ಜಾರ್ಖಂಡ್​​ನಲ್ಲಿ ದನ ಕಳ್ಳ ಸಾಗಣೆ ಆರೋಪದಡಿ ಇಬ್ಬರ ಹತ್ಯೆ

ರಾಂಚಿ: ಜಾರ್ಖಂಡ್​​ನಲ್ಲಿ ಇಬ್ಬರು ಮುಸ್ಲಿಮರನ್ನು ದನ ಕಳ್ಳತನದ ಆರೋಪದ ಮೇಲೆ ಹತ್ಯೆಗೈಯಲಾಗಿದೆ. ಜಾರ್ಖಂಡ್​​ನಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದು, ನಿನ್ನೆ ಬೆಳಿಗ್ಗೆ ಗೋರಕ್ಷಕರು ದನ ಕಳ್ಳತನದ ಆರೋಪ ಹೊರಿಸಿ ಇಬ್ಬರನ್ನು ಕೊಂದುಹಾಕಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಜಾರ್ಖಂಡ್ ಐಜಿಪಿ ಆಶೀಶ್ ಬಾತ್ರ, ಇಬ್ಬರು ವ್ಯಕ್ತಿಗಳನ್ನು ಎಮ್ಮೆಗಳನ್ನು ಕದ್ದು ಸಾಗಿಸುತ್ತಿದ್ದ ವೇಳೆ ಸ್ಥಳೀಯರು ಹತ್ಯೆಗೈದಿದ್ದಾರೆ. ಈ ಕುರಿತು ಪೊಲೀಸರಿಗೆ ಮಾಹಿತಿ ಸಿಗುವ ಹೊತ್ತಿಗೆ ಆರೋಪಿಗಳು ಸಾವಿಗೀಡಾಗಿದ್ದರು. 4 ಪ್ರಮುಖ ಆರೋಪಿಗಳನ್ನು ಬಂಧಿಸಿ, ಸೆರೆಮನೆಗೆ ಕಳುಹಿಸಲಾಗಿದೆ ಎಂದಿದ್ದಾರೆ.

ಘಟನೆ ನಡೆದ 3 ಗಂಟೆಯ ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಈ ವೇಳೆಗಾಗಲೇ ಸಿರಾಜುದ್ದೀನ್ ಅನ್ಸಾರಿ ಅಲಿಯಾಸ್ ಚಕ್ರು(45), ಮುರ್ತಾಜಾ ಅನ್ಸಾರಿ(40) ಸಾವಿಗೀಡಾಗಿದ್ದರು. ಈ ಸಂಬಂಧ ಎಮ್ಮೆಗಳ ಕಳ್ಳತನ ಮತ್ತು ಹತ್ಯೆ ಸಂಬಂಧ ಎಫ್​ಐಆರ್ ದಾಖಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಗೊಡ್ಡಾ ಎಸ್​​ಪಿ ರಾಜೀವ್ ರಂಜನ್ ಸಿಂಗ್, ಹತ್ಯೆಗೆ ಕೋಮುಗಲಭೆಯ ಬಣ್ಣ ಹಚ್ಚುವುದರ ವಿರುದ್ಧ ಎಚ್ಚರಿಕೆ ನೀಡಿದ್ದಾರೆ.

ಅಲ್ಲದೇ, ಈ ಕುರಿತು ಸಾರ್ವಜನಿಕವಾಗಿ ದನ ಸಾಗಣೆ ಕುರಿತ ಸಿಟ್ಟಿನಿಂದ ಹತ್ಯೆಗಳು ನಡೆದಿವೆ ಎಂದಿದ್ದಾರೆ. ಈ ಹಿಂದೆ ಚಕ್ರು ದನ ಕದ್ದ ಆರೋಪದಡಿ ಸೆರೆವಾಸ ಅನುಭವಿಸಿದ್ದ. ಕೋಪಗೊಂಡಿದ್ದ ಜನ ಇಬ್ಬರನ್ನೂ ಹಲ್ಲೆಗೈದು ಹತ್ಯೆಗೈದಿದ್ದಾರೆ ಎಂದಿದ್ದಾರೆ.

ಜಾರ್ಖಂಡ್​​ನಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ 12 ವರ್ಷದ ಬಾಲಕ ಸೇರಿ ಒಟ್ಟು 7 ಜನರನ್ನು ದನ ಸಾಗಣೆ ಆರೋಪಗಳಿಗೆ ಸಂಬಂಧಿಸಿದಂತೆ ಹತ್ಯೆಗೈಯಲಾಗಿದೆ. ಮಾಂಸ ವ್ಯಾಪಾರಿ ಅಲೀಮುದ್ದೀನ್ ಅನ್ಸಾರಿ ಹತ್ಯೆಯಲ್ಲಿ 11 ಜನ ಆರೋಪಿಗಳ ಪೈಕಿ ಜಿಲ್ಲಾ ಬಿಜೆಪಿ ನಾಯಕ ಕೂಡ ದೋಷಿ ಎಂದು ಸಾಬೀತಾಗಿದೆ. ಮಾಂಸ ವ್ಯಾಪಾರಿಯನ್ನು ರಾಮಘರ್​​ನಲ್ಲಿ ಗೋರಕ್ಷಕರು ಮಾರ್ಚ್, 29, 2017ರಂದು ಹತ್ಯೆಗೈದಿದ್ದರು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *