ಇರಾನ್ – ಇರಾಕ್ ಗಡಿಯಲ್ಲಿ ಪ್ರಬಲ ಭೂಕಂಪ: 145 ಬಲಿ, 850 ಜನರಿಗೆ ಗಾಯ

ಟರ್ಕಿ: ಇರಾನ್ – ಇರಾಕ್ ಗಡಿ ಪ್ರದೇಶದಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ ಕನಿಷ್ಠ 145 ನಾಗರಿಕರು ಸಾವಿಗೀಡಾಗಿದ್ದಾರೆ. ಭೂಕಂಪದ ತೀವ್ರತೆ 7.3 ಎಂದು ಭೂಗರ್ಭ ಇಲಾಖೆ ಹೇಳಿದೆ. ಇದರ ಕೇಂದ್ರ ಪೂರ್ವ ಇರಾಕಿನ ಹಲಬ್ಜಾದಲ್ಲಿದೆ ಎಂದು ಕೂಡ ಹೇಳಿದೆ. ಇನ್ನು ಭೂಕಂಪ ಅವಘಡಕ್ಕೆ 850ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಇರಾಕಿನ ಬಹುತೇಕ ನಗರಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಉಭಯ ದೇಶಗಳ ನಾಗರಿಕರು ರಸ್ತೆ, ಉದ್ಯಾನವನದಲ್ಲಿ ಬೀಡುಬಿಟ್ಟಿದ್ದಾರೆ. ನಿನ್ನೆ ರಾತ್ರಿ ಸಂಭವಿಸಿದ ದುರಂತದ ನಂತರ ವಿದ್ಯುತ್ ಕಡಿತಗೊಂಡ ಪರಿಣಾಮದಿಂದಾಗಿ ಸಕಾಲಿಕವಾಗಿವಾಗಿ ರಕ್ಷಣಾ ಕಾರ್ಯ ನಡೆಸಲು ಕೂಡ ಅಡ್ಡಿಯಾಗಿದೆ. ಕತ್ತಲಿನ ಕಾರಣದಿಂದಾಗಿ ಹೆಲಿಕಾಪ್ಟರ್​ಗಳು ಕಾರ್ಯನಿರ್ವಹಿಸಲು ವಿಫಲವಾಗಿವೆ. ಇದರಿಂದಾಗಿ ಸಾವಿನ ಪ್ರಮಾಣ ಏರಿಕೆಯಾಗಿದೆ. ಇರಾನಿನ ಸೇನೆಯನ್ನು ತುರ್ತು ಸೇವೆಗಾಗಿ ನಿಯೋಜಿಸಲಾಗಿದೆ.

ದರ್ಬಂದಿಖಾನ್ ನಗರದಲ್ಲಿ ಆಸ್ಪತ್ರೆಯಲ್ಲೇ 30 ನಾಗರಿಕರು ಗಾಯಗೊಂಡಿದ್ದಾರೆ. ಭೂಕಂಪಕ್ಕೆ ಜಿಲ್ಲಾ ಆಸ್ಪತ್ರೆ ಧ್ವಂಸಗೊಂಡಿದೆ. ಅಲ್ಲದೇ, ವಿದ್ಯುತ್ ಸಂಪರ್ಕ ಕೂಡ ಕಡಿತಗೊಂಡಿದೆ. ಇಲ್ಲಿ ಗಾಯಗೊಂಡವರನ್ನು ಸುಲೈಮನಿಯಾಹ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಬಹುತೇಕ ಮನೆಗಳು ಕುಸಿದುಬಿದ್ದಿವೆ ಎಂದು ವರದಿಯಾಗಿದೆ. ಇನ್ನು ವಿದ್ಯುತ್ ಶಾರ್ಟ್​ ಸರ್ಕ್ಯೂಟ್ ಕಾರಣಕ್ಕೆ 12 ವರ್ಷದ ಬಾಲಕನೊಬ್ಬ ಬಲಿಯಾಗಿದ್ದಾನೆ.

ಟರ್ಕಿಯ ದಿಯಾರ್​ಬಕಿರ್​​ ದಕ್ಷಿಣ ನಗರದಲ್ಲಿ ಕೂಡ ಪ್ರಬಲ ಭೂಕಂಪ ಸಂಭವಿಸಿದ್ದು, ಸಾವು ನೋವಿನ ಕುರಿತು ವರದಿಯಾಗಿಲ್ಲ. ಭೂಕಂಪ ಸಂಭವಿಸಿದ ತಕ್ಷಣ ಕಾರ್ಯಾಚರಣೆಗೆ ಇಳಿದ ಅಧಿಕಾರಿಗಳು 3,000 ಟೆಂಟ್​ಗಳು, 10,000 ಹಾಸಿಗೆಗಳು ಮತ್ತು ಹೊದಿಕೆಗಳನ್ನು ಇರಾಕಿನ ಗಡಿಗೆ ಕಳುಹಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಕಳೆದ ಡಿಸೆಂಬರ್ 26ರಂದು ಬಾಮ್ ನಗರದಲ್ಲಿ ನಡೆದಿದ್ದ ಪ್ರಬಲ ಭೂಕಂಪಕ್ಕೆ 31,000 ನಾಗರಿಕರು ಬಲಿಯಾದ ದುರ್ಘಟನೆ ನಡೆದಿತ್ತು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *