಇಬ್ಬರೂ ಗಾಯಕಿಯರು ಎರಡು ದೇಹ, ಒಂದೇ ಸ್ವರ ಇದ್ದಂತೆ ಬದುಕಿದ್ದರು. ಸುಬ್ಬುಲಕ್ಷ್ಮಿಯೇ ರಾಧಾ ಎನ್ನುವಷ್ಟರ ಮಟ್ಟಿಗೆ ಅನ್ಯೋನ್ಯತೆ ಈ ತಾಯಿ ಮಗಳಲ್ಲಿತ್ತು. ರಾಧಾ ವಿಶ್ವನಾಥನ್ ಅವರು ಭಾರತ ಕಂಡ ಲೆಜೆಂಡ್ ಗಾಯಕಿ, ತಾಯಿ ಎಂಎಸ್ ಸುಬ್ಬುಲಕ್ಷ್ಮಿ ಅವರೊಂದಿಗೆ ದಶಕಗಳ ಕಾಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

‘ಸುಬ್ಬುಲಕ್ಷ್ಮೀ ಅಮ್ಮನೇ ನನ್ನ ಜಗತ್ತು. ಅವರು ನನಗೆ ಸಂಗೀತವನ್ನಷ್ಟೇ ಕಲಿಸಲಿಲ್ಲ, ಜೀವನದ ದಾರಿಗೆ ಬೆಳಕಾಗಿ ನಿಂತರು’ ಎಂದು ರಾಧಾ ಅನೇಕ ಕಾರ್ಯಕ್ರಮಗಳಲ್ಲಿ ಹೇಳಿಕೊಂಡಿದ್ದರು. ಈ ತಾಯಿ ಮಗಳು ಶಾಸ್ತ್ರೀಯ ಸಂಗೀತ ಪ್ರಪಂಚದ ಅಪರೂಪದ ಹಾಗೂ ಅಪೂರ್ವ ಜೋಡಿ.

ಅವರಿಗೆ ಎರಡು ವರ್ಷವಾಗಿದ್ದಾಗ ತಂದೆ ಸದಾಶಿವಂ ಅವರು ಸುಬ್ಬುಲಕ್ಷ್ಮೀ ಅವರನ್ನು ಮದುವೆಯಾಗಿದ್ದರು. ಎಂ. ಎಸ್‌. ಸುಬ್ಬುಲಕ್ಷ್ಮೀ ಅವರು ರಾಧಾ ವಿಶ್ವನಾಥನ್‌ ಅವರ ಮಲತಾಯಿ ಆಗಿದ್ದರೂ ಎಂದಿಗೂ ಅವರನ್ನು ಬೇರೆಯಾಗಿ ಕಾಣಲಿಲ್ಲ. ತಮ್ಮ ಮಕ್ಕಳಂತೆ ಬೆಳೆಸಿದರು, ತಮ್ಮ ಜತೆಜತೆಗೇ ನಡೆಸಿದರು. ಸಂಗೀತ ಕಛೇರಿಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ತರಬೇತಿ ಸಹ ನೀಡುತ್ತಿದ್ದರು. ಹಾಗಾಗಿ ಅವರ ಧ್ವನಿಯಲ್ಲೇ ಇವರು ಧ್ವನಿಯಾದರು. ಎಂದಿಗೂ ಪ್ರತ್ಯೇಕ ಸಂಗೀತ ಕಛೇರಿ ನೀಡಿರಲಿಲ್ಲ. ಇಬ್ಬರೂ ಜತೆಯಲ್ಲೇ ಕಛೇರಿ ನಡೆಸಿಕೊಡುತ್ತಿದ್ದರು. ಎಂಎಸ್‌ಎಸ್‌ ಅವರೊಂದಿಗೆ ಹಾಡುವುದರಲ್ಲೇ ರಾಧಾರಿಗೆ ಹೆಚ್ಚು ತೃಪ್ತಿ ಸಿಗುತ್ತಿತ್ತು.

ರಾಧಾ ಜನಿಸಿದ್ದು 1934ರಲ್ಲಿ ತಮಿಳುನಾಡಿನ ಗೋಪಿಚೆಟ್ಟಿಪಾಳ್ಯದಲ್ಲಿ. ಥೈಯಾಗರಾಜನ್ ಸದಾಶಿವಂ ಹಾಗೂ ಪಾರ್ವತಿ ದಂಪತಿಗಳ ಹಿರಿಯ ಮಗಳಾದ ರಾಧಾ ವಿಶ್ವನಾಥನ್​​ ಅವರಿಗೆ ಎಂ. ಎಸ್ ಸುಬ್ಬುಲಕ್ಷ್ಮಿ ಮಲತಾಯಿ. ತಮ್ಮ ಮೊದಲ ಪತ್ನಿ ಪಾರ್ವತಿಯ ನಿಧನದ ನಂತರ ಸದಾಶಿವಂ ಅವರು, ಸುಬ್ಬುಲಕ್ಷ್ಮಿಯವರನ್ನು ಮದುವೆಯಾಗಿದ್ದರು. ರಾಧಾ ಜನಸಿದ ಐದು ವರ್ಷಗಳ ನಂತರ ಸುಬ್ಬುಲಕ್ಷ್ಮಿ ಹಾಗೂ ಸದಾಶಿವಂ ಮದುವೆಯಾಗಿದ್ದರು; ಹೀಗಾಗಿ ಆ ಪುಟ್ಟ ಮಗಳು ಸುಬ್ಬು ಲಕ್ಷ್ಮಿ ಪಾಲಿನ ಪುಟ್ಟ ಗೆಳತಿಯಂತೆ ಆಪ್ತವಾಗಿದ್ದಳು; ಬಳಿಕ ಶಾಶ್ವತ ಸಂಗಾತಿ ಶಿಷ್ಯೆಯೂ ಆದಳು.

ರಾಧಾ ವಿಶ್ವನಾಥನ್ ತಮ್ಮ ಐದನೆಯ ವಯಸ್ಸಿನಲ್ಲಿಯೇ ತಾಯಿಯೊಂದಿಗೆ ವೇದಿಕೆ ಏರಿದ್ದರು. ಅವರು ತಮ್ಮ ಪ್ರಾಥಮಿಕ ಸಂಗೀತ ಕಲಿಕೆಗೆ ಗುರುವನ್ನಾಗಿ ಆರಿಸಿಕೊಂಡಿದ್ದು ಟಿ. ಆರ್. ಬಾಲಸುಬ್ರಹ್ಮಣ್ಯಂ, ರಾಮ್​ನಾದ್ ಕೃಷ್ಣನ್ ಹಾಗೂ ಮಾಯಾವರಂ ಕೃಷ್ಣ ಅಯ್ಯರ್ ಅವರನ್ನು. ಆದರೆ ಶಾಸ್ತ್ರೀಯ ಸಂಗೀತ ಸಂಪೂರ್ಣ ಕಲಿಕೆಯಾಗಿದ್ದು ತಾಯಿ ಸುಬ್ಬುಲಕ್ಷ್ಮಿ ಅವರಿಂದ.

ರಾಧಾ ವಿಶ್ವನಾಥನ್ ಕೇವಲ ಕರ್ನಾಟಕ ಶಾಸ್ತ್ರೀಯ ಸಂಗೀತ ಮಾತ್ರ ಕಲಿತಿರಲಿಲ್ಲ, ಬಾಲ್ಯ ಹಾಗೂ ತಾರುಣ್ಯದಲ್ಲಿ ಅವರು ಭರತನಾಟ್ಯ ನರ್ತಕಿಯೂ ಆಗಿದ್ದರು. ನೃತ್ಯ ಕಲಿಕೆಯ ಆಸಕ್ತಿ ಇದ್ದ ಅವರಿಗೆ ಗುರುವಾಗಿ ಸಿಕ್ಕಿದ್ದು, ವಝಾವೂರು ರಾಮಯ್ಯ ಪಿಳ್ಳೈ. ಅದೇ ಗುರುವಿನ ಬಳಿ ತಮಿಳಿನ ಖ್ಯಾತ ಸಾಹಿತಿಯಾಗಿದ್ದ ಕಲ್ಕಿ ಕೃಷ್ಣಮೂರ್ತಿಯವರ ಪುತ್ರಿ ಆನಂದಿ ರಾಮಚಂದ್ರನ್ ಸಹ ರಾಧಾ ವಿಶ್ವನಾಥನ್ ಜೊತೆ ಭರತನಾಟ್ಯ ಅಭ್ಯಾಸ ಮಾಡಿದ್ದರು. ರಾಧಾ, ಭರತನಾಟ್ಯದ ರಂಗ ಪ್ರವೇಶ ಮಾಡಿದ್ದು 1945ರಲ್ಲಿ. ರಾಧಾ ಹಾಗೂ ಆನಂದಿಯವರು ಎಂ. ಎಸ್. ಸುಬ್ಬುಲಕ್ಷ್ಮಿಯವರು ಹಾಡುತ್ತಿದ್ದ ಪದಂಗಳಿಗೆ ನರ್ತಿಸುತ್ತಿದ್ದರೆ ಆ ಇಡೀ ಕಚೇರಿ ಕಿಕ್ಕಿರಿದು ತುಂಬುತ್ತಿತ್ತು.

ಮದ್ರಾಸ್​ನ ಸಂಗೀತ ವಿದ್ಯಾಲಯದಲ್ಲಿ ಹಲವು ಕರ್ನಾಟಕ ಸಂಗೀತದ ಕಚೇರಿಗಳಲ್ಲಿ ರಾಧಾ ನರ್ತಿಸಿದ್ದರು. ಆದರೆ ರಾಧಾ ಅವರ ಜೀವನದ ಮಹತ್ವದ ಘಟನೆ ಎಂದರೆ ಬಿರ್ಲಾ ಮಂದಿರದಲ್ಲಿ, ಮಹಾತ್ಮ ಗಾಂಧಿ ಎದುರು ತಾಯಿ ಸುಬ್ಬು ಲಕ್ಷ್ಮಿ ಹಾಡುತ್ತಿದ್ದ ಮೀರಾ ಭಜನ್​ನ ಘನಶ್ಯಾಮ ಆಯರಿಗೆ ನರ್ತಿಸಿದ್ದು. ಆದರೆ ತೀರಾ ಆಶ್ಚರ್ಯವೆನಿಸುವಂತೆ ಇಷ್ಟ ಪಟ್ಟು ಕಲಿತ ನೃತ್ಯವನ್ನು ತಮ್ಮ 21ನೇ ವಯಸ್ಸಿನಲ್ಲಿ ತ್ಯಜಿಸುವ ರಾಧಾ, ತಾಯಿಯ ಜೊತೆ ಸಂಗೀತ ಕಲಿಕೆಯತ್ತ ಗಮನ ಹರಿಸುತ್ತಾರೆ.

ಮುಸಿರಿ ಸುಭ್ರಹ್ಮಣ್ಯನ್ ಅಯ್ಯರ್, ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್, ಕೆ. ವಿ. ನಾರಾಯಣ ಸ್ವಾಮಿಯವರ ಬಳಿ ರಾಧಾ ವಿಶ್ವನಾಥನ್ ಹಾಗೂ ಎಂ.ಎಸ್ ಸುಬ್ಬುಲಕ್ಷ್ಮಿ ಜೊತೆಯಲ್ಲಿಯೇ ಕೃತಿಗಳನ್ನು ಕಲಿತರು. ಟಿ. ಬೃಂದಾ ಅವರ ಬಳಿ ಪದಗಳನ್ನು ಕಲಿಯುತ್ತಾರೆ. ಈ ಜೋಡಿಗೆ ಸಂಗೀತ ಕಲಿಕೆಯ ವಿಚಾರದಲ್ಲಿ ಅದೆಂತಹ ಶ್ರದ್ಧೆ ಇತ್ತೆಂದರೆ, ಬೆನಾರಸ್​ನ ಸಿದ್ದೇಶ್ವರಿ ದೇವಿ ಹಾಗೂ ದಿಲೀಪ್ ಕುಮಾರ್ ರಾಯ್ ಬಳಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿದರು. ತಾಯಿ ಮಗಳು ಇಬ್ಬರಿಗೂ ಇದ್ದ ಏಕೈಕ ಸಾಮ್ಯತೆ ಹಾಗೂ ವಿಶೇಷತೆ ಅಂದರೆ ಸಂಗೀತ ಕಲಿಕೆಯ ಬಗ್ಗೆ ತೋರುತ್ತಿದ್ದ ಅದಮ್ಯ ಉತ್ಸಾಹ ಹಾಗೂ ತಪಸ್ಸು.

ರಾಧಾ ವಿಶ್ವನಾಥನ್ ಅವರ ತಂದೆ ಟಿ ಸದಾಶಿವಂ ಅವರ ಚಿತ್ರ ನಿರ್ಮಾಣದ ಸಂಸ್ಥೆ ಚಂದ್ರಪ್ರಭಾ ಸಿನಿಟೋನ್ಸ್​​ ಆಗ ಸಾಕಷ್ಟು ಪ್ರಸಿದ್ಧಿ ಪಡೆದಿತ್ತು. ಅದೇ ಬ್ಯಾನರ್​​ನಿಂದ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ ರಾಧಾ ಶಕುಂತಲಾ ಭಾರತಾ ಪಾತ್ರದಲ್ಲಿ ಮೀರಾ ಚಿತ್ರದಲ್ಲಿ ಬಾಲ ಮೀರಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆಗ ಅವರ ವಯಸ್ಸು ಕೇವಲ 6 ವರ್ಷ. ಹಿಂದಿ ಹಾಗೂ ತಮಿಳು ಭಾಷೆಯಲ್ಲಿ 1947ರಲ್ಲಿ ಬಿಡುಗಡೆಯಾದ ಮೀರಾ ಚಿತ್ರದಲ್ಲಿ ಮೀರಾ ಪಾತ್ರದ ರಾಧಾ ಹಾಗೂ ಕೃಷ್ಣನ ಪಾತ್ರದ ಕುಮಾರಿ ಕಮಲಾ ನೃತ್ಯ ಸಾಕಷ್ಟು ಕಾಲ ಪ್ರೇಕ್ಷಕರ ಮನಸಲ್ಲಿ ಅಚ್ಚೊಳಿಯದೆ ಉಳಿದಿತ್ತು. ಆ ಚಿತ್ರದ ಪ್ರೀಮಿಯರ್ ಶೋಗೆ ಚಾಲನೆ ನೀಡಿದ್ದು ಅಂದಿನ ಜನಪ್ರಿಯ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರೂ. ಲಾರ್ಡ್ ಹಾಗೂ ಲೇಡಿ ಮೌಂಟ್ ಬ್ಯಾಟನ್, ಬಾಬೂ ರಾಜೇಂದ್ರ ಪ್ರಸಾದ್, ವಿಜಯಲಕ್ಷ್ಮಿ ಪಂಡಿತ್ ಹಾಗೂ ಇಂದಿರಾಗಾಂಧಿ ಆ ಪ್ರೀಮಿಯರ್ ಶೋನಲ್ಲಿ ಉಪಸ್ಥಿತರಿದ್ದರು.

ರಾಧಾ ಹಾಗೂ ಎಂಎಸ್ ಸುಬ್ಬುಲಕ್ಷ್ಮಿ ಭಾರತದ ನಾನಾ ಭಾಗಗಳಲ್ಲಿ ಒಟ್ಟಿಗೆ ಸಂಗೀತ ಪ್ರದರ್ಶನ ನೀಡಿದ್ದರು. ಅಮೆರಿಕಾ, ಯುರೋಪ್, ಜಪಾನ್, ಸಿಂಗಾಪುರ, ಮಲೇಶಿಯಾ, ಥೈಲ್ಯಾಂಡ್, ಫಿಲಿಫ್ಪೈನ್ಸ್ ಸೇರಿದಂತೆ ಜಗತ್ತಿನ ಹತ್ತಾರು ಕಡೆ ಅಮ್ಮ – ಮಗಳ ಸಂಗೀತ ರಸಧಾರೆ ಶ್ರೋತೃಗಳ ಕಿವಿಗೆ ಇಂಪು ನೀಡಿತ್ತು. ಅಕ್ಟೋಬರ್ 1966ರಲ್ಲಿ ಅಮೆರಿಕದಲ್ಲಿ ಯುನೈಟೆಡ್ ನೇಷನ್ಸ್​ ಆಯೋಜನೆಯ ಕಾರ್ಯಕ್ರಮದಲ್ಲಿ ಎಂ ಎಸ್ ಸುಬ್ಬುಲಕ್ಷ್ಮಿ ಹಾಗೂ ರಾಧಾ ಜೋಡಿ ಅತ್ಯದ್ಭುತ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಸಿಕೊಟ್ಟಿದ್ದು ಭಾರತದ ಚಾರಿತ್ರಿಕ ಮೈಲಿಗಲ್ಲುಗಳಲ್ಲೊಂದು.

ಅಂದು ಸುಬ್ಬುಲಕ್ಷ್ಮಿ ಹಾಡಿದ ಕಂಚಿಯ ಪರಮಾಚಾರ್ಯ ಸ್ವರ ಸಂಯೋಜಿಸಿದ್ದ ಮತ್ರೀಂ ಭಜತಾ, ವಿದೇಶಗಳಲ್ಲಿ ಭಾರತದ ಸಂಗೀತ ಪರಂಪರೆಯ ಲಾಲಿತ್ಯವನ್ನು ಪಸರಿಸುವಂತೆ ಮಾಡಿತ್ತು. ಸ್ಯಾನ್ ಫ್ರಾನ್ಸಿಸ್ಕೋ ಕ್ರಾನಿಕಲ್ ಪತ್ರಿಕೆ ತಾಯಿ ಮಗಳ ಅನನ್ಯ ಸಂಗೀತ ಗಾಯನವನ್ನು ಅದ್ಭುತಗಳ ಸರಣಿ ಅಥವಾ ಎ ಸೀರಿಸ್ ಆಫ್ ಮಿರಾಕಲ್ ಎಂದೇ ಶ್ಲಾಘಿಸಿತ್ತು.

ಇಂದು ಜಗತ್ತಿನಾದ್ಯಂತ ಸಂಗೀತ ಪ್ರೇಮಿಗಳು ಇಷ್ಟಪಟ್ಟು ಕೇಳುವ ವೆಂಕಟೇಶ್ವರ ಸುಪ್ರಭಾತಂ, ವಿಷ್ಣು ಸಹಸ್ರನಾಮಗಳಲ್ಲಿ ಕೇಳಿಸುವ ಸ್ವರಗಳು ಎಂ ಎಸ್ ಸುಬ್ಬುಲಕ್ಷ್ಮಿ ಹಾಗೂ ರಾಧಾ ವಿಶ್ವನಾಥನ್ ಅವರದ್ದು. ರಾಧಾ ಹಾಡಿದ್ದ ಅನ್ನಮಾಚಾರ್ಯ ಧ್ವನಿಮುದ್ರಿಕೆ, ಬಾಲಾಜಿ ಪಂಚರತ್ನಮಾಲಾ 80ರ ದಶಕದಲ್ಲಿ ಸಾಕಷ್ಟು ಜನಪ್ರಿಯಗೊಂಡಿದ್ದಲ್ಲದೆ ದಾಖಲೆಯ ಪ್ರಮಾಣದಲ್ಲಿ ಮಾರಾಟ ಕಂಡಿತ್ತು. ಇದರಿಂದ ಬಂದ ಅಷ್ಟೂ ಹಣವನ್ನು ರಾಧಾ ಸಮಾಜ ಸೇವೆಗಳಿಗೆ ವಿನಿಯೋಗಿಸಿದ್ದರು.

1975ರಲ್ಲಿ ಎಂ ಎಸ್ ಸುಬ್ಬುಲಕ್ಷ್ಮಿಯವರಿಗೆ ರೇಮನ್ ಮ್ಯಾಗ್ಸಸ್ಸೆ ಘೋಷಣೆಯಾದಾಗ ಫಿಲಿಫೈನ್ಸ್​ನ ಮಲಕನಾನ್ ಅರಮನೆಯಲ್ಲಿ, 1977ರ ಅಮೆರಿಕಾ ಪ್ರವಾಸದಲ್ಲಿ ಚೆನ್ನೈ ಹಾಲ್​ನಲ್ಲಿ, ಮಹಾಶಿವರಾತ್ರಿಯ ದಿನ ಕಂಚಿ ಪರಮಾಚಾರ್ಯರ ಪೂಜೆಗೆ ಕೇವಲ ತಂಬೂರಿಯ ನಾದದೊಂದಿಗೆ ಸ್ವರಾರ್ಪಣೆ ಮಾಡಿದ್ದು. ಹೀಗೆ ಪಟ್ಟಿ ಮಾಡುತ್ತಾ ಹೋದರೆ ತಾಯಿ ಮಗಳು ಸೃಷ್ಟಿಸಿದ ಇತಿಹಾಸ ಲೆಕ್ಕವಿಲ್ಲದಷ್ಟು. 1982ರಲ್ಲಿ ಯುನೈಟೆಡ್ ಕಿಂಗ್​ಡಂನ ರಾಯಲ್ ಆಲ್ಬರ್ಟ್ ಹಾಲ್​ನಲ್ಲಿ ಈ ಜೋಡಿ ನಡೆಸಿಕೊಟ್ಟ ಸಂಗೀತ ಕಚೇರಿಯಲ್ಲಿ ಇಂಗ್ಲೆಂಡಿನ ರಾಣಿ 2ನೇ ಎಲಿಜಬೆತ್, ರಾಜಕುಮಾರ ಚಾರ್ಲ್ಸ್ ಹಾಗೂ ಇಂಗ್ಲೆಂಡ್ ಪ್ರಧಾನಿ ಮಾರ್ಗರೇಟ್ ಥ್ಯಾಚರ್ ಜೊತೆ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಹಾಜರಿದ್ದು ಸಂಗೀತದ ಸುಧೆಗೆ ಮನಸೋತಿದ್ದರು.

ಅದೇ ಅವಧಿಯಲ್ಲಿ ಟಿಬಿ ಕಾಯಿಲೆಗೆ ತುತ್ತಾದ ರಾಧಾ ಸುಧಾರಿಸಿಕೊಳ್ಳಲು ವರ್ಷ ಹಿಡಿಯಿತು. ಅದಾದ ನಂತರ 1983ರಿಂದ ಸುಮಾರು 10 ವರ್ಷಗಳ ಕಾಲ ತಾಯಿಯ ಜೊತೆಗೆ ಸಂಗೀತ ಕಚೇರಿಗಳಲ್ಲಿ ಸಾಥ್ ನೀಡಿದ ರಾಧಾ 1992ರಲ್ಲಿ ಮತ್ತೆ ಅನಾರೋಗ್ಯಕ್ಕೆ ತುತ್ತಾದರು. ಅದಾದ ಬಳಿಕ ತಾಯಿಯ ಜೊತೆ ಹಾಡಲು ಸಾಧ್ಯವಾಗದೆ ಕಚೇರಿಗಳಿಗೆ ತೆರಳುವುದನ್ನು ನಿಲ್ಲಿಸಿದರು.

ಸೆಪ್ಟೆಂಬರ್ 16, 2007ರಲ್ಲಿ ಎಂಎಸ್ ಸುಬ್ಬುಲಕ್ಷ್ಮಿಯವರ 91ನೇ ಜನ್ಮಜಯಂತಿಯ ಅಂಗವಾಗಿ ಮೊಮ್ಮಗ ಐಶ್ವರ್ಯಾಳೊಂದಿಗೆ ಹಾಡಿದ ರಾಧಾ, ಆ ಕಚೇರಿಗೆ ವೀಲ್ ಚೇರ್​ನಲ್ಲಿ ಅಗಮಿಸಿದ್ದರು. ಇದಾದ ನಂತರ ರಾಧಾ ಹಾಗೂ ಐಶ್ವರ್ಯಾ ಜೋಡಿ ಸುಮಾರು 20 ಕಚೇರಿಗಳಿಗೆ ಇಟ್ಟಿಗೆ ಹಾಡಿದ್ದರು. 2008ರಲ್ಲಿ ರಾಧಾ ವಿಶ್ವನಾಥನ್ ಅವರಿಗೆ ಲಲಿತಕಲಾ ಅಕಾಡೆಮಿಯ ಸಂಗೀತ ರತ್ನ, 2010ರಲ್ಲಿ ಕ್ಲೇವ್​ಲ್ಯಾಂಡ್ ಆರಾಧನಾ ಅಕಾಡೆಮಿಯ ಕಲಾ ಚಂದ್ರಿಕಾ ಪುರಸ್ಕಾರಗಳು ದೊರೆತಿದ್ದವು. 2016ರಲ್ಲಿ ‘ವೀಣೆ ರಾಜಾರಾವ್‌’ ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.

2004ರಲ್ಲಿ ಎಂಎಸ್ ಸುಬ್ಬುಲಕ್ಷ್ಮಿ ಅವರು ತಮ್ಮ 88 ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ಈಗ 2018 ರಲ್ಲಿ ಪುತ್ರಿ ರಾಧಾ ವಿಶ್ವನಾಥನ್ ಸಹ ಇಹದ ವ್ಯಾಪಾರ ಮುಗಿಸಿದ್ದಾರೆ. ಅಮ್ಮ ಎಂ ಎಸ್ ಸುಬ್ಬುಲಕ್ಷ್ಮಿಯವರಂತೆ, ಮಗಳು ರಾಧಾ ವಿಶ್ವನಾಥನ್ ಅವರೂ ಕೇವಲ ಭೌತಿಕವಾಗಿ ಮರೆಯಾಗಿದ್ದಾರೆ. ಆದರೆ ಅವರ ಸಂಗೀತದ ಸುಧೆಯನ್ನು ಅನುಭವಿಸಿದ ಕೇಳುಗರು ಅವರನ್ನು ಎಂದಿಗೂ ಮರೆಯುವುದಿಲ್ಲ. ವೆಂಕಟೇಶ್ವರ ಸುಪ್ರಭಾತ, ವಿಷ್ಣುಸಹಸ್ರನಾಮ, ಭಜಗೋವಿಂದಂ ಗೀತೆಗಳ ಧ್ವನಿಯಲ್ಲಿ ರಾಧಾ ವಿಶ್ವನಾಥನ್ ಅವರು ಸದಾ ಜೀವಂತವಾಗಿರುತ್ತಾರೆ

ರಾಧಾ ವಿಶ್ವನಾಥನ್, ತಮ್ಮ ತಾಯಿ ಎಂಎಸ್ ಸುಬ್ಬಲಕ್ಷ್ಮಿಯವರಂತೆ ಸಂಗೀತಕ್ಕಾಗಿ ತಮ್ಮ ಇಡೀ ಜೀವವವನ್ನು ಮುಡುಪಿಟ್ಟಿದ್ದವರು. ತಾಯಿಯನ್ನು ಗುರುವನ್ನಾಗಿ, ಆತ್ಮಸಂಗಾತಿಯನ್ನಾಗಿ ಸ್ವೀಕರಿಸಿದ್ದ ಅವರು ತಾಯಿ ಹೋದ ಜಾಗಕ್ಕೆ ತಾಯಿಯನ್ನು ಹುಡುಕಿ ಹೋಗಿದ್ದಾರೆ. ಅವರು ಮತ್ತೆ ಮರಳಿ ಬರಲಾರರು, ಆದರೆ ಆ ಸುಮಧುರ ಸಂಗೀತ ಮಾತ್ರ ಎಂ ಎಸ್​ ಸುಬ್ಬುಲಕ್ಷ್ಮಿಯ ಜೊತೆ ರಾಧಾ ವಿಶ್ವನಾಥನ್​​ರನ್ನು ನೆನಪಿಸುತ್ತವೆ.

ವಿಶ್ವಾಸ್ ಭಾರದ್ವಾಜ್,  ಸುದ್ದಿ ಟಿವಿ

0

Leave a Reply

Your email address will not be published. Required fields are marked *