ಅಲ್ಪಸಂಖ್ಯಾತರ ದಾಳ ಉರುಳಿಸಲು ಬಿಜೆಪಿ ಸಜ್ಜು: ರಾಜಕೀಯ ಲಾಭಕ್ಕಾಗಿ ಅಲ್ಪ ಸಂಖ್ಯಾತ ಸ್ಥಾನ ದುರುಪಯೋಗ?

ಅಲ್ಪಸಂಖ್ಯಾತ ಸ್ಥಾನ ಕುರಿತ ಪಿಐಎಲ್ ವಜಾ
ಸಂಘ ಪರಿವಾರ ಪ್ರೇರಿತರಿಂದ ಸಲ್ಲಿಕೆಯಾಗಿದ್ದ ಅರ್ಜಿ
ಅಲ್ಪ ಸಂಖ್ಯಾತ ಆಯೋಗದ ಮುಂದೆ ಬಂದಿದೆ ಚೆಂಡು
ಚುನಾವಣಾ ರಾಜಕಾರಣಕ್ಕೆ ಅಲ್ಪಸಂಖ್ಯಾತ ಅಸ್ತ್ರ ಬಳಕೆ ಸಾಧ್ಯತೆ

ದೇಶದ ವಿವಿಧ ರಾಜ್ಯಗಳ 8 ಹಿಂದೂ ಸಮುದಾಯಗಳು ತಮಗೆ ಅಲ್ಪ ಸಂಖ್ಯಾತ ಸ್ಥಾನ ಮಾನ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಈ ಕುರಿತು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗಕ್ಕೆ ಮನವಿ ಮಾಡಿಕೊಳ್ಳುವಂತೆ ನ್ಯಾಯಪೀಠ ಸೂಚಿಸಿದೆ. ಆದರೆ, ಕೇಂದ್ರ ಸರ್ಕಾರದ ಅಧೀನದಲ್ಲಿರುವ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಈ ಕುರಿತು ನಿರ್ಧಾರ ಕೈಗೊಳ್ಳಲು ಅವಕಾಶವಿದೆ. ಇದೇ ನೆಪದಲ್ಲಿ ಹಿಂದೂಗಳಿಗೂ ಅಲ್ಪಸಂಖ್ಯಾತ ಸ್ಥಾನವನ್ನು ಕೇಂದ್ರ ನೀಡುತ್ತಾ ಅನ್ನೋ ಅನುಮಾನ ಮೂಡಿದೆ.

ಜಮ್ಮು ಕಾಶ್ಮೀರ, ಪಂಜಾಬ್, ಲಕ್ಷದ್ವೀಪ, ಮಿಜೋರಾಂ, ನಾಗಾಲ್ಯಾಂಡ್, ಮೇಘಾಲಯ, ಅರುಣಾಚಲ ಪ್ರದೇಶ ಮತ್ತು ಮಣಿಪುರ ರಾಜ್ಯಗಳ ಹಿಂದೂಗಳನ್ನು ಅಲ್ಪಸಂಖ್ಯಾತರೆಂದು ಪರಿಗಣಿಸಿ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್​​ನಲ್ಲಿ ಬಿಜೆಪಿಯ ವಕ್ತಾರ ಮತ್ತು ಇಂಜಿನಿಯರ್ ಆಗಿರುವ ಅಶೋಕ್ ಕುಮಾರ್ ಉಪಾಧ್ಯಾಯ ಸಲ್ಲಿಸಿದ್ದರು. ಈ ಮೂಲಕ ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನ ಕೊಡಿಸುವುದು ಅವರ ಗುರಿಯಾಗಿತ್ತು. ಆದರೆ, ಈ ಮನವಿಯನ್ನು ತಿರಸ್ಕರಿಸಿರುವ ನ್ಯಾಯಪೀಠ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಬಳಿ ಹೋಗಿ ಎಂದಿದೆ. ಸದ್ಯಕ್ಕೆ ದೇಶದಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಖ್ಖರು, ಬೌದ್ಧರು, ಪಾರ್ಸಿಗಳು ಮತ್ತು ಜೈನರು ಅಲ್ಪಸಂಖ್ಯಾತ ಸ್ಥಾನ ಹೊಂದಿದ್ದಾರೆ.

ತಮ್ಮ ಅರ್ಜಿಯ ಪರ ವಾದಿಸಿದ್ದ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ, 8 ರಾಜ್ಯಗಳಲ್ಲಿ ಕನಿಷ್ಠ ಸಂಖ್ಯೆಯಲ್ಲಿರುವವರನ್ನು ಅಲ್ಪಸಂಖ್ಯಾತರು ಎಂದು ವರ್ಗೀಕರಿಸಿಲ್ಲ. ಇದರಿಂದ ಬಹುಸಂಖ್ಯಾತರೇ ಹಕ್ಕನ್ನು ಪಡೆಯುತ್ತಿದ್ದಾರೆ ಎನ್ನುತ್ತಾರೆ. ಕೇಂದ್ರ ಸರ್ಕಾರ ಒಟ್ಟು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಾಗಿ ಒಟ್ಟು 20,000 ಶಿಷ್ಯವೇತನವನ್ನು ನೀಡುತ್ತಿದೆ. ಆದರೆ, ಯಾವೊಬ್ಬ ಅಲ್ಪಸಂಖ್ಯಾತ ಹಿಂದೂಗೂ ಇದರ ಪ್ರಯೋಜನ ಸಿಗುತ್ತಿಲ್ಲ. ಶಿಷ್ಯ ವೇತನ ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದೆ ಎಂದು ಅವರು ವಾದಿಸುತ್ತಾರೆ.

ರಾಜ್ಯ ಹಿಂದೂಗಳ ಪ್ರಮಾಣ

ಲಕ್ಷದ್ವೀಪ ಶೇ.2.5
ಮಿಜೋರಾಂ ಶೇ. 2.75
ನಾಗಾಲ್ಯಾಂಡ್​ ಶೇ.8.75
ಮೇಘಾಲಯ ಶೇ.11.53
ಜಮ್ಮು – ಕಾಶ್ಮೀರ ಶೇ.28.44
ಅರುಣಾಚಲ ಪ್ರದೇಶ ಶೇ. 29
ಮಣಿಪುರ ಶೇ. 31.39
ಪಂಜಾಬ್ ಶೇ. 38.40

ಸಂಘ ಪರಿವಾರದ ಒತ್ತಡಕ್ಕೆ ಕಾರಣವಾಗಿರುವುದು 2011ರ ಜನಗಣತಿಯ ಅಂಕಿ ಅಂಶ. ಅದರ ಪ್ರಕಾರ, ಲಕ್ಷದ್ವೀಪದಲ್ಲಿ ಶೇ.2.5, ಮಿಜೋರಾಂನಲ್ಲಿ ಶೇ. 2.75, ನಾಗಾಲ್ಯಾಂಡ್​ನಲ್ಲಿ ಶೇ.8.75, ಮೇಘಾಲಯದಲ್ಲಿ ಶೇ.11.53, ಜಮ್ಮು ಕಾಶ್ಮೀರದಲ್ಲಿ ಶೇ.28.44, ಅರುಣಾಚಲ ಪ್ರದೇಶದಲ್ಲಿ ಶೇ. 29, ಮಣಿಪುರದಲ್ಲಿ 31.39 ಮತ್ತು ಪಂಜಾಬ್​ನಲ್ಲಿ ಶೇ. 38.40ರಷ್ಟು ಮಾತ್ರ ಹಿಂದೂಗಳಿದ್ದಾರೆ.

ರಾಜ್ಯಗಳಲ್ಲಿ ಮುಸ್ಲಿಮರ ಪ್ರಮಾಣ

ರಾಜ್ಯ                          ಪ್ರಮಾಣ

ಲಕ್ಷದ್ವೀಪ                     ಶೇ. 96.20

ಜಮ್ಮು ಕಾಶ್ಮೀರ             ಶೇ. 68.30

ಅಸ್ಸಾಂ                       ಶೇ. 34.20

ಪಶ್ಚಿಮ ಬಂಗಾಳ            ಶೇ. 27.5

ಕೇರಳ                        ಶೇ. 26.60

ಉತ್ತರಪ್ರದೇಶ              ಶೇ. 19.30

ಬಿಹಾರ                       ಶೇ. 18

ಇನ್ನು ಲಕ್ಷದ್ವೀಪದಲ್ಲಿ ಶೇ. 96.20, ಜಮ್ಮು ಕಾಶ್ಮೀರದಲ್ಲಿ ಶೇ. 68.30, ಅಸ್ಸಾಂನಲ್ಲಿ ಶೇ. 34.20, ಪಶ್ಚಿಮ ಬಂಗಾಳದಲ್ಲಿ ಶೇ. 27.5, ಕೇರಳದಲ್ಲಿ ಶೇ. 26.60, ಉತ್ತರಪ್ರದೇಶದಲ್ಲಿ ಶೇ. 19.30 ಮತ್ತು ಬಿಹಾರದಲ್ಲಿ ಶೇ. 18ರಷ್ಟು ಮುಸ್ಲಿಮರಿದ್ದಾರೆ. ಈ ಎಲ್ಲ ಅಂಕಿ ಅಂಶಗಳನ್ನು ದೂರುದಾರರು ಕೋರ್ಟ್​​ ಮುಂದೆ ಇಡಲು ಯತ್ನಿಸಿದ್ದರು. ಬಹುಸಂಖ್ಯಾತರಾಗಿದ್ದರೂ ಮುಸಲ್ಮಾನರು ಅಲ್ಪಸಂಖ್ಯಾತರ ಲಾಭ ಪಡೆಯುತ್ತಿದ್ದಾರೆ ಎನ್ನುವುದು ಸಂಘ ಪರಿವಾರದ ಒಟ್ಟಾರೆ ವಾದದ ಸಾರಾಂಶ.

ಇನ್ನು ಕೇಂದ್ರ ಸರ್ಕಾರ ಕೂಡ ಅಲ್ಪಸಂಖ್ಯಾತರ ಸ್ಥಾನವನ್ನು ಹಿಂದೂಗಳಿಗೆ ನೀಡಲು ಮುಂದಾಗುವ ಸಾಧ್ಯತೆ ಇದೆ. 2019ರ ಲೋಕಸಭೆ ಚುನಾವಣೆಯಲ್ಲಿ ಇದೇ ವಿಷಯವನ್ನು ತನ್ನ ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳಲು ಸರ್ಕಾರ ಬಳಸಿಕೊಳ್ಳಬಹುದು. ಈ ಮೂಲಕ ರಾಜಕೀಯ ಲಾಭಕ್ಕೆ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ದುರುಪಯೋಗವಾಗುವ ಸಾಧ್ಯತೆ ಕೂಡ ಇದೆ.

ಪ್ರದೀಪ್ ಮಾಲ್ಗುಡಿ ಹಿರಿಯ ಉಪಸಂಪಾದಕ ಸುದ್ದಿ ಟಿವಿ

0

Leave a Reply

Your email address will not be published. Required fields are marked *