ಮೌನಕ್ಕೆ ಜಾರಿದ ಮೌನೇಶ್ ಮಂದಹಾಸ ಸದಾ ನೆನಪಿನಲ್ಲುಳಿಯುತ್ತದೆ

ಜೀವ ಪರ ಮತ್ತು ಪ್ರಗತಿ ಪರ ಚಿಂತನೆಯ ಯುವ ಪತ್ರಕರ್ತ, ಕವಿ ಮೌನೇಶ್ ಪೋತರಾಜ್ ಅವರು ಬೈಕ್ ಅಪಘಾತದಲ್ಲಿ ಮಡಿದಿದ್ದಾರೆ. ಕವಿಯಾಗಿದ್ದ ಮೌನೇಶ್, ಅವರನ್ನು ನಾನು ಏನ್ರೀಪಾ? ಎಂದು ಪ್ರಶ್ನಿಸಿದ ಸಂದರ್ಭದಲ್ಲಿ ಅವರ ಮುಖದಲ್ಲಿ ಮೂಡುತ್ತಿದ್ದ ಮಂದಹಾಸ ಇನ್ನೂ ನನ್ನ ಮನಸಿನಲ್ಲಿ ಹಚ್ಚ ಹಸಿರಾಗಿದೆ.

ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಬಂದಾಗ ಬಲವಂತವಾಗಿ ಅವರೇ ನನಗೆ ಎರಡು ಬಾರಿ ಟಿಫನ್ ಕೊಡಿಸಿದ್ದರು. ಉದ್ಯೋಗವನ್ನು ಬದಲಿಸುವ ಅವರ ನಿರ್ಧಾರದ ಕುರಿತು ಹೇಳಿಕೊಂಡಿದ್ದರು. ಈ ನಿರ್ಧಾರದ ಕುರಿತು ಮತ್ತೊಮ್ಮೆ ಆಲೋಚಿಸಿ ಎಂದಿದ್ದೆ. ಕುಟುಂಬದವರಿಂದ ದೂರ ಇರುವ ನನಗೆ, ಅವರ ತುಡಿತ ಅರ್ಥವಾಗಿತ್ತು. ಆದರೆ, ಈಗ ಶೋಕ ಮಾತ್ರ ಅವರ ಕುಟುಂಬದವರಿಗೆ ಉಳಿದಿದೆ. ಕುಟುಂಬದವರೊಂದಿಗೆ ಕಾಲ ಕಳೆಯಬೇಕು ಎಂಬ ಬಯಕೆ ಈಡೇರಲೇ ಇಲ್ಲ.

ಅವರು ಊರಿಗೆ ಹೋಗಿ ಬಂದಾಗಿ ತರುತ್ತಿದ್ದ ಖಡಕ್ ರೊಟ್ಟಿ, ವಿವಿಧ ಚಟ್ನಿಗಳ ರುಚಿ ಉಂಡವನು ನಾನು. ಅವರ ಅಮ್ಮನವರನ್ನು ನಾನು ಅವ್ವಾ ಎಂದೇ ಕರೆದು ಮಾತನಾಡಿಸುತ್ತಿದ್ದ ಕ್ಷಣಗಳು ನೆನಪಾಗುತ್ತಿವೆ. ಇಳಿಗಾಲದಲ್ಲಿ ಅವರ ಪೋಷಕರಿಗೆ ಪುತ್ರ ಶೋಕ ಎದುರಾಗಿದೆ. ದುಃಖವನ್ನು ಎದುರಿಸುವ ಶಕ್ತಿ ಅವರಿಗೆ ಬರಲಿ.

ಅವರೊಂದಿಗೆ ಕಾಲ ಕಳೆದ ಸಮಯದಲ್ಲಿ ಸದಾ ನಮ್ಮ ಮಾತುಕತೆಗಳು, ಸದಾ ಸಾಹಿತ್ಯ, ಸಂಸ್ಕೃತಿ ಸಿನಿಮಾ, ಸಮಕಾಲೀನ ಸಂದರ್ಭದಲ್ಲಿ ಎದುರಾಗುತ್ತಿರುವ ಸವಾಲುಗಳು, ತಲ್ಲಣಗಳು ಮತ್ತು ಆತಂಕಗಳ ಕುರಿತೇ ಕೇಂದ್ರೀಕೃತವಾಗಿರುತ್ತಿತ್ತು. ಅನವಶ್ಯಕ ವಾದ – ವಿವಾದ, ಒಣ ಹರಟೆಗಳಿಗೆ ಅಲ್ಲಿ ಅವಕಾಶವೇ ಇರುತ್ತಿರಲಿಲ್ಲ. ಅಂಬೇಡ್ಕರ್ ಕುರಿತು ಅಪಾರ ಒಲವಿದ್ದ ಮೌನೇಶ್​​ಗೆ ಅವರ ಹೆಸರಿನಲ್ಲೇ ನಡೆಯುತ್ತಿರುವ ಅಪಚಾರಗಳ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದರು.

ಬೆಂಗಳೂರು ಬಿಟ್ಟು ಶಿರಸಿಗೆ ಹೊರಟ ಸಂದರ್ಭದಲ್ಲಿ ಕಡೆಗೂ ನಮ್ಮನ್ನು ಬಿಟ್ಟು ಹೋಗುತ್ತಿದ್ದೀರಾ? ಎಂಬ ಪ್ರಶ್ನೆಗೆ, ಇಲ್ರೀ ಸರ್ರಾ… ನಿಮ್ಮನ್ನೆಲ್ಲ ಬಿಟ್ಟು ಹೋಗಾಕ ಭಾಳ ಸಂಕಟ ಆಕ್ಕೇತಿ. ಆದ್ರ, ಮನೀಗಿ ಹತ್ರಾ ಆಕ್ಕೇತಿ ಅಂಥಾ ಹೊಂಟೀನ್ರೀ ಎಂದ ಮಾತುಗಳು ನೆನಪಾಗುತ್ತಿವೆ.

ಸಿನಿಮಾ ಸಾಹಿತಿಯೂ ಆಗಬೇಕೆಂಬ ಅವರ ಆಸೆ ಕುರಿತು ಕೆಲವೊಮ್ಮೆ ನನ್ನೊಂದಿಗೆ ಅವರು ಮಾತನಾಡಿದ್ದಿದೆ. ಫಿಲ್ಮ್ ಬ್ಯೂರೋದಲ್ಲೇ ಮುಂದುವರೆಯಿರಿ ಎಂದ ಸಂದರ್ಭದಲ್ಲಿ, ಇಲ್ರೀ ಸರ್ರಾ, ಶಿರಸಿಗೆ ಹೋದ್ರ ಮನೀಗೆ ಸ್ವಲ್ಪ ಹತ್ರ ಆಕ್ಕೇತಿ ಅಂದವರು ಈಗ ಬಹುದೂರವಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರೆ ಅವರು ಅವರ ಅದೇ ಹಳೆಯ ಶೈಲಿಯಲ್ಲೇ ನಗುತ್ತಾರೆ ಎಂಬುದಂತೂ ಸತ್ಯ…

ಗೆಳೆಯ ಮೌನೇಶ್ ಪೋತರಾಜ್ ಸಾವು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಈ ಅನುಮಾನಗಳಿಗೆ ನನ್ನ ಅವರ ಒಡನಾಟವೂ ಕಾರಣವಾಗಿರಬಹುದು. ಆದರೆ, ತನಿಖೆ ನಡೆಸುವವರು ಈ ನಿಟ್ಟಿನಿಂದಲೂ ತನಿಖೆ ನಡೆಸಬೇಕಿದೆ. ವ್ಯಕ್ತಿ ಸಾಯುವಷ್ಟು ವೇಗವಾಗಿ ಗುದ್ದಿರುವ ಬೈಕ್ಗೆ ಮೇಜರ್ ಎನಿಸುವ ಡ್ಯಾಮೇಜ್ ಆಗಿಲ್ಲ. ಬೈಕ್ ನಂಬರ್ ಪ್ಲೇಟ್, ಮಡ್ ಗಾರ್ಡ್, ಹಿಂಭಾಗ, ಮುಂಭಾಗ, ಮುಂದಿನ ಚಕ್ರಕ್ಕೆ ಡ್ಯಾಮೇಜ್ ಆಗಿಲ್ಲ. ಮರಕ್ಕೆ ಗುದ್ದಿದ ಗುರುತುಗಳು ಕೂಡ ಕಾಣಿಸುತ್ತಿಲ್ಲ. ಐರನ್ ಬಾಕ್ಸ್ ಯಾರೋ ಇಟ್ಟಂತೆ ಭಾಸವಾಗುತ್ತಿದೆ. ಬೈಕ್ ಸ್ಟಾಂಡ್ ಹಾಕಿರುವಂತೆ ತೋರುತ್ತಿದೆ. ಮರಕ್ಕೆ ಬೈಕ್ ಡಿಕ್ಕಿ ಹೊಡೆದಿರುವುದಕ್ಕೆ ಗಂಭೀರ ಸಾಕ್ಷಿಗಳು ಕಾಣಿಸುತ್ತಿಲ್ಲ. ಹೆಲ್ಮೆಟ್​​ನ ಎಡಭಾಗ ನುಜ್ಜುಗುಜ್ಜಾಗಿದೆ. ಆದರೆ ಮುಖಕ್ಕೆ ಗಾಯವಾಗಿರುವಂತಿದೆ. ರಸ್ತೆಯಿಂದ ಶವ ೧೫ ಅಡಿಗಳಷ್ಟು ದೂರ ಪತ್ತೆಯಾಗಿದೆ. ಆದ್ದರಿಂದ ಈ ಸಾವು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಪ್ರದೀಪ್ ಮಾಲ್ಗುಡಿ, ಹಿರಿಯ ಸಂಪಾದಕ, ಸುದ್ದಿ ಟಿವಿ

1+

Leave a Reply

Your email address will not be published. Required fields are marked *