ಕಾಶ್ಮೀರದಲ್ಲಿ 3 ಪೊಲೀಸರ ಹತ್ಯೆ: 7 ಪೊಲೀಸರ ರಾಜಿನಾಮೆ ವದಂತಿ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಇಂದು ಮುಂಜಾನೆ 3 ಪೊಲೀಸರನ್ನು ಅಪಹರಿಸಿ, ಹತ್ಯೆಗೈಯಲಾಗಿದೆ. ದಕ್ಷಿಣ ಕಾಶ್ಮೀರದ ಶೊಪೇನ್​​ನಲ್ಲಿ ನಡೆದ ಈ ಕೃತ್ಯದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರರ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಕಳೆದ 18ರಂದು ಬಿಎಸ್ಎಫ್ ಯೋಧ ನರೇಂದ್ರ ಸಿಂಗ್ ಅವರನ್ನು ಉಗ್ರರು ಅಪಹರಿಸಿ, ಕತ್ತು ಕೊಯ್ದು ಹತ್ಯೆಗೈದಿದ್ದರು. ಇಂದು ಮತ್ತೊಮ್ಮೆ ಕುಕೃತ್ಯ ಮುಂದುವರೆಸಿದ್ದಾರೆ.

ಪೊಲೀಸರ ಹತ್ಯೆ ಖಂಡಿಸಿರುವ ಮಾಜಿ ಸಿಎಂ ಮೆಹಬೂಬ ಮುಫ್ತಿ, ಮತ್ತೆ ಮೂವರು ಪೊಲೀಸರು ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ. ಆಕ್ರೋಶ, ಆಘಾತ ಮತ್ತು ಖಂಡನೆ ಮೊದಲಾದ ಸಾಲುಗಳು ನಿರೀಕ್ಷಿತ. ದುರಾದೃಷ್ಟಕರ ಸಂಗತಿ ಎಂದರೆ, ಸಾವಿಗೀಡಾದವರ ಕುಟುಂಬದ ಬಲಿಪಶುಗಳಿಗೆ ಇದರಿಂದ ಸಮಾಧಾನ ಸಿಗುವುದಿಲ್ಲ.

ಈ ನಡುವೆ ಪೊಲೀಸರ ಹತ್ಯೆ ವಿಷಯದ ಕುರಿತು ಸಿಟ್ಟಿಗೆದ್ದಿರುವ ಭಾರತ, ಪಾಕಿಸ್ತಾನದ ಜೊತೆಗೆ ನ್ಯೂಯಾರ್ಕ್​​​ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಡೆಯಬೇಕಿದ್ದ ಭಾರತ ಮತ್ತು ಪಾಕಿಸ್ತಾನ ಮಾತುಕತೆಯನ್ನು ಮೊಟಕುಗೊಳಿಸಲು ಮುಂದಾಗಿದೆ. ಈ ಕುರಿತು ಹೇಳಿಕೆ ನೀಡಿದ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್, ಪಾಕ್ ಪ್ರಧಾನಿ ಕಚೇರಿಯಲ್ಲಿ ಕೆಲಸ ಆರಂಭಿಸಿದ ಕೆಲವೇ ಸಮಯದಲ್ಲಿ ಅವರ ಅಜೆಂಡಾದ ನೈಜ ಮುಖ ಅನಾವರಣವಾಗಿದೆ ಎಂದು ಕಿಡಿಕಾರಿದ್ದಾರೆ. ಅಲ್ಲದೇ, ಹಿಜ್ಬುಲ್ ಮುಜಾಹಿದ್ದೀನ್ ಕಮ್ಯಾಂಡರ್​, ಬುರ್ಹಾನ್ ವಾನಿಯನ್ನು ವೈಭವೀಕರಿಸುವ ಸ್ಟಾಂಪ್​ಗಳು ಕಂಡುಬಂದಿವೆ ಈ ಹಿನ್ನೆಲೆಯಲ್ಲಿ ಮಾತುಕತೆ ರದ್ದುಗೊಳಿಸಿರುವುದಾಗಿ ಅವರು ಹೇಳಿದ್ದಾರೆ.

ನಿಸ್ಸಂಶಯವಾಗಿ ಪೊಲೀಸರು ಮತ್ತು ಅವರ ಕುಟುಂಬಸ್ಥರ ಅಪಹರಣ ನಡೆಯುತ್ತಿದೆ. ಕೇಂದ್ರದ ಬಲ ಪ್ರಯೋಗದ ನೀತಿಯಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಮಾತುಕತೆಯೊಂದೇ ಮಾರ್ಗ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ನಡೆಯುತ್ತಿರುವ ಪೊಲೀಸರ, ನಾಗರಿಕರ ಹತ್ಯೆ ತಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದಂತಾಗಿದೆ. ಈ ಮೂಲಕ ಗಡಿಯಾಚೆಗಿನ ಭಯೋತ್ಪಾದನೆ ನಿಯಂತ್ರಿಸುತ್ತೇನೆ ಎನ್ನುವ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ತೀವ್ರ ಮುಖಭಂಗವಾದಂತಾಗಿದೆ.

ಈ ನಡುವೆ ಹಿಜ್ಬುಲ್ ಮುಜಾಹಿದ್ದೀನ್ ಉಗ್ರರ ಬೆದರಿಕೆ ಹಿನ್ನೆಲೆಯಲ್ಲಿ 7 ಪೊಲೀಸರು ರಾಜಿನಾಮೆ ನೀಡಿದ್ದಾರೆ ಎಂದು ವರದಿಯಾಗಿತ್ತು. ಈ ಕುರಿತು ಎರಡು ವಿಡಿಯೋಗಳು ಬಹಿರಂಗವಾಗಿದ್ದು, ಪೊಲೀಸ್ ಕಾನ್ಸ್ಟೇಬಲ್ ಇರ್ಷಾದ್ ಅಹಮದ್ ಬಾಬಾ ಮತ್ತು ಎಸ್​ಪಿಒ ನವಾಜ್ ಅಹಮದ್ ರಾಜಿನಾಮೆ ನೀಡಿರುವುದಾಗಿ ವಿಡಿಯೋಗಳು ಹರಿದಾಡಿದ್ದವು.

ಈ ಕುರಿತು ಸ್ಪಷ್ಟೀಕರಣ ನೀಡಿರುವ ಗೃಹ ಇಲಾಖೆ ಪೊಲೀಸರ ರಾಜಿನಾಮೆ ವದಂತಿಯನ್ನು ನಿರಾಕರಿಸಿದೆ. ರಾಜಿನಾಮೆ ವದಂತಿ ಸುಳ್ಳು ಪ್ರೇರಣೆಯಿಂದ ಕೂಡಿದೆ ಎಂದು ಜಮ್ಮು ಕಾಶ್ಮೀರ ಪೊಲೀಸರಿಂದ ಹೇಳಿದ್ದಾರೆ. ವರದಿಗಳು ಸುಳ್ಳು ಪ್ರಚಾರದ ಕಾರ್ಯ ಎಂದಿರುವ ಗೃಹ ಇಲಾಖೆ, ರಾಜಿನಾಮೆ ವದಂತಿ ದುಷ್ಕರ್ಮಿಗಳ ಕೃತ್ಯ. ಪೊಲೀಸರು ರಾಜಿನಾಮೆ ನೀಡಿಲ್ಲ ಎಂದಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *