ಕೇರಳದಾದ್ಯಂತ ನೈಋತ್ಯ ಮುಂಗಾರಿನ ರುದ್ರ ನರ್ತನ

30 ವರ್ಷದ ದಾಖಲೆ ಮುರಿದ ವರುಣ ರಾಯ
ಅಗತ್ಯ ನೆರವಿನ ಭರವಸೆ ನೀಡಿದ ಕೇಂದ್ರ ಸರ್ಕಾರ

ತಿರುವನಂತಪುರ: ಕೇರಳದಲ್ಲಿ ಎರಡು ದಿನಗಳಿಂದ ವರುಣನ ಆರ್ಭಟಕ್ಕೆ 26 ನಾಗರಿಕರು ಬಲಿಯಾಗಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಜನರ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿವೆ. ಭೂಕುಸಿತದಿಂದಾಗಿ 60ಕ್ಕೂ ಹೆಚ್ಚು ನಾಗರಿಕರು ಸಿಲುಕಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ.

ಕೇರಳದಲ್ಲಿ ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಇಡುಕ್ಕಿ ಅಣೆಕಟ್ಟು ಸಂಪೂರ್ಣ ತುಂಬಿದೆ. ಪರಿಯಾರ್ ನದಿಯ ಒಳ ಹರಿವಿನ ಪ್ರಮಾಣ 125 ಕ್ಯೂಸೆಕ್ಸ್​​ ಗೆ ಏರಿದೆ. ನಿರಂತರ ಮಳೆಯಿಂದಾಗಿ ಕ್ರಸ್ಟ್ ಗೇಟ್​ಗಳನ್ನು ತೆರೆದು ನೀರನ್ನು ಹೊರಬಿಡಲಾಗುತ್ತಿದೆ. ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದ್ದು, ಮಳೆ ಪರಿಹಾರಕ್ಕಾಗಿ ಪಿಣರಾಯಿ ವಿಜಯನ್ 5 ಕೋಟಿ ರೂ.ಗಳನ್ನು ಬಿಡಗಡೆ ಮಾಡಿದ್ದಾರೆ. ಇನ್ನು ಎಲ್ಲ ಅಧಿಕೃತ ಕಾರ್ಯಕ್ರಮಗಳನ್ನೂ ರದ್ದುಗೊಳಿಸಿ, ಪರಿಹಾರ ಕಾರ್ಯಗಳಿಗೆ ಒತ್ತು ನೀಡಿದ್ದಾರೆ.

ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮುನ್ನಾರ್ ಪ್ರದೇಶದಲ್ಲಿ ಭೂಕುಸಿತ ಉಂಟಾಗಿದೆ. ಪ್ರವಾಸಿ ತಾಣವಾದ ಮುನ್ನಾರ್ ಸಂಪರ್ಕಿಸುವ ರಸ್ತೆಗಳು ಬಂದ್ ಆಗಿದ್ದು, 60ಕ್ಕೂ ಹೆಚ್ಚು ಪ್ರವಾಸಿಗರು ಸಿಲುಕಿಕೊಂಡಿದ್ದಾರೆ. ಈ ಪೈಕಿ 20 ವಿದೇಶಿಯರೂ ಇದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕೇರಳದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯದಲ್ಲಿ ನಿರತವಾಗಿರುವ ಸೇನೆ, ಹೆಲಿಕಾಪ್ಟರ್ ಮೂಲಕ ಪ್ರವಾಸಿಗರನ್ನು ಸ್ಥಳಾಂತರಿಸುತ್ತಿದೆ. ಕೇರಳದಲ್ಲಿ ಮಳೆ, ಪ್ರವಾಹ, ಭೂಕುಸಿತಕ್ಕೆ ಸಿಲುಕಿ ಇದುವರೆಗೆ 26 ನಾಗರಿಕರು ಬಲಿಯಾಗಿದ್ದಾರೆ.

ಎಡೆಬಿಡದೆ ಸುರಿಯುತ್ತಿರುವ ಮಳೆ ಮತ್ತು ಪ್ರವಾಹದಿಂದಾಗಿ ಹಾನಿಯಾಗಿರುವ ಕೇರಳಕ್ಕೆ ಎಲ್ಲ ಅಗತ್ಯ ರಕ್ಷಣೆ ಹಾಗೂ ಪರಿಹಾರಕ್ಕೆ ನೆರವು ನೀಡುವ ಭರವಸೆಯನ್ನು ಕೇಂದ್ರ ನೀಡಿದೆ. ಗೃಹ ಸಚಿವ ರಾಜನಾಥ್ ಸಿಂಗ್ ಕೇರಳದ ಸಿಎಂ ಪಿಣರಾಯಿ ವಿಜಯನ್ ಅವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ನೆರವಿನ ಭರವಸೆ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು, ಕೇಂದ್ರ ನೀಡಿದ ನೆರವಿನ ಕುರಿತು ಪಿ. ವಿಜಯನ್ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ. ಅಗತ್ಯವಾದ ಎಲ್ಲ ನೆರವನ್ನೂ ನೀಡಲಾಗುವುದು ಎಂದರು.

ನೈಋತ್ಯ ಮುಂಗಾರು ಚುರುಕಾದ ಪರಿಣಾಮದಿಂದಾಗಿ ಕೇರಳದ ಉತ್ತರ ಮತ್ತು ಮಧ್ಯ ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ರಾಜ್ಯದ ಬಹುತೇಕ ಪ್ರದೇಶಗಳು ನೆರೆಪೀಡಿತವಾಗಿವೆ. ಇಡುಕ್ಕಿ ಅಣೆಕಟ್ಟೆಯಿಂದ ನೀರನ್ನು ಹೊರಗೆ ಬಿಡಲಾಗಿದೆ. ಇನ್ನು ಕೇರಳಾದ್ಯಂತ ನಿರಂತರ ಸುರಿದ ಭಾರೀ ಮಳೆಯಿಂದಾಗಿ ಚೇರುತೋನಿ ಅಣೆಕಟ್ಟೆ ತುಂಬಿಹೋಗಿದ್ದು, 5 ಗೇಟ್​ಗಳಿಂದ ನೀರು ಬಿಡುಗಡೆ ಮಾಡಲಾಗಿದೆ. ಚೇರುತೋನಿ ನಗರದಲ್ಲಿದ್ದ ಜನರನ್ನು ಸಂಪೂರ್ಣವಾಗಿ ಅಧಿಕಾರಿಗಳು ಸ್ಥಳಾಂತರಿಸಿದ್ದು, ದಕ್ಷಿಣ – ಉತ್ತರ ಸಂಪರ್ಕಿಸುವ ಸೇತುವೆ ಜಲಾವೃತವಾಗಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *